ಕನ್ನಡ ಚಿತ್ರರಂಗದಲ್ಲಿ ಕೊಡಗಿನ ಹತ್ತಾರು ಪ್ರತಿಭೆಗಳು ಮಿಂಚಿದ್ದಾರೆ. ಈಗಲೂ ಮಿಂಚುತ್ತಿದ್ದಾರೆ. ಇವರ ಸಾಲಿಗೆ ಇದೀಗ ಮೂಲತಃ ಇಬ್ನಿವಳ ವಾಡಿ ಗ್ರಾಮದ ಮಾಲೆರ ಪ್ರಮೋದ್ ಬೋಪಣ್ಣ ಹೊಸ ಎಂಟ್ರಿಯಾಗಿದ್ದಾರೆ. ಇವರು ನಾಯಕ ನಟನಾಗಿ ಬಣ್ಣ ಹಚ್ಚಿರುವ ಮರೆಯದೆ ಕ್ಷಮಿಸು ಕನ್ನಡ ಚಲನಚಿತ್ರ ಇದೇ ಜನವರಿ ಆರಕ್ಕೆ ರಾಜ್ಯಾ ದ್ಯಂತ ತೆರೆ ಕಾಣುತ್ತಿದೆ. ಆರ್.ವಿ.ಎಸ್. ಪ್ರೊಡಕ್ಷನ್ ಬ್ಯಾನರ್ ನಡಿ, ವಿ. ಶಿವರಾಂ ನಿರ್ಮಾಣದ, ಕೆ. ರಾಘವ್ ನಿರ್ದೇಶನದ ಮರೆಯದೆ ಕ್ಷಮಿಸು ಸಿನಿಮಾ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಸದ್ಯ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರತಂಡ ಇದೀಗ ‘ಪ್ರಾಮಿಸಿಂಗ್ ಟ್ರೇಲರ್’ ಬಿಡುಗಡೆ ಮಾಡಿ ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ರಿಷಿಕೇಶ್ ಛಾಯಾಗ್ರಹಣ, ಆರೋನ್ ಕಾರ್ತಿಕ್ ವೆಂಕಟೇಶ್, ಕ್ರಿಸ್ಟೋಫರ್ ಸಂಗೀತ, ಧನುಷ್ ಸಂಕಲನ ಈ ಚಿತ್ರಕ್ಕಿದೆ.

ಉದಯ ಟಿವಿಯಲ್ಲಿ ವಾರ್ತಾ ವಾಚಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಮೋದ್, ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಮರೆಯದೆ ಕ್ಷಮಿಸು ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ. ಚಿತ್ರಕ್ಕೆ ವಿಭಿನ್ನ ಕಥಾವಸ್ತುವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಗಾರೆ ಕೆಲಸದವನ ನೋವು ನಲಿವುಗಳಿಗೆ ಇಲ್ಲಿ ಮಹತ್ವ ನೀಡಲಾಗಿದೆ.

ಬಡ ಗಾರೆ ಕಾರ್ಮಿಕನಾಗಿರುವ ಚಿತ್ರದ ನಾಯಕ, ಶ್ರೀಮಂತ ಯುವತಿಯನ್ನು ಪ್ರೀತಿಸುವುದು, ಅದಕ್ಕೆ ವಿರೋಧ, ತಾಯಿಯ ಮಮತೆ ಹಾಗೂ ಸ್ನೇಹಿತರ ಸೆಂಟಿಮೆAಟ್ ಕೂಡ ಚಿತ್ರದ ಆಕರ್ಷಣೆಯಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಚಿತ್ರದ ನಾಯಕಿ ಮೇಘನಾ ಗೌಡ ಶ್ರೀಮಂತನ ಮಗಳಾಗಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ತಾರಾಂಗಣದಲ್ಲಿ ಉಳಿದಂತೆ ಖ್ಯಾತ ಪೋಷಕ ನಟರಾದ ರಮೇಶ್ ಭಟ್, ಸೀರುಂಡೆ ರಘು, ರಾಕ್‌ಲೈನ್ ಸುಧಾಕರ್, ರಾಯಲ್ ರವಿ, ಅಪೂರ್ವ ಸೇರಿದಂತೆ ಹಲವು ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ.