ವೀರಾಜಪೇಟೆ, ಜ. ೧೨: ಅಕ್ರಮವಾಗಿ ಕೇರಳ ರಾಜ್ಯಕ್ಕೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಈರ್ವರನ್ನು ವೀರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕೈಯರಾಳಂ ಗ್ರಾಮದ ನಿವಾಸಿ ಎನ್.ಪಿ. ಸೈನುದ್ದೀನ್ (೩೮) ಮತ್ತು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕಿತ್ತೂರು ಗ್ರಾಮದ ನಿವಾಸಿ ಪಾರ್ವಿಜ್ ಬಾಷ (೩೫) ವರ್ಷ ಬಂಧಿತ ಆರೋಪಿಗಳು.
ಪಿರಿಯಾಪಟ್ಟಣದಿಂದ ಇಚರ್ ಲಾರಿ (ಕೆಎ ೦೩ ಎಬಿ ೩೫೯೧)ಯಲ್ಲಿ ಅಕ್ರಮವಾಗಿ ಗೋವುಗಳನ್ನು ತುಂಬಿಕೊAಡು ಗೋಣಿಕೊಪ್ಪ ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ತೆರಳುತ್ತಿದ್ದ ಸಂದರ್ಭ ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರ ಬಳಿ ವಾಹನಗಳನ್ನು ಪೊಲೀಸರು ಪರಿಶೀಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಈ ಸಂದರ್ಭ ಲಾರಿಯಲ್ಲಿ ಒಟ್ಟು ೬ ದನಗಳು ಮತ್ತು ಒಂದು ಕರು ಪತ್ತೆಯಾಗಿದೆ. ಕೇರಳ ರಾಜ್ಯದ ಕಸಾಯಿಖಾನೆಗೆ ಒಯ್ಯಲಾಗುತಿತ್ತು ಎಂದು ಬಂಧಿತ ಆರೋಪಿಗಳು ತನಿಖೆಯ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಮೇಲೆ ವೀರಾಜಪೇಟೆ ನಗರ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಶಪಡಿಸಿಕೊಂಡ ಗೋವುಗಳನ್ನು ಮಡಿಕೇರಿಯ ಗೋ ಶಾಲೆಗೆ ರವಾನಿಸಲಾಗಿದೆ.
ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ಶ್ರೀಧರ್, ಎ.ಎಸ್.ಐ. ನಾಣಿಯಪ್ಪ ಹಾಗೂ ಸಿಬ್ಬಂದಿಗಳಾದ ಸತೀಶ್, ಸುಬ್ರಮಣಿ, ಮಲ್ಲಿಕಾರ್ಜುನ ಮತ್ತು ಕುಮಾರ್ ಕಾರ್ಯಾಚರಣೆಯಲ್ಲಿ ಭಾಗಿಗಳಾದರು.
-ಕಿಶೋರ್ ಕುಮಾರ್ ಶೆಟ್ಟಿ