ಕುಶಾಲನಗರ, ಜ. ೧೩: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕುಶಾಲನಗರ ಪುರಸಭೆಯ ಬೈಚನಹಳ್ಳಿ ಜಮೀನೊಂದರ ದಾಖಲೆ ಸರಿಪಡಿಸುವ ಬಗ್ಗೆ ಚರ್ಚಿಸಲು ಮುಖ್ಯಾಧಿಕಾರಿ ಶಿವಪ್ಪ ನಾಯ್ಕ್ ಅವರ ಹುಣಸೂರಿನ ನಿವಾಸಕ್ಕೆ ತೆರಳಿದ ಕುಶಾಲನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಶಿವಪ್ಪನಾಯ್ಕ್ ಅವರ ಕೈ, ಕಾಲು ಮತ್ತಿತರ ಭಾಗಕ್ಕೆ ಪೆಟ್ಟಾಗಿದ್ದು, ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಕುಶಾಲನಗರ ಪುರಸಭೆ ವ್ಯಾಪ್ತಿಯ ಒಂದನೇ ಬ್ಲಾಕ್ ಬೈಚನಹಳ್ಳಿಯ ಬಿ.ಎಂ. ರಸ್ತೆ ಸರ್ವೆ ನಂ.೧೧೫ ಮತ್ತು ೧೪೫ ರ ಸ್ವತ್ತನ್ನು ಅನಧಿಕೃತದಿಂದ ಅಧಿಕೃತವಾಗಿ ಮಾಡಿಕೊಡುವ ಬಗ್ಗೆ ಮುಖ್ಯಾಧಿಕಾರಿಗೆ ಒತ್ತಡ ಹೇರಿದ ರಿಯಲ್ ಎಸ್ಟೇಟ್ ಉದ್ಯಮಿ ಅಧಿಕಾರಿ ಒಪ್ಪದೇ ಇದ್ದ ಸಂದರ್ಭ ಹಲ್ಲೆ ನಡೆಸಿ ಪರಾರಿಯಾಗಿ ರುವುದಾಗಿ ತಿಳಿದು ಬಂದಿದೆ.
(ಮೊದಲ ಪುಟದಿಂದ) ಘಟನೆಯ ಮಾಹಿತಿ ತಿಳಿದ ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ್, ಸದಸ್ಯರಾದ ಪ್ರಮೋದ್ ಮುತ್ತಪ್ಪ ಸೇರಿದಂತೆ ಜನಪ್ರತಿನಿಧಿಗಳು, ಸಿಬ್ಬಂದಿಗಳು ಹಲ್ಲೆಗೊಳಗಾದ ಮುಖ್ಯಾಧಿಕಾರಿ ಶಿವಪ್ಪ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ಅಧಿಕಾರಿಯ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮುಖ್ಯಾಧಿಕಾರಿ ಶಿವಪ್ಪ ನಾಯ್ಕ್ ಅವರು ಇತ್ತೀಚೆಗಷ್ಟೇ ವರ್ಗಾವಣೆಗೊಂಡು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. -ಸಿಂಚು