ಸೋಮವಾರಪೇಟೆ, ಜ. ೧೨: ಸಮೀಪದ ತಲ್ತರೆಶೆಟ್ಟಳ್ಳಿ ಗ್ರಾಮದ ಚೌಡೇಶ್ವರಿ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ವೀರಾಜಪೇಟೆ ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ರೂ. ೨೫ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿ ಕೊಂಡಿತು.
ದ್ವಿತೀಯ ಬಹುಮಾನವನ್ನು ಕುಶಾಲನಗರದ ಟೀಂ ಭಗವಾನ್ ಪಡೆಯುವುದರೊಂದಿಗೆ ೧೫ ಸಾವಿರ ನಗದಿನೊಂದಿಗೆ ಟ್ರೋಫಿ ಪಡೆಯಿತು. ಮೂರನೇ ಬಹುಮಾನಕ್ಕೆ ತಲ್ತರೆಶೆಟ್ಟಳ್ಳಿ ಗ್ರಾಮದ ಎ. ತಂಡ ಭಾಜನವಾಗಿ ೭ ಸಾವಿರ ನಗದಿನೊಂದಿಗೆ ಟ್ರೋಫಿ ಪಡೆಯಿತು.
ಅಬ್ಬಿಮಠ-ತಲ್ತರೆಯ ಚೌಡೇಶ್ವರಿ ದೇವಸ್ಥಾನದ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾಟಕ್ಕೆ ಉದ್ಯಮಿ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು. ನಂತರ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬಹುದು. ದಿನದ ಸ್ವಲ ಸಮಯವನ್ನು ಕ್ರೀಡೆಗೆ ಮೀಸಲಿಡ ಬೇಕೆಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಗ್ರಾಮೀಣ ಕ್ರೀಡೆಗಳ ಉಳಿವಿಗೆ ಇಂತಹ ಕ್ರೀಡಾಕೂಟಗಳು ಸಹಕಾರಿ ಎಂದರು.
ಪಂದ್ಯ ಪುರುಷೋತ್ತಮ ಆಸೀಫ್, ಉತ್ತಮ ಹಿಡಿತಗಾರ ಟೀಂ ಭಗವಾನ್ ತಂಡದ ಆಲಿ ಪಡೆದರು. ಉತ್ತಮ ಧಾಳಿಗಾರನಾಗಿ ನವರತ್ನ ಯುವಕ ಸಂಘದ ಸುಮಂತ್ ಹೊರ ಹೊಮ್ಮಿದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಟ್ರೋಫಿ ದಾನಿಗಳಾದ ಹೊಸಳ್ಳಿಯ ರಜಿತ್ ಮತ್ತ ಸಂದೀಪ್, ಬೋವಿ ಸಂಘದ ಜಿಲ್ಲಾಧ್ಯಕ್ಷ ಸುಜಿತ್, ಚೌಡೇಶ್ವರಿ ಯುವಕ ಸಂಘದ ಅಧ್ಯಕ್ಷ ಹೆಚ್.ಎನ್. ಈಶ್ವರ, ಶಾಂತಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಪಿ.ಬಿ. ಬೇಬಿ, ಕಾರ್ಯದರ್ಶಿ ಟಿ.ಈ. ಸತೀಶ್, ಉಪಾಧ್ಯಕ್ಷ ಎ.ಕೆ. ನವೀನ್, ಗೌ. ಅಧ್ಯಕ್ಷ ಟಿ.ಜೆ. ಸಂತೋಷ್ ಇದ್ದರು.