ಮಡಿಕೇರಿ, ಜ. ೧೩: ತಾ. ೧೯ ರಂದು ಶಿವಯೋಗಿ ಸಿದ್ದರಾಮ ಮತ್ತು ಮಹಾಯೋಗಿ ವೇಮನ ಜಯಂತಿಯನ್ನು ನಗರದ ಭಾರತೀಯ ವಿದ್ಯಾಭವನದಲ್ಲಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಾಗೆಯೇ ಅಂಬಿಗರ ಚೌಡಯ್ಯ ಜಯಂತೋತ್ಸವವನ್ನು ತಾ. ೨೧ ರಂದು ಹಾರಂಗಿ ಅಥವಾ ಶಿರಂಗಾಲ ಗ್ರಾಮದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು. ಫೆಬ್ರವರಿ ೧ ರಂದು ಆಯೋಜಿಸಬೇಕಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಫೆಬ್ರವರಿ ೧೧ ರಂದು ನಗರದ ದಾಸವಾಳ ರಸ್ತೆ ಬಳಿ ಇರುವ ವೀರಭದ್ರೇಶ್ವರ ದೇವಾಲಯದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಸವಿತಾ ಮಹರ್ಷಿ ಜಯಂತಿಯನ್ನು ಫೆಬ್ರವರಿ ೨೭ ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರು ಸರ್ಕಾರದ ನಿಯಮದಂತೆ ಜಯಂತೋತ್ಸವವನ್ನು ಆಯೋಜಿಸಬೇಕು. ಶಿಷ್ಟಾಚಾರವನ್ನು ಪಾಲಿಸಬೇಕು. ಜಯಂತೋತ್ಸವ ಸಂಬAಧ ಜಿಲ್ಲಾಡಳಿತದ ಜೊತೆ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ಮಡಿವಾಳ ಸಮಾಜದ ಪ್ರಮುಖರಾದ ಸುಕುಮಾರ್ ಅವರು ಸಮಾಜದ ಪ್ರಮುಖರೆಲ್ಲರೂ ಫೆಬ್ರವರಿ ೧೧ ರಂದು ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಒಂದೆಡೆ ಸೇರುವುದರಿಂದ ಅಂದು ಕಾರ್ಯಕ್ರಮ ಆಯೋಜಿಸಲು ಅವಕಾಶ ಮಾಡಬೇಕು. ಜೊತೆಗೆ ಕಲಾತಂಡ ಕಳುಹಿಸಿಕೊಡುವಂತೆ ಕೋರಿದರು. ಸವಿತಾ ಸಮಾಜದ ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಟಿ. ಮಧು ಅವರು ಫೆಬ್ರವರಿ ೨೭ ರಂದು ಸಮಾಜದ ಎಲ್ಲರೂ ಸೇರಿ ಜಿಲ್ಲಾಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಅಂದು ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು. ಸಮಾಜದ ಪ್ರಮುಖರು ಇದ್ದರು.