ಸೋಮವಾರಪೇಟೆ, ಜ. ೧೪: ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದ ದುದ್ದುಗಲ್ಲಿನಲ್ಲಿರುವ ಕಾಫಿ ತೋಟದ ಮನೆಯಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ಅಡ್ಡೆಯ ಮೇಲೆ ಧಾಳಿ ನಡೆಸಿದ ಸೋಮವಾರಪೇಟೆ ಪೊಲೀಸರ ಕಾರ್ಯಾಚರಣೆಯಲ್ಲಿ ಓರ್ವ ಅಂದರ್ ಆಗಿದ್ದು, ೮ ಮಂದಿ ಬಾಹರ್ ಆಗಿರುವ ಘಟನೆ ನಡೆದಿದೆ.

ಹಾನಗಲ್ಲು ಗ್ರಾಮದ ದುದ್ದುಗಲ್ಲಿ ನಲ್ಲಿರುವ ರಿಚರ್ಡ್ ಗೋನ್ಸಾಲ್‌ವೆಸ್ ಎಂಬವರಿಗೆ ಸೇರಿದ ತೋಟದ ಮನೆಯಲ್ಲಿ ಅಕ್ರಮವಾಗಿ ಇಸ್ಪೀಟ್ ಅಂದರ್ ಬಾಹರ್ ಆಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸ್ಥಳದಲ್ಲೇ ಸಿಕ್ಕಿಬಿದ್ದರೆ, ಉಳಿದ ೮ ಮಂದಿ ತೋಟದೊಳಗೆ ಓಡಿ ಪರಾರಿಯಾದರು.

ಅಂದರ್ ಬಾಹರ್ ಆಟಕ್ಕೆ ಬಳಸುತ್ತಿದ್ದ ಇಸ್ಪೀಟ್ ಎಲೆಗಳ ಸಹಿತ ರೂ. ೨ ಸಾವಿರ ನಗದು ಹಾಗೂ ಆರೋಪಿಗಳ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಸ್ಥಳದಲ್ಲಿದ್ದ ರೂ. ೧೦ ಲಕ್ಷ ಮೌಲ್ಯದ ೪ ಕಾರುಗಳು, ೨ ಬೈಕ್‌ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಕಾರ್ಯಾ ಚರಣೆ ಸಂದರ್ಭ ತೋಟದೊಳಗೆ ಓಡಿ ‘ಬಾಹರ್’ ಆಗಿದ್ದ ೮ ಮಂದಿಯನ್ನು ನಂತರ ಪೊಲೀಸ್ ಠಾಣೆಗೆ ಕರೆತಂದಿದ್ದು, ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್‌ಐ ಸುರೇಶ್, ಮುಖ್ಯಪೇದೆಗಳಾದ ನವೀನ್, ರಮೇಶ್, ಶಶಿಧರ್, ಅನಂತ್, ಚಾಲಕ ನದಾಫ್ ಅವರುಗಳು ಪಾಲ್ಗೊಂಡಿದ್ದರು. ಅಕ್ರಮ ಚಟುವಟಿಕೆಗಳು, ಜೂಜು ಅಡ್ಡೆಯ ಬಗ್ಗೆ ಮಾಹಿತಿಯಿದ್ದಲ್ಲಿ ಸಾರ್ವಜನಿಕರು ಸೋಮವಾರಪೇಟೆ ಪೊಲೀಸ್ ಠಾಣೆ ದೂರವಾಣಿ ೦೮೨೭೬ ೨೮೨೦೪೦ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ.