ವಾಸು ಎ.ಎನ್.

ಸಿದ್ದಾಪುರ, ಜ. ೧೩: ಆನೆ ಸೆರೆ ಕಾರ್ಯಾಚರಣೆ ಸಂದರ್ಭ ಎತ್ತರದ ಜಾಗದಿಂದ ಕೆಳಕ್ಕೆ ಉರುಳಿ ಬಿದ್ದು, ಕಾಡಾನೆಯೊಂದು (೨೦) ಸಾವನ್ನಪ್ಪಿರುವ ಘಟನೆ ಚೆಟ್ಟಳ್ಳಿ ಸಮೀಪದ ಅತ್ತೂರು - ನಲ್ಲೂರು ಗ್ರಾಮದಲ್ಲಿ ನಡೆದಿದೆ.

ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅತ್ತೂರು, ನಲ್ಲೂರು, ಮೋದೂರು ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಾ ಉಪಟಳ ನೀಡುತ್ತಿದ್ದ ಸಲಗವೊಂದನ್ನು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಾಗ ಅರವಳಿಕೆ ನೀಡಲಾಗಿದೆ. ಬಳಿಕ ಓಡಿದ ಸಲಗವು ಎತ್ತರದ ಜಾಗದ ಮೇಲ್ಭಾಗದಿಂದ ಅಂದಾಜು ೩೦ ಅಡಿಗಳಷ್ಟು ಕೆಳಕ್ಕೆ ಇರುವ ಸಿಮೆಂಟ್ ಕಣಕ್ಕೆ ಬಿದ್ದು, ಸಾವನ್ನಪ್ಪಿದೆ.

ಅತ್ತೂರು-ನಲ್ಲೂರು ಭಾಗದಲ್ಲಿ ಉಪಟಳ ನೀಡುತ್ತಿದ್ದ ಈ ಸಲಗವನ್ನು ಸೆರೆ ಹಿಡಿಯಲು ಸಾಕಾನೆಗಳಾದ ಪ್ರಶಾಂತ, ಸುಗ್ರೀವ, ವಿಕ್ರಂ, ಹರ್ಷ, ಈಶ್ವರ, ಶ್ರೀರಾಂ, ಸಹಕಾರದಿಂದ ಅರಣ್ಯ ಅಧಿಕಾರಿಗಳು ಹಾಗೂ ೫೦ ಮಂದಿ ಸಿಬ್ಬಂದಿಗಳು ಶುಕ್ರವಾರದಂದು ಬೆಳಗ್ಗಿನ ಜಾವದಿಂದಲೇ ಕಾರ್ಯಾಚರಣೆ ಕೈಗೊಂಡರು. ಈ ಸಂದರ್ಭ ಸಲಗವನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರವಳಿಕೆ ತಜ್ಞ ಡಾ. ರಮೇಶ್ ಅವರು ಅರವಳಿಕೆ ಚುಚ್ಚು ಮದ್ದನ್ನು ಸಲಗಕ್ಕೆ ಪ್ರಯೋಗಿಸಿದರು. ಚುಚ್ಚು ಮದ್ದು ತಗುಲಿದ ಸಲಗವು ಓಡುವ ಸಂದರ್ಭ ಅತ್ತೂರು-ನಲ್ಲೂರು ಗ್ರಾಮದ ಖಾಸಗಿ ಕಾಫಿ ತೋಟವೊಂದರ ಗುಂಡಿಗೆ ಬಿದ್ದು ನಂತರ ಅಂದಾಜು ೩೦ ಅಡಿಗಳ ಸಿಮೆಂಟ್ ಅಂಗಳಕ್ಕೆ ಬಿದ್ದ ಪರಿಣಾಮ ಗಾಯಗಳಾಗಿ ಮೃತಪಟ್ಟಿದೆ. ಸಾವನ್ನಪ್ಪಿದ ಸಲಗದ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲೇ ಮಾಡಲಾಗಿದ್ದು, ವರದಿ ನಿರೀಕ್ಷೆಯಲ್ಲಿದೆ.

ಜಿಲ್ಲೆಯಲ್ಲಿ ಉಪಟಳ ನೀಡುತ್ತಿರುವ ೪ ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿದ ಹಿನ್ನೆಲೆ ಇತ್ತೀಚೆಗೆ ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಸಲಗ ವೊಂದನ್ನು ಸೆರೆ ಹಿಡಿಯಲಾಗಿತ್ತು. ಇದಾದ ನಂತರ ಇದೀಗ ಮತ್ತೊಂದು ಸಲಗವನ್ನು ಸೆರೆ ಹಿಡಿಯುವ ಸಂದರ್ಭ ಸಲಗವು ಮೃತಪಟ್ಟಿರುವುದು ದುರದೃಷ್ಟಕರವಾಗಿದೆ. ಸಲಗವು ಸಾವನ್ನಪ್ಪಿದ ಸ್ಥಳಕ್ಕೆ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್ ಮೂರ್ತಿ, ಮಡಿಕೇರಿ ಉಪವಲಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಎ.ಸಿ.ಎಫ್ ಎ.ಎ ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಂ, ಉಪ ವಲಯಾ ರಣ್ಯಾಧಿಕಾರಿ ಕನ್ನಂಡ ರಂಜನ್, ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ. ರಮೇಶ್, ಡಾ. ಚಿಟ್ಟಿಯಪ್ಪ ಹಾಜರಿದ್ದರು.