ಅನಿಲ್ ಎಚ್.ಟಿ.
ಮಡಿಕೇರಿ, ಜ. ೧೨: ಹೆಜ್ಜೆ ತಪ್ಪಲಿಲ್ಲ.. ಗೆಜ್ಜೆಯ ಲಯ ತಪ್ಪಲಿಲ್ಲ.. ನಿನಾದ ಕೇಳಿಸದೇ ಇದ್ದರೂ ಹಾವಭಾವ ಮಿಸ್ ಮಾಡಿಕೊಳ್ಳಲೇ ಇಲ್ಲ..
ಆ ಚಿಣ್ಣರ ಶೃಂಗಾರಕ್ಕೆ ಕೊರತೆ ಇರಲಿಲ್ಲ..ಸಂಭ್ರಮಕ್ಕAತೂ ಮೇರೆಯೇ ಇರಲಿಲ್ಲ..
ವೇದಿಕೆಯಲ್ಲಿ ಪುಟಾಣಿಗಳು ಹಾಡಿಕುಣಿದು ಸಡಗರಿಸುತ್ತಿದ್ದಂತೆಯೇ ಎದುರಿದ್ದ ನೂರಾರು ಪ್ರೇಕ್ಷಕರಲ್ಲಿ ಕಣ್ಣೀರ ಧಾರೆ..
ಯಾಕೆಂದರೆ ಈ ಮಕ್ಕಳು ಇತರ ಮಕ್ಕಳಂತೆ ಇಲ್ಲದ ವಿಶೇಷ ಮಕ್ಕಳು..
ಕೆಲವರಿಗೆ ಕಿವಿ ಕೇಳುತ್ತಿರಲಿಲ್ಲ. ಕೆಲವರಿಗೆ ಮಾತೇ ಬರುತ್ತಿರಲಿಲ್ಲ. ಹಲವರಿಗೆ ಅಂಗಾAಗ ನೂನ್ಯತೆ..
ಇವಾವುದನ್ನೂ ಲೆಕ್ಕಿಸದೆ ಈ ಮಕ್ಕಳು ತಮ್ಮ ಪಾಡಿಗೆ ತಾವು ಮನಪೂರ್ವಕವಾಗಿ ನರ್ತಿಸಿದರು...
ಇಂಥ ಮನಕಲಕುವ ದೃಶ್ಯಕ್ಕೆ ಸಾಕ್ಷಿಯಾದದ್ದು ಸುಂಟಿಕೊಪ್ಪ ಬಳಿಯ ಸ್ವಸ್ವ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ೧೦೫ ವಿಶೇಷಚೇತನ ಮಕ್ಕಳು.
ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ೧೦ನೇ ವಾರ್ಷಿಕೋತ್ಸವದಂದು ವಿಶೇಷ ಚೇತನ ಮಕ್ಕಳು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಂಗೊಳಿಸಿದರು. ಭಾರತದ ಏಕತೆ ಸಾರುವ ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿದರು. ಕಾಶ್ಮೀರದ ಸಾಂಪ್ರದಾಯಿಕ ನೃತ್ಯದಿಂದ ಕೇರಳದ ಕಳರಿ ಪಯಟ್ ಸಮರಕಲೆಯ ಪ್ರದರ್ಶನದವರೆಗೂ ತಮ್ಮ ಪ್ರತಿಭೆ ತೋರಿದರು. ಕರ್ನಾಟಕದ ವೀರಗಾಸೆ, ಕರ್ನಾಟಕದ ವೈಭವ ಸಾರುವ ನೃತ್ಯ ಪ್ರಾಕಾರ, ತುಳುನಾಡಿನ ಸಂಸ್ಕೃತಿ ಸಾರುವ ನೃತ್ಯ, ಗುಜರಾತಿನ ಜನಪದ, ತುಳುನಾಡಿನ ಕಾವಾಡಿ ನೃತ್ಯ, ವೇದಿಕೆಗೆ ದೋಣಿಯ ಮಾದರಿ ತಂದು ಚಲಿಸುವ ದೋಣಿಯಲ್ಲಿಯೇ ಮೀನು ಹಿಡಿದು ನರ್ತಿಸಿದ ವಿಶೇಷತೆಗೂ ಮಕ್ಕಳು ಸಾಕ್ಷಿಯಾದರು. ಬಾ..ಬಾ. ನಂಗಡ ನಾಡ್‌ಕ್ .. ಕೊಡಗ್ ನಾಡ್‌ಕ್ ಎಂದೂ ಎಲ್ಲರನ್ನೂ ಕೊಡವ ಸಾಂಪ್ರದಾಯಿಕ ಧಿರಿಸು ಧರಿಸಿದ ಮಕ್ಕಳು ಸ್ವಾಗತಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟçಗೀತೆಯನ್ನು ತಮ್ಮದೇ ಶೈಲಿಯಲ್ಲಿ ಹಾವಭಾವಗಳೊಂದಿಗೆ ಪ್ರಸ್ತುತಪಡಿಸಿದ ಮಕ್ಕಳು ಜೈ ಹಿಂದ್ ಹೇಳಿದಾಗ ಪ್ರೇಕ್ಷಕ ಸಮೂಹ ಎದ್ದು ನಿಂತು ಮಕ್ಕಳ ಪ್ರತಿಭೆಗೆ ಗೌರವ ಸಲ್ಲಿಸಿತು.
ಭಾರತದ ಮಹಾನ್ ವ್ಯಕ್ತಿಗಳ ವೇಷಧರಿಸಿದ ಮಕ್ಕಳು ಗಮನ ಸೆಳೆದರೆ, ಜೀಜಿಂಬೆ ಜಿಜೀಂಬೆ .. ಬಾ ನನ್ನ ಜತೆಗೆ ಎಂಬ ಭಾವಪೂರ್ಣ ಹಾಡಿನಲ್ಲಿ ವೈವಿಧ್ಯಮಯ ವೇಷಧÀರಿಸಿದ ಮಕ್ಕಳು ಮುಖ್ಯವಾಹಿನಿಯಲ್ಲಿನ ಮಕ್ಕಳಿಗೆ ತಾವೇನು ಕಮ್ಮಿಯಿಲ್ಲದಂತೆ ಸಭಿಕರನ್ನು ತಮ್ಮೊಂದಿಗೆ ಹಷ೯ದ ಬಾನಂಗಣದಲ್ಲಿ ತೇಲಿಸುವಲ್ಲಿ ಯಶಸ್ವಿಯಾದರು. ವಿಶೇತ ಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ ಎಂಬುದನ್ನು ಸ್ವಸ್ಥ ಕೇಂದ್ರದ ಮಕ್ಕಳು ಮತ್ತೊಮ್ಮೆ ನಿರೂಪಿಸಿದರು.
ವಿಶೇಷಚೇತನರಾಗಿದ್ದರೂ ತಮ್ಮ ಮಕ್ಕಳು ಇಷ್ಟೊಂದು ಮುದ್ದು ಮುದ್ದಾಗಿ, ಸುಂದರವಾಗಿ ವೇದಿಕೆಯಲ್ಲಿ ಹಾಡಿಕುಣಿಯುವದನ್ನು ನೋಡಿ ಪೋಷಕರು ಭಾವುಕರಾಗಿ ಧನ್ಯತಾ ಭಾವ ತಳೆದರು. ವಿಶೇಷ ಪ್ರತಿಭಾವಂತ ಮಕ್ಕಳನ್ನು ಸಾಂಸ್ಕೃತಿಕ ನೃತ್ಯಕ್ಕೆ ತಾವು ತೆರೆ ಮರೆಯಲ್ಲೇ ಇದ್ದು ಸಜ್ಜುಗೊಳ್ಳುವ ಕೇಂದ್ರದ ಶಿಕ್ಷಕ ವೃಂದ ಅಪಾರ ಪ್ರಶಂಸೆಗೆ ಪಾತ್ರವಾಯಿತು.
ಬೆರಗು ಮೂಡಿಸುವ ಪ್ರತಿಭೆ - ಎ.ಎಸ್. ಮುತ್ತಣ್ಣ
ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ೧೦ ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಕೂರ್ಗ್ ಫೌಂಡೇಷನ್ ಟ್ರಸ್ಟಿ ಎ.ಎಸ್. ಮುತ್ತಣ್ಣ, ಸ್ವಸ್ಥ ಕೇಂದ್ರವು ಸಾವಿರಾರು ವಿಶೇಷಚೇತನ ಮಕ್ಕಳಿಗೆ ಆಸರೆಯಾಗಿದೆ. ಟಾಟಾ ಸಂಸ್ಥೆಯ ಪ್ರಮುಖರಾಗಿದ್ದ ದರ್ಬಾರಿ ಸೇಥ್ ಕೊಡಗಿಗೆ ಬಂದ ಸಂದರ್ಭ ನೀಡಿದ್ದ ರೂ. ೫ ಕೋಟಿ ಅನುದಾನದಲ್ಲಿ ಕೂರ್ಗ್ ಫೌಂಡೇಶನ್‌ಗೆ ಚಾಲನೆ ದೊರಕಿ ಕೂರ್ಗ್ ಫೌಂಡೇಶನ್ ಮೂಲಕ ಸ್ವಸ್ಥ ಕೇಂದ್ರ ಉದಯವಾಯಿತು. ಕೇಂದ್ರದ ಮಕ್ಕಳ ವಿಶೇಷ ಪ್ರತಿಭೆ ನಿಜಕ್ಕೂ ಬೆರಗುಗೊಳಿಸುವಂಥದ್ದು. ಇಲ್ಲಿನ ಪ್ರಸ್ತುತ ಇರುವ ೧೧೦ ಮಕ್ಕಳನ್ನು ಪರಿಪೂರ್ಣವಾಗಿ ಗಮನಿಸಿ ಅವರಲ್ಲಿನ ಪ್ರತಿಭೆ ಬೆಳಕಿಗೆ ತರುವಲ್ಲಿ ಈ ಕೇಂದ್ರದ ಪ್ರತೀಯೋರ್ವ ಸಿಬ್ಬಂದಿಯ ಪರಿಶ್ರಮ ಶ್ಲಾಘನೀಯ ಎಂದರು.
ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ಸ್ಥಾಪಕ ನಿರ್ದೇಶಕಿ, ಕೂರ್ಗ್ ಫೌಂಡೇಶನ್ ಟ್ರಸ್ಟಿ ಕಾಕಾಮಾಡ ಗಂಗಾ ಚಂಗಪ್ಪ ಮಾತನಾಡಿ, ದರ್ಬಾರಿ ಸೇಥ್ ಪರಿಕಲ್ಪನೆಯಲ್ಲಿ ಕೇರಳದ ಮುನ್ನಾರ್, ಮಲ್ಪಾರೆ ಹಾಗೂ ಕೊಡಗಿನಲ್ಲಿ ವಿಶೇಷಚೇತನ ಮಕ್ಕಳಿಗಾಗಿ ಸುಂಟಿಕೊಪ್ಪ ಬಳಿ ಈ ಕೇಂದ್ರ ಪ್ರಾರಂಭವಾಯಿತು. ಟಾಟಾ ಸಂಸ್ಥೆಯ ಮತ್ತೋರ್ವ ಪ್ರಮುಖ ಆರ್.ಕೆ. ಕೃಷ್ಣಕುಮಾರ್ ಅವರು ಕೂಡ ಕೇಂದ್ರದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ಹಾಲಿ ಮುಖ್ಯಸ್ಥೆ ತೇಲಪಂಡ ಆರತಿ ಸೋಮಯ್ಯ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸ್ವಸ್ಥ ಕೇಂದ್ರದ ಮಕ್ಕಳು ಸಕ್ರಿಯರಾಗಿದ್ದು ಮಕ್ಕಳಿಂದ ತಯಾರಾದ ೩೫ ಸಾವಿರಕ್ಕೂ ಅಧಿಕ ಮಾಸ್ಕ್ಗಳು ಕೊಡಗಿನ ಆರೋಗ್ಯ ಕೇಂದ್ರಗಳಿಗೆ ತಲುಪಿದೆ. ಕೋವಿಡ್ ನಿರೋಧಕ ಲಸಿಕೆ ಹಾಕುವಲ್ಲಿಯೂ ಸ್ವಸ್ಥ ಸಿಬ್ಬಂದಿಗಳು ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು. ೫೦ ಪೆಟ್ಟಿಗೆಗಳನ್ನು ಹೊಂದುವ ಮೂಲಕ ಜೇನು ಉತ್ಪಾದನೆಯಲ್ಲಿಯೂ ಸ್ವಸ್ಥ ಕೇಂದ್ರವು ಸಬಲತೆ ಸಾಧಿಸಿದೆ ಎಂದು ಹೆಮ್ಮೆಯಿಂದ ಹೇಳಿದ ಆರತಿ, ೩ ವರ್ಷಗಳ ಹಿಂದೆ ಕಲಾತರಬೇತುದಾರ ರಾಮ್ ಗೌತಮ್ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಕಲಾವಿಭಾಗದಲ್ಲಿ ತಯಾರಿಸಲ್ಪಟ್ಟ ವೈವಿಧ್ಯಮಯ ಕಲಾ ಉತ್ಪನ್ನಗಳು ಇದೀಗ ರಾಷ್ಟçಮಟ್ಟದಲ್ಲಿಯೇ ಅತ್ಯಧಿಕ ಬೇಡಿಕೆ ಗಳಿಸಿದೆ. ಕೇಂದ್ರದಲ್ಲಿ ತಯಾರಿಸಲ್ಪಟ್ಟ ೭೭ ಸಾವಿರದಷ್ಟು ಬ್ಯಾಗ್‌ಗಳು ಮಾರಾಟವಾಗಿದ್ದು, ಇದರೊಂದಿಗೆ ೭ ಸಾವಿರ ಕಲಾಕೃತಿಗಳ ಮಾರಾಟದಿಂದಾಗಿ ರೂ. ೧೭ ಲಕ್ಷ ಆದಾಯ ಲಭಿಸಿದೆ ಎಂದು ಮಾಹಿತಿ ನೀಡಿದರು. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ನೇಷನ್ ಬಿಲ್ಡರ್ ಪ್ರಶಸ್ತಿಗಳೂ ಸ್ವಸ್ಥ ಕೇಂದ್ರಕ್ಕೆ ಸಂದಿದೆ ಎಂದು ಆರತಿ ಸೋಮಯ್ಯ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಟಾಟಾ ಸಂಸ್ಥೆಯ ಪ್ರಮುಖರಾದ ಎಂ.ಬಿ. ಗಣಪತಿ, ಕೆ.ಜಿ. ರಾಜೀವ್ ಉಪಸ್ಥಿತರಿದ್ದರು. ಕೇಂದ್ರದ ಮುಖ್ಯ ಉಪನ್ಯಾಸಕಿ ವನಿತಾ ನಂಜಪ್ಪ ನಿರೂಪಿಸಿ, ಉಪನ್ಯಾಸಕಿ ಪ್ರೇಮಲತಾ ವಂದಿಸಿದರು.