ಮಡಿಕೇರಿ, ಜ. ೧೨: ಗಣರಾಜ್ಯೋತ್ಸವ ಅಂಗವಾಗಿ ತಾ. ೨೬ ರಂದು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲ್ಲಿರುವ ಪಥ ಸಂಚಲನದಲ್ಲಿ ಕೊಡಗು ಜಿಲ್ಲೆ ಮೂಲದ ಉಡುವೆರ ರಿಯಾ ಬೋಜಮ್ಮ ಭಾಗವಹಿಸಲಿದ್ದಾರೆ.
ಮೈಸೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ರಿಯಾ ಬೋಜಮ್ಮ ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಭಾರತ ಗಣರಾಜ್ಯೋತ್ಸವ ಪೆರೇಡ್ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ದಕ್ಷಿಣ ವಲಯದ ತಂಡಕ್ಕೆ ಆಯ್ಕೆಯಾಗಿದ್ದರು. ಕೊನೆಯ ಹಂತದಲ್ಲಿ ಕೇರಳದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ದೆಹಲಿ ಪೆರೇಡ್ ಬದಲಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವದ ಪಥ ಸಂಚಲನಕ್ಕೆ ನೇರವಾಗಿ ಆಯ್ಕೆಯಾಗಿದ್ದಾರೆ. ಮೂಲತಃ ಮಾದಾಪುರ ನಿವಾಸಿಯಾಗಿರುವ ಇವರು ಮಡಿಕೇರಿ ಕಾನ್ವೆಂಟ್ ಜಂಕ್ಷನ್ ಬಳಿ ವಾಸವಿರುವ ಉಡುವೇರ ರಘು ಹಾಗೂ ರೇಖಾ ದಂಪತಿ ಪುತ್ರಿ.
ಮಡಿಕೇರಿ ಸಂತ ಜೋಸೆಫ್ ಕಾನ್ವೆಂಟ್’ನಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಹಾಗೂ ಪಿಯು.ಸಿ ಮುಗಿಸಿರುವ ರಿಯಾ ಬೋಜಮ್ಮ ಇದೀಗ ಮೈಸೂರಿನ ಎಂ.ಎA.ಕೆ. & ಎಸ್‌ಡಿಎಂ ಮಹಿಳಾ ಮಹಾ ವಿದ್ಯಾಲಯದಲ್ಲಿ ದ್ವಿತೀಯ ಬಿ.ಎಸ್ಸಿ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.