ಕುಶಾಲನಗರ, ಜ. ೧೩: ದುಬಾರೆ ಸಾಕಾನೆ ಶಿಬಿರಕ್ಕೆ ಮತ್ತೆ ಕಾಡಾನೆ ದಾಳಿ ಮಾಡಿ ಮತ್ತೊಂದು ಸಾಕಾನೆಯನ್ನು ಗಾಯಗೊಳಿಸಿದ ಪ್ರಕರಣ ಗುರುವಾರ ಮಧ್ಯರಾತ್ರಿ ನಡೆದಿದೆ.

ಶಿಬಿರದ ಪ್ರವಾಸಿ ಮಂದಿರ ಬಳಿ ಕಟ್ಟಿಹಾಕಿದ್ದ ಕರ್ಣ (೨೩) ಸಾಕಾನೆ ಮೇಲೆ ದಾಳಿ ಮಾಡಿದ್ದು, ಅಲ್ಪ ಸ್ವಲ್ಪ ಗಾಯಗಳಾಗಿವೆ ಎಂದು ಶಿಬಿರದ ಅಧಿಕಾರಿಗಳು ತಿಳಿಸಿದ್ದಾರೆ. ಶಿಬಿರದಲ್ಲಿ ೨ ದಿನಗಳ ಹಿಂದೆ ಗೋಪಿ ಆನೆ ಮೇಲೆ ಕಾಡಾನೆಯಿಂದ ದಾಳಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿಗಳು ಕಾವಲು ಕಾಯುತ್ತಿದ್ದು, ಈ ವೇಳೆ ಶಿಬಿರದ ಆನೆಗಳ ಘೀಳು ಕೇಳಿ ತಕ್ಷಣ ಪಟಾಕಿ ಸಿಡಿಸುವುದರೊಂದಿಗೆ ಆನೆಗಳನ್ನು ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ೨ ದಿನಗಳ ಹಿಂದೆ ದಾಳಿ ಮಾಡಿದ ಕಾಡಾನೆ ಮತ್ತೆ ಬಂದಿರುವುದಾಗಿ ಶಿಬಿರದ ಅಧಿಕಾರಿ ಕನ್ನಂಡ ರಂಜನ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡು ದುಬಾರೆ ಶಿಬಿರದಲ್ಲಿ ಆರ್‌ಆರ್‌ಟಿ ತಂಡ ಸೇರಿದಂತೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಕಾಡಾನೆಗಳು ನುಗ್ಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದಿದ್ದಾರೆ.