ಭಾಗಮಂಡಲ, ಜ. ೧೨: ಅಭಿವೃದ್ಧಿ ಕಾರ್ಯ ನಡೆಸಲು ಅಗತ್ಯವಿರುವ ಜಾಗವನ್ನು ಅರಣ್ಯ ಇಲಾಖೆ ಹಾಗೂ ಭಾಗಮಂಡಲ ದೇವಾಲಯದ ಜಾಗವನ್ನು ಪಡೆದು ಉದ್ದೇಶಿತ ಕಾಮಗಾರಿ ನಡೆಸಿ ಕಂದಾಯ ಇಲಾಖೆಯಿಂದ ಪೈಸಾರಿ ಭೂಮಿ ಮಂಜೂರಾತಿ ಮಾಡಿ ಕೊಂಡು ಪಡೆದವರಿಗೆ ನೀಡಲು ನಿರ್ಧಾರ ಕೈಗೊಳ್ಳಲಾಯಿತು.
ಭಾಗಮಂಡಲ ಗ್ರಾಮ ಪಂಚಾಯಿತಿ ಗ್ರಾಮಸಭೆ ಅಧ್ಯಕ್ಷೆ ಪಮಿತಾ ಅಧ್ಯಕ್ಷತೆಯಲ್ಲಿ ಇಲ್ಲಿನ ಸರಕಾರಿ ಶಾಲಾ ಸಭಾಂಗಣದಲ್ಲಿ ನಡೆಯಿತು. ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಭಾಗಮಂಡಲದಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಜಾಗ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ. ದೇವಾಲಯ ಆವರಣದಲ್ಲಿ ಅಡುಗೆ ಕೋಣೆ ನಿರ್ಮಾಣ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ನಡೆಯಬೇಕಾದ ಕೆಲಸಗಳಿಗೆ ಜಾಗದ ಅವಶ್ಯಕತೆ ಇದೆ. ಈ ಹಿನ್ನೆಲೆ ಜಾಗ ಪಡೆಯಲು ಈ ನಿರ್ಧಾರ ಕೈಗೊಳ್ಳಲಾಯಿತು.
ಆರೋಗ್ಯ, ಅರಣ್ಯ, ಪೊಲೀಸ್, ಪಂಚಾಯತ್ ರಾಜ್ ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಉಪಾಧ್ಯಕ್ಷ ಹೊಸೂರು ಸತೀಶ್ ಕುಮರ್ ಅತೃಪ್ತಿ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯವೈಖರಿ ಬದಲಾಗದಿದ್ದಲ್ಲಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಹರಳುಕಲ್ಲು ದಂಧೆಗೆ ಕಡಿವಾಣ
ಕಳೆದ ಬಾರಿಯ ಗ್ರಾಮ ಸಭೆಯಲ್ಲಿ ಪ್ರಸ್ತಾಪವಾಗಿದ್ದ ತಣ್ಣಿಮಾನಿಯ ನಿಶಾನೆ ಮೊಟ್ಟೆ ಹರಳುಕಲ್ಲು ಪ್ರಕರಣದ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಗ್ರಾಮಸ್ಥರು ಗಳಾದ ಕುದುಪಜೆ ಪ್ರಕಾಶ್ ಹಾಗೂ ಭರತ್ ಪ್ರಶ್ನಿಸಿದರು.
ಉಪಾಧ್ಯಕ್ಷ ಸತೀಶ್ ಕುಮಾರ್ ಪ್ರತಿಕ್ರಿಯಿಸಿ, ಈ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಗ್ರಾಮಸ್ಥರಿಗೆ ಮತ್ತು ಸಾರ್ವಜನಿಕರಿಗೆ ದಂಧೆ ನಡೆದ ಸ್ಥಳವನ್ನು ವೀಕ್ಷಿಸಲು ಅನುಮತಿ ಪತ್ರ ಇಲಾಖೆಯಿಂದ ಬಂದಿರುವುದಾಗಿ ತಿಳಿಸಿದರು. ಈ ಸಂದರ್ಭ ಅರಣ್ಯ ಇಲಾಖೆಯ ಮಂಜುನಾಥ್ ಮಾತನಾಡಿ, ಈಗಾಗಲೇ ಸಿಸಿಟಿವಿ ಅಳವಡಿಸಲಾಗಿದೆ. ಅದು ಕಾರ್ಯನಿರ್ವಹಿಸುತ್ತಿದೆ. ಹರಳುಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ. ಅಧಿಕಾರಿಗಳು ಮೊಬೈಲ್ ಮೂಲಕ ನೇರವಾಗಿ ಸ್ಥಳದ ಮೇಲೆ ನಿಗಾ ಇಡಬಹುದಾಗಿದೆ ಎಂದು ಗಮನಕ್ಕೆ ತಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮೊಬೈಲ್‌ನಲ್ಲಿಯೂ ವೀಕ್ಷಿಸಲು ಅನುವು ಮಾಡಿಕೊಡು ವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಭಾಗಮಂಡಲ ವ್ಯಾಪ್ತಿಯ ಕೆಲವು ಶಾಲೆಗಳಲ್ಲಿ ಎಸ್‌ಡಿಎಂಸಿ ಸಭೆ ಇದುವರೆಗೆ ಕರೆದಿಲ್ಲ. ಅಲ್ಲದೆ ಈ ವ್ಯಾಪ್ತಿಯ ಮೂರು ಶಾಲೆಗಳಲ್ಲಿ ಶಿಕ್ಷಕರುಗಳು ಮಕ್ಕಳು ಹಾಗೂ ಪೋಷಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಗಳಿದ್ದು ಈ ಬಗ್ಗೆ ಸಿಆರ್‌ಪಿ ನಿಶಾ ಅವರನ್ನು ಗ್ರಾಮಸ್ಥರು ಪ್ರಶ್ನಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಶ್ಮಿ ಮಾತನಾಡಿ, ಇಲಾಖೆಯ ಸೌಲಭ್ಯಗಳನ್ನು ವಿವರಿಸುತ್ತಿದ್ದಂತೆ ಉಪಾಧ್ಯಕ್ಷರು ತರಾಟೆಗೆ ತೆಗೆದು ಕೊಂಡು ನೀವು ಮಾಡಿದ ಯೋಜನೆ ಇದುವರೆಗೆ ಕಾರ್ಯಗತವಾಗಿಲ್ಲ. ತಲಕಾವೇರಿಯ ಕೆಂಪು ರಾಶಿ ಮೊಟ್ಟೆಯಲ್ಲಿ ಮಾಡಿರುವ ಜಾಕ್‌ವೆಲ್ ಇನ್ನೂ ಕಾರ್ಯಗತವಾಗಿಲ್ಲ ಕೂಡಲೇ ಸರಿಪಡಿಸುವಂತೆ ಸೂಚಿಸಿದರು.
ದೇವಾಲಯದ ವ್ಯಾಪ್ತಿಯಲ್ಲಿ ಪ್ರವಾಸಿಗರು ಅಡುಗೆ ಮಾಡುತ್ತಿರುವ ಪರಿಣಾಮ ಸ್ಥಳ ಕಲುಷಿತಗೊಳ್ಳುತ್ತಿದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಡುಗೆ ಮಾಡಲು ಸೂಕ್ತ ಜಾಗ ನೀಡುವ ಸಲುವಾಗಿ ಭಾಗಮಂಡಲದ ಮುಡಿಶೆಡ್ ಅನ್ನು ಬಳಸಿಕೊಳ್ಳುವಂತೆ ಗ್ರಾಮ ಪಂಚಾಯಿತಿ ವತಿಯಿಂದ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆ. ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಸ್ಸು ನಿಲ್ದಾಣ ಹಾಗೂ ಶೌಚಾಲಯಗಳಿಗೆ ಗ್ರಾಮ ಪಂಚಾಯಿತಿಗೆ ಸೇರಿದ ಜಾಗ ಇಲ್ಲದೆ ಇರುವುದರಿಂದ ಮಾರುಕಟ್ಟೆ ಬಳಿಯ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಪಡೆಯುವ ಬಗ್ಗೆ ಪತ್ರ ವ್ಯವಹಾರ ನಡೆದಿದೆ. ಈ ಬಗ್ಗೆ ಒಪ್ಪಿಗೆ ಸೂಚಿಸುವಂತೆ ಗ್ರಾಮಸ್ಥರನ್ನು ಕೋರಲಾಯಿತು. ಭಾಗಮಂಡಲದಲ್ಲಿ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಲು ಗ್ರಾಮಸ್ಥರಿಂದ ಒಪ್ಪಿಗೆ ಪಡೆದು ನಿರ್ಣಯ ಕೈಗೊಳ್ಳಲಾಯಿತು. ಅಗತ್ಯತೆ ಇರುವ ಕಡೆ ಪರಿಶೀಲನೆ ಮಾಡಿ ಭೂ ಪರಿವರ್ತನೆಗೆ ಅವಕಾಶ ಕೊಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ತಲಕಾವೇರಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯರನ್ನು ನೇಮಿಸಿ, ಭಗಂಡೇಶ್ವರ ದೇವಾಲಯದ ಮುಂಭಾಗ ಟ್ರಾಫಿಕ್ ಜಾಮ್ ತಡೆಗೆ ಕ್ರಮಕೈಗೊಳ್ಳಿ, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಆಗಬೇಕು. ವಿದ್ಯುತ್ ಇಲಾಖೆಯ ಕಂಬಗಳು ಅಲ್ಲಲ್ಲಿ ದುರಸ್ತಿಪಡಿಸಬೇಕು, ಹೊಟೇಲ್ ಹಾಗೂ ಇನ್ನಿತರ ಕಟ್ಟಡ ಗಳಿಂದ ತ್ಯಾಜ್ಯಗಳಿಂದ ದುರ್ನಾಥ ಬೀರುತ್ತಿದ್ದು, ಇದನ್ನು ಸರಿಪಡಿಸಿ ಸೇರಿದಂತೆ ಇನ್ನಿತರ ದೂರುÀಗಳು ಸಭೆಯಲ್ಲಿ ಕೇಳಿ ಬಂದವು.
ಭಾಗಮAಡಲದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ವರ್ಗಾಹಿಸಲಾಗಿದ್ದು, ಬದಲಿ ವ್ಯವಸ್ಥೆಗಾಗಿ ಭಾಗಮಂಡಲ ದಲ್ಲಿ ಇಬ್ಬರು ವೈದ್ಯಾಧಿಕಾರಿಗಳನ್ನು ನೇಮಿಸಲಾಯಿತು. ಕೆಲವು ದಿನಗಳಿಂದ ಹೆಚ್ಚಿನ ತರಬೇತಿ ಎಂದು ಈ ವೈದ್ಯರು ತೆರಳಿದ್ದು, ವೈದ್ಯಾಧಿಕಾರಿ ಇಲ್ಲದ ಕಾರಣ ಕುಶಾಲನಗರದಿಂದ ವೈದ್ಯಾಧಿಕಾರಿಯನ್ನು ನೇಮಿಸಲಾಗಿದೆ. ಅವರು ಸಮಯ ಪಾಲನೆ ಮಾಡುತ್ತಿಲ್ಲ ಇದರಿಂದ ಸಮಸ್ಯೆ ಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ವೈದ್ಯಾಧಿಕಾರಿ ಇಲ್ಲೇ ವಾಸ್ತವ್ಯ ಹೂಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಸಭೆಯಲ್ಲಿ ನೋಡೆಲ್ ಅಧಿಕಾರಿ ಹೇಮಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದ, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.