ಸಿದ್ದಾಪುರ, ಜ. ೧೩: ವಿದೇಶಕ್ಕೆ ಮನೆ ಕೆಲಸಕ್ಕೆಂದು ತೆರಳಿದ ಜಿಲ್ಲೆಯ ಮಹಿಳೆಯೋರ್ವಳು ವಿಸಾ ದ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೆಲಸವು ಇಲ್ಲದೇ ವಿದೇಶದಲ್ಲಿ ಸಿಲುಕಿಕೊಂಡು ದಿನದೂಡುತ್ತಿರುವ ಪ್ರಸಂಗ ಎದುರಾಗಿದೆ.
ಕೊಡಗು ಜಿಲ್ಲೆಯ ಸಿದ್ದಾಪುರದ ಕರಡಿಗೋಡು ಗ್ರಾಮದ ಕಾಫಿ ತೋಟವೊಂದರ ಲೈನ್ಮನೆಯಲ್ಲಿ ತನ್ನ ತಾಯಿ ಹಾಗೂ ೨ ಮಕ್ಕಳೊಂದಿಗೆ ವಾಸವಿದ್ದ ಮಹಿಳೆ ಪಾರ್ವತಿ (೩೦) ಎಂಬಾಕೆ ಕುವೈತ್ ರಾಷ್ಟçದಲ್ಲಿ ಸಿಲುಕಿಕೊಂಡು ತವರು ಊರಿಗೆ ಬರಲು ಪರದಾಡುತ್ತಿದ್ದಾರೆ. ಪಾರ್ವತಿ ವಿವಾಹವಾಗಿ ತನ್ನ ಎರಡು ಪುಟ್ಟ ಮಕ್ಕಳೊಂದಿಗೆ ಕರಡಿಗೋಡುವಿನ ಕಾಫಿ ತೋಟದ ಲೈನ್ಮನೆಯಲ್ಲಿ ತನ್ನ ತಾಯಿಯೊಂದಿಗೆ ವಾಸ ಮಾಡಿಕೊಂಡಿದ್ದರು. ಕಳೆದ ೩ ವರ್ಷಗಳ ಹಿಂದೆ ಈಕೆಯ ಪತಿ ಈಕೆಯನ್ನು ತೊರೆದಿದ್ದಾನೆ.
ಇದಾದ ನಂತರ ಈಕೆ ತನ್ನ ಹಾಗೂ ೨ ಮಕ್ಕಳ ಜೀವನಕ್ಕಾಗಿ ಮಕ್ಕಳನ್ನು ತಾಯಿಯ ಬಳಿ ಬಿಟ್ಟು ಕೇರಳ ರಾಜ್ಯದ ತಲಚೇರಿಯಲ್ಲಿ ಮನೆ ಕೆಲಸ (ಹೋಂ ನರ್ಸ್)ಕ್ಕೆ ಸೇರಿದ್ದರು. ಈ ಸಂದರ್ಭದಲ್ಲಿ ಕಳೆದ ೪ ತಿಂಗಳ ಹಿಂದೆ ಈಕೆಗೆ ಊಟಿಯ ಮಹಿಳೆಯೋರ್ವಳ ಪರಿಚಯವಾಗಿದೆ. ಊಟಿಯ ಏಜೆಂಟ್ ಹನೀಫ ಎಂಬಾತನನ್ನು ಪರಿಚಯ ಮಾಡಿಸಿಕೊಟ್ಟ ಊಟಿಯ ಮಹಿಳೆ ಪಾರ್ವತಿಯನ್ನು ಕುವೈತ್ ರಾಷ್ಟçಕ್ಕೆ ಮನೆ ಕೆಲಸಕ್ಕಾಗಿ ಪಾಸ್ಪೋರ್ಟ್ ಹಾಗೂ ವಿಸಾ ಮಾಡಿಸಲಾಗಿದೆ.