ಮಡಿಕೇರಿ, ಜ. ೧೧: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಈರಳೆವಳಮುಡಿ ಶಾಖೆಯ ವಾಯುಪುತ್ರ ಭವನದಲ್ಲಿ “ಶ್ರೀ ಪಂಚಮುಖಿ ವಾಯುಪುತ್ರ” ಮೂರ್ತಿಯ ಅನಾವರಣ ಕಾರ್ಯಕ್ರಮ ತಾ. ೧೫ ರಂದು ನಡೆಯಲಿದೆ.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ಅಧ್ಯಕ್ಷತೆಯಲ್ಲಿ ಅಂದು ಬೆಳಿÀಗ್ಗೆ ೧೦.೩೦ ಗಂಟೆಗೆ ನಡೆಯವ ಸಮಾರಂಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಹಾಗೂ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಪಿ. ಕೃಷ್ಣಮೂರ್ತಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುಮಾರು ೯ ಅಡಿ ಎತ್ತರದ “ಶ್ರೀ ಪಂಚಮುಖಿ ವಾಯುಪುತ್ರ” ಮೂರ್ತಿಯನ್ನು ಕೆತ್ತಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕಾರ್ಕಳದ ಗುಣವಂತೇಶ್ವರ ಭಟ್ ಉಪನ್ಯಾಸ ನೀಡಲಿದ್ದಾರೆ. ಸಂಘದ ರೈತ ಸದಸ್ಯರ ೩ ರಿಂದ ೯ ವರ್ಷದೊಳಗಿನ ಮಕ್ಕಳು ವಾಯುಪುತ್ರ ಮೂರ್ತಿಗೆ ಅಭಿಷೇಕ ಮಾಡಲಿದ್ದಾರೆ. ಮೂರ್ತಿಯನ್ನು ಶ್ರೀಕೃಷ್ಣ ಶಿಲೆಯಿಂದ ಕೆತ್ತಲಾಗಿದೆ ಎಂದು ತಿಳಿಸಿದರು.
ಶಿಥಿಲಾವಸ್ಥೆಗೊಂಡಿದ್ದ ಈರಳೆವಳಮುಡಿ ಶಾಖೆಯ ಹಳೆಯ ಕಟ್ಟಡವನ್ನು ಸುಮಾರು ರೂ.೩೦ ಲಕ್ಷಗಳಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, “ವಾಯುಪುತ್ರ ಭವನ” ಎಂದು ಹೆಸರಿಡಲಾಗಿದೆ. ಈ ಸಂಕೀರ್ಣದಲ್ಲಿ ವಸತಿಗೃಹ, ದಿನಸಿ ಅಂಗಡಿ ಮತ್ತು ನ್ಯಾಯಬೆಲೆ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ನಷ್ಟದಲ್ಲಿದ್ದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘವನ್ನು ಲಾಭದತ್ತ ಕೊಂಡೊಯ್ಯಲಾಗಿದೆ. ಸಾಲವನ್ನೇ ಮಾಡದೆ ದಾನಿಗಳ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ.
ಸಂಘದ ಕಟ್ಟಡದಲ್ಲಿ ನರೇಂದ್ರಮೋದಿ ಭವನ ನಿರ್ಮಿಸಿ ಕಾವೇರಿ, ಪಶುಪತಿ, ಪುಣ್ಯಕೋಟಿ ಸೇರಿದಂತೆ ಹಲವು ದೇವರುಗಳ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈರಳೆವಳಮುಡಿ ಶಾಖೆಯಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿರುವ ವಾಯುಪುತ್ರ ಮೂರ್ತಿ ಹತ್ತನೇಯದ್ದಾಗಿದೆ ಎಂದು ಮಣಿಉತ್ತಪ್ಪ ಹೇಳಿದರು.