ಕೂಡಿಗೆ, ಜ. ೧೧: ಹೆಬ್ಬಾಲೆ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್. ನಗರ ನಿವಾಸಿ ಮಂಜುನಾಥ (೩೨) ಬಂಧಿತ ಆರೋಪಿ.

ತಾ. ೪ ರಂದು ಹೆಬ್ಬಾಲೆಯ ನಾರಾಯಣ ಎಂಬವರ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಮನೆಯ ಚಿಲಕ ತೆಗೆದು ಒಳನುಗ್ಗಿ ಗಾಡ್ರೇಜ್‌ನ ತೆಗೆದು ಲಾಕರ್‌ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಖದೀಮ ಪರಾರಿಯಾಗಿದ್ದ, ಬಳಿಕ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆ ಕಾರ್ಯ ತನಿಖೆ ಕೈಗೆತ್ತಿಕೊಂಡು ಒಂದು ವಾರದಲ್ಲಿ ಕಾರ್ಯಾಚರಣೆ ನಡೆಸಿ ಹೆಬ್ಬಾಲೆಯಲ್ಲಿಯೇ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿಯಿಂದ ಕಳ್ಳತನಗೊಂಡಿದ್ದ ೧೭೭ ಗ್ರಾಂ ತೂಕದ ರೂ. ೭.೫೦ ಲಕ್ಷ ಮೌಲ್ಯದ

(ಮೊದಲ ಪುಟದಿಂದ) ಚಿನ್ನಾಭರಣಗಳು ಹಾಗೂ ರೂ. ೨,೮೪೦ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಕ್ಯಾಪ್ಟನ್ ಎಂ.ಎ. ಆಯಪ್ಪ ನಿರ್ದೇಶನ, ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಮಾರ್ಗದರ್ಶನದಲ್ಲಿ, ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಬಿ.ಜಿ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕರುಗಳಾದ ಚಂದ್ರಶೇಖರ್, ಭಾರತಿ, ಸಹಾಯಕ ನಿರೀಕ್ಷಕರುಗಳಾದ ವೆಂಕಟೇಶ್, ಗೋಪಾಲ್ ಸಿಬ್ಬಂದಿಗಳಾದಶ್ರೀ ಸತೀಶ್, ಮಂಜುನಾಥ, ದಯಾನಂದ, ಲೋಕೇಶ್, ಚಂಗಪ್ಪ, ಅಜಿತ್, ನಾಗರಾಜ್, ಪ್ರಕಾಶ್, ಪ್ರವೀಣ್, ಸಂದೇಶ್, ದಿನೇಶ್, ರಂಜಿತ್ ಸಿಡಿಆರ್ ಘಟಕದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್, ಪ್ರವೀಣ್ ಮತ್ತು ಚಾಲಕರಾದ ರಾಜು, ಅರುಣ್, ಯೋಗೇಶ್ ಭಾಗವಹಿಸಿದ್ದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ಸಾರ್ವಜನಿಕರು ಮನೆ ಹಾಗೂ ಅಂಗಡಿ ಮಳಿಗೆಗಳಿಗೆ ಸಿಸಿ ಕ್ಯಾಮರಾ, ಡೋರ್ ಅಲಾರಂ, ಸೆನ್ಸಾರ್ ಫ್ರೇಂಗಳನ್ನು ಅಳವಡಿಸುವಂತೆ ಸಲಹೆ ನೀಡಿದರು.