ನಾಪೋಕ್ಲು, ಜ. ೧೨: ಸಮೀಪದ ಕುಂಜಿಲ ಗ್ರಾಮದಲ್ಲಿರುವ ಕುಂಜಿಲ-ನಾಲ್ಕೇರಿ ಶ್ರೀ ಭಗವತಿ ದೇವಳದ ಸುತ್ತ ಕಲ್ಯಾಟಂಡ ಮುತ್ತಪ್ಪ ತಮ್ಮ ಧರ್ಮಪತ್ನಿ ಜಾಜಿ ದೇವಕಿ ಅವರ ಸ್ಮರಣಾರ್ಥ ೪೨೦ ಅಡಿಗಳ ತಡೆಗೋಡೆ ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾರೆ.
ಸುಮಾರು ೨೫೦ ವರ್ಷಗಳಿಂದ ಪಾಳು ಬಿದ್ದಿದ್ದ ದೇವಳದ ಜೀರ್ಣೋದ್ಧಾರಕ್ಕೆ ಕಲ್ಯಾಟಂಡ ಮುತ್ತಪ್ಪ ಹೆಚ್ಚಿನ ಆಸಕ್ತಿ ವಹಿಸಿ ತಕ್ಕ ಮುಖ್ಯಸ್ಥರನ್ನು, ಗ್ರಾಮಸ್ಥರನ್ನು ಒಗ್ಗೂಡಿಸಿ ದೇವಾಲಯದ ಪುನಃ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಹಾಗೆಯೇ, ಹಲವಾರು ವರ್ಷ ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.