ಮಡಿಕೇರಿ, ಜ. ೧೩: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯರವ ಯುವ ಒಕ್ಕೂಟದ ವತಿಯಿಂದ ತಾ. ೨೬ ರಂದು ಗೋಣಿಕೊಪ್ಪದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಚೀನಿದುಡಿ ಸಹಿತವಾಗಿ ಅರೆಬೆತ್ತಲೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಒಕ್ಕೂಟದ ಪ್ರಮುಖರಾದ ವೈ.ಸಿ. ಶಂಕರ್, ವೈ.ಎಂ. ಸಿದ್ದ, ಪಿ.ಎಸ್. ಮುತ್ತ ಮತ್ತಿತರರು ಮಾಹಿತಿ ನೀಡಿದ್ದಾರೆ.
ಬೇಡಿಕೆಗಳು: ಯರವರನ್ನು ಮೂಲ ನಿವಾಸಿಗಳೆಂದು ಘೋಷಣೆ ಮಾಡಬೇಕು, ಯರವ ವಿದ್ಯಾವಂತ ಯುವಕರು ಮತ್ತು ಯುವತಿಯರಿಗೆ ಜಿಲ್ಲಾಡಳಿತ ನೇರ ನೇಮಕಾತಿ ಮಾಡುವ ಮೂಲಕ ಉದ್ಯೋಗ ನೀಡಬೇಕು. ನಿಗಮ ಮಂಡಳಿಯವರು ಸ್ವಯಂ ಉದ್ಯೋಗ ನಡೆಸಲು ಗೂಡ್ಸ್ ವಾಹನಕ್ಕೆ ಬ್ಯಾಂಕ್ಗಳ ಸಹಯೋಗದಲ್ಲಿ ಆರ್ಥಿಕ ಸಹಾಯ ನೀಡಿದರೂ ಎದುರಾಗುತ್ತಿರುವ ಸಮಸ್ಯೆ ಸರಿಪಡಿಸಬೇಕು.
ಕೊಡಗಿನಲ್ಲಿ ಬಹುರಾಷ್ಟಿçÃಯ ಕಂಪನಿಗಳಿಗೆ ೯೯ ವರ್ಷಕ್ಕೆ ಗೇಣಿ ನೀಡಿರುವ ಸರ್ಕಾರಿ ಜಮೀನು ಸ್ವಾಧೀನ ಪಡೆದು ಯರವ ಕುಟುಂಬಗಳಿಗೆ ತಲಾ ೫ ಎಕರೆ ಭೂಮಿ ನೀಡಲು ಕ್ರಮವಹಿಸಬೇಕು. ಯರವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು, ಯರವರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.