ಮಡಿಕೇರಿ, ಜ. ೧೩: ಗೌಡ ಜನಾಂಗ ಬಾಂಧವರು ನಮ್ಮ ಹುಟ್ಟು ಭಾಷೆಯಾದ ಅರೆಭಾಷೆಯನ್ನು ಮರೆಯಬಾರದು ಎಂದು ನಿವೃತ್ತ ಮುಖ್ಯ ಶಿಕ್ಷಕಿ ಕೊಂಬಾರನ ಕುಂತಿ ಬೋಪಯ್ಯ ಹೇಳಿದರು.
ಮಡಿಕೇರಿ ನಗರದ ದೇಚೂರು, ಚೈನ್‌ಗೇಟ್, ಗೌಡಸಮಾಜದ ಕೆಳಭಾಗ, ಖಾಸಗಿ ಬಸ್ ನಿಲ್ದಾಣ, ಜ.ತಿಮ್ಮಯ್ಯ ಮತ್ತು ಸುದರ್ಶನ ವೃತ್ತವನ್ನು ಒಳಗೊಂಡAತೆ ರಚಿಸಲಾಗಿರುವ ಸುದರ್ಶನ ಗೌಡ ಕೂಟದ ೧೪ನೇ ವಾರ್ಷಿಕ ಸಭೆ ಹಾಗೂ ಸಾಂಸ್ಕೃತಿಕ ಸಂತೋಷ ಕೂಟ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರೂ ಒಟ್ಟು ಸೇರಿದಾಗ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಬಹುದಾಗಿದೆ. ನಮ್ಮಲ್ಲಿರುವ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಕೂಡ ಒಂದು ಅವಕಾಶವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸ್ವಾಗತ, ವರದಿ ವಾಚನವನ್ನು ಕನ್ನಡದಲ್ಲಿ ಮಾಡಿದನ್ನು ಉಲ್ಲೇಖಿಸಿ ಮಾತನಾಡಿದ ಅವರು; ಹುಟ್ಟು ಭಾಷೆಯನ್ನು ದಿನ ನಿತ್ಯ ಬಳಕೆ ಮಾಡಬೇಕು, ವ್ಯವಹಾರಕ್ಕಾಗಿ ಕನ್ನಡವನ್ನು ಬಳಕೆ ಮಾಡಬೇಕು. ನಮ್ಮ ಭಾಷೆಯನ್ನು ಬಿಡಬಾರದು. ಪ್ರಸ್ತುತ ಮೊಬೈಲ್ ಗೀಳು ಹೆಚ್ಚಾಗಿದ್ದು, ಪೋಷಕರು ಈ ಬಗ್ಗೆ ಗಮನ ಹರಿಸಿ ಮಕ್ಕಳಲ್ಲಿ ನಮ್ಮ ಭಾಷೆ, ಸಂಸ್ಕೃತಿಯ ಅರಿವು ಮೂಡಿಸಬೇಕು. ಪುಸ್ತಕ ಓದುವ ಹವ್ಯಾಸ ಬೆಳೆಸಬೇಕೆಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ನಗರದ ಎಲ್ಲ ಐದು ಕೂಟಗಳು ಸೇರಿಕೊಂಡು ಒಂದೇ ವೇದಿಕೆಯಡಿ ಕಾರ್ಯಕ್ರಮ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಧ್ಯಕ್ಷರುಗಳನ್ನು ಒಟ್ಟುಗೂಡಿಸಿ ಪ್ರಯತ್ನಿಸಬೇಕಿದೆ, ಎಲ್ಲ ಜನಾಂಗದವರು ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಯಾರನ್ನೂ ಕೂಡ ಕೀಳಾಗಿ ಕಾಣದೆ ಗೌರವಿಸಬೇಕೆಂದು ಹೇಳಿದರು.
ಅರೆಭಾಷೆಯನ್ನು ಮಾತನಾಡು ವವರು ಕೊಡಗು ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ಎಲ್ಲರೂ ಕನ್ನಡಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ, ಅರೆಭಾಷೆ ಮಾತನಾಡಿದರೆ ಹಳ್ಳಿಯವರು ಎಂಬ ಅಭಿಮಾನ ಶೂನ್ಯತೆ ನಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಮಕ್ಕಳ ತಜ್ಞ ಹಾಗೂ ಸಾಹಿತಿ ಮೇ., ಡಾ. ಕುಶ್ವಂತ್ ಕೋಳಿಬೈಲು ಹೇಳಿದರು. ನಮ್ಮ ಮನೆಯಲ್ಲಿ ನಮ್ಮ ಭಾಷೆ ಮಾತನಾಡಬೇಕು, ಮಕ್ಕಳಿಗೆ ಕಲಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಭಾಷೆ ಮೇಲಿನ ಅಭಿಮಾನ ಕಡಿಮೆಯಾಗಬಾರದು, ಅಭಿಮಾನ, ಆತ್ಮವಿಶ್ವಾಸದಿಂದ ಮಾತನಾಡದಿದ್ದಲ್ಲಿ ಮುಂದಿನ ೨೦-೩೦ ವರ್ಷದಲ್ಲಿ ಅರೆಭಾಷೆ ಮಾತನಾಡುವವರು ಯಾರೂ ಇರುವದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ನಾವು ಯಾರು., ನಮ್ಮ ಪರಂಪರೆ ಏನೆಂಬದನ್ನು ತಿಳಿದುಕೊಳ್ಳಬೇಕು, ಹೊಸ ತಲೆಮಾರಿಗೆ ಇತಿಹಾಸ ಗೊತ್ತಿಲ್ಲ, ನಮಗೆ ಪರಂಪರೆ ಇದೆ ಎಂದು ತಿಳಿಯಪಡಿಸಬೇಕು. ಗೌಡ ಜನಾಂಗದವರು, ಮುಗ್ಧರು, ಕೃಷಿಯನ್ನೇ ನಂಬಿಕೊAಡಿರುವವರು. ಹಾಗಾಗಿ ಆಸ್ತಿ ಮಾರಾಟ ಮಾಡುವದಿಲ್ಲ, ನಮಗೆ ಈ ಮಣ್ಣಿನ ಮೇಲೆ ಪ್ರೀತಿ ಇದೆ. ಆಸ್ತಿ ಮಾರಾಟ ಮಾಡಿದರೆ ನಮ್ಮ ಪರಂಪರೆ ಇರುವದಿಲ್ಲ ಎಂದು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.
ಕೃಷಿ ಮಾಡುವದರೊಂದಿಗೆ ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ವ್ಯವಸ್ಥೆ ಕೂಡ ಇಂದಿನ ದಿನಗಳಲ್ಲಿ ಅನಿವಾರ್ಯ ವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಯಾರೂ ಕೂಡ ಹಿಂದೆ ಬೀಳಬಾರದು. ಇನ್ನು ಸರಕಾರಿ ಕೆಲಸ ಸಿಗುವುದಿಲ್ಲ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುಂದುವರಿ ಯಬೇಕು, ನಮ್ಮ ಶಕ್ತಿಯನ್ನು ತೋರ್ಪಡಿಸಬೇಕು, ಪ್ರತಿಭೆಗಳನ್ನು ಬೆಳೆಸಬೇಕೆಂದು ಯುವ ಪೀಳಿಗೆಗೆ ಸಲಹೆ ಮಾಡಿದರು. ಮತ್ತೋರ್ವ ಮಕ್ಕಳ ತಜ್ಞೆ ಡಾ. ರೇಣುಕಾ ಸುಧಾಕರ್ ಮಾತನಾಡಿ; ನಮ್ಮ ಆಚಾರ, ವಿಚಾರ, ಪದ್ಧತಿಗಳನ್ನು ಆಚರಿಸಿಕೊಂಡು ಬೆಳೆಸಿಕೊಂಡು ಹೋಗುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆಯನ್ನು ಒಗ್ಗೂಡಿಸಿ ಮಾರ್ಗದರ್ಶನ ನೀಡುವದು ಅತ್ಯವಶ್ಯವಾಗಿದೆ. ಹಾಗೆಯೇ ಆರೋಗ್ಯದ ಮೇಲೆಯೂ ಗಮನ ಹರಿಸಬೇಕು, ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕೂಟದ ಸದಸ್ಯರುಗಳು ಹಾಗೂ ಕುಟುಂಬದವರಿಗೆ ಮನರಂಜನಾ ಕ್ರಿಡಾಕೂಟ ಏರ್ಪಡಿಸಲಾಗಿತ್ತು. ಮಕ್ಕಳು ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕೂಟದ ಅಧ್ಯಕ್ಷ ಬಳಪದ ಮಂದಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಆಧ್ಯಕ್ಷ ತಳೂರು ಆನಂದ, ನಡುಮನೆ ಕಾರ್ಯಪ್ಪ, ಕಾನೆಹಿತ್ಲು ಕೇಶವ, ಕೂಡಕಂಡಿ ಕಾವೇರಮ್ಮ ಸೋಮಣ್ಣ ಇನ್ನಿತರರಿದ್ದರು. ಪೂಜಾರೀರ ಪುಷ್ಪ ಹಾಗೂ ದೇವಜನ ಮೋಹನ್ ವರದಿ ವಾಚನ ಮಾಡಿದರೆ, ಖಜಾಂಚಿ ಮೇರ್ಕಜೆ ಬೋಪಯ್ಯ ಲೆಕ್ಕಪತ್ರ ಮಂಡಿಸಿದರು.