ಮಡಿಕೇರಿ, ಜ. ೧೪: ಅಂತರರಾಷ್ಟಿçÃಯ ಸೇವಾ ಸಂಸ್ಥೆಯಾದ ರೋಟರಿಯು ಮಹಿಳೆಯರಿಗೆ ಆದ್ಯತೆ ನೀಡಿದ್ದು, ರೋಟರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದಸ್ಯೆಯರಾಗಿ ಸೇರ್ಪಡೆ ಯಾಗುತ್ತಿರುವುದು ಮಹತ್ವದ ವಿಚಾರವಾಗಿದೆ ಎಂದು ರೋಟರಿ ಜಿಲ್ಲೆ ೩೧೮೧ನ ಗವರ್ನರ್ ಪ್ರಕಾಶ್ ಕಾರಂತ್ ಶ್ಲಾಘಿಸಿದ್ದಾರೆ.
ಮಡಿಕೇರಿ ರೋಟರಿ ವುಡ್ಸ್ಗೆ ಅಧಿಕೃತ ಭೇಟಿ ನೀಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಪರಿಪೂರ್ಣತೆಯತ್ತ ಸಾಗಲು ಕಾಲದಿಂದ ಕಾಲಕ್ಕೆ ಬದಲಾವಣೆ ಅಗತ್ಯ. ರೋಟರಿಯು ಸದಾ ಬದಲಾವಣೆಗೆ ಒಗ್ಗುತ್ತಾ, ಅಂಥ ಬದಲಾವಣೆಗಳಿಗೆ ತಕ್ಕಂತೆ ತನ್ನ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ. ಮಹಿಳಾ ಸದಸ್ಯರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡುತ್ತಾ ಮಹಿಳೆಯರಿಗೂ ಸೂಕ್ತ ಅವಕಾಶ ಕಲ್ಪಿಸುತ್ತಾ ಬಂದಿರುವ ರೋಟರಿಗೆ ೧೧೭ ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಈ ವರ್ಷ ಜೆನಿಫರ್ ಜೋನ್ಸ್ ಎಂಬ ಮಹಿಳೆಯೇ ಅಂತರರಾಷ್ಟ್ರೀಯ ಅಧ್ಯಕ್ಷೆಯಾಗಿ ನೇಮಕವಾಗಿ ಅತ್ಯಂತ ಸಶಕ್ತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಮತ್ತು ಹೆಮ್ಮೆಯ ವಿಚಾರ. ಮಹಿಳೆಯರ ಸಮಾನ ಹಕ್ಕುಗಳಿಗೆ ರೋಟರಿಯು ಮನ್ನಣೆ ನೀಡಿದೆ. ಶೇ.೩೦ ರಷ್ಟು ಮಹಿಳಾ ಸದಸ್ಯೆಯರನ್ನು ಪ್ರತೀ ರೋಟರಿ ಸಂಸ್ಥೆಗಳೂ ಸೇರ್ಪಡೆಗೊಳಿಸುವ ಹೊಣೆಗಾರಿಕೆ ಹೊಂದಿದೆ, ರೋಟರಿಯಂಥ ಸಾಮಾಜಿಕ ಸೇವಾ ಸಂಸ್ಥೆಗೆ ಸೇರ್ಪಡೆಯಾಗಲು ಮಹಿಳೆಯರೂ ಮುಂದೆ ಬರಬೇಕು ಎಂದು ಕಾರಂತ್ ಕರೆ ನೀಡಿದರು.
ಮಡಿಕೇರಿಯಲ್ಲಿ ೩ನೇ ಸಂಸ್ಥೆಯಾಗಿ, ರೋಟರಿ ವಲಯ ೬ರಲ್ಲಿ ೧೪ನೇ ಕ್ಲಬ್ ಆಗಿ ಪ್ರಾರಂಭವಾದ ರೋಟರಿ ವುಡ್ಸ್ ಕಳೆದ ೭ ತಿಂಗಳಲ್ಲಿ ಬೇರೆ ಯಾವುದೇ ಹಳೇ ಸಂಸ್ಥೆಗಳಿಗೆ ಕಡಿಮೆಯಿಲ್ಲದಂತೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದರು.
ರೋಟರಿ ವಲಯ ೬ರ ಸಹಾಯಕ ಗವರ್ನರ್ ರತನ್ ತಮ್ಮಯ್ಯ ಮಾತನಾಡಿ, ರೋಟರಿ ವುಡ್ಸ್ನ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರಲ್ಲದೇ ಈ ವರ್ಷದ ರೋಟರಿಯ ಜಿಲ್ಲಾ ಯೋಜನೆಗಳಾದ ವನಸಿರಿ, ಆರೋಗ್ಯ ಸಿರಿ, ಜಲಸಿರಿ, ವಿದ್ಯಾಸಿರಿಗಳನ್ನು ಯಶಸ್ವಿಯಾಗಿ ರೋಟರಿ ವುಡ್ಸ್ ಅಳವಡಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಮಾತನಾಡಿ, ಮಡಿಕೇರಿಯಲ್ಲಿ ೩ನೇ ರೋಟರಿ ಸಂಸ್ಥೆಯಾಗಿ ಉದಯಿಸಿದ ರೋಟರಿ ವುಡ್ಸ್ ಸದಸ್ಯರೆಲ್ಲರ ಸಹಕಾರದೊಂದಿಗೆ ಅನೇಕ ಜನೋಪಯೋಗಿ ಯೋಜನೆಗಳನ್ನು ಕೈಗೊಂಡಿದ್ದು ಆರೋಗ್ಯ ಸಂಬAಧಿತ ಚಟುವಟಿಕೆಗಳಿಗೆ ಆದ್ಯತೆ ನೀಡಿದೆ ಎಂದು ಮಾಹಿತಿ ನೀಡಿದರು.
ರೋಟರಿ ವಲಯ ಸೇನಾನಿ ಎನ್.ಡಿ. ಅಚ್ಚಯ್ಯ, ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್ ವೇದಿಕೆಯಲ್ಲಿದ್ದರು.
ರೋಟರಿ ವುಡ್ಸ್ ಮಡಿಕೇರಿ ವತಿಯಿಂದ ಸೇವಾ ಸಾಧನೆಗಾಗಿ ಮಡಿಕೇರಿಯ ಹಿರಿಯ ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ಮತ್ತು ತೋಟಗಾರಿಕೆ ಇಲಾಖಾಧಿಕಾರಿ ಪ್ರಮೋದ್ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ರತನ್, ವಲಯ ಸೇನಾವಿ ಅಚ್ಚಯ್ಯ, ರೋಟರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್, ಕಾರ್ಯದರ್ಶಿ ವಸಂತ್ ಕುಮಾರ್ ಗೌರವ ನೆರವೇರಿಸಿದರು.