ಕುಶಾಲನಗರ, ಜ. ೧೧: ದುಬಾರೆ ಸಾಕಾನೆ ಶಿಬಿರಕ್ಕೆ ಮದವೇರಿದ ಕಾಡಾನೆ ದಾಳಿ ಮಾಡಿದ ಪರಿಣಾಮ ಶಿಬಿರದ ಸಾಕಾನೆ ತೀವ್ರ ಗಾಯ ಗೊಂಡ ಘಟನೆ ತಾ. ೧೦ರ ತಡರಾತ್ರಿ ನಡೆದಿದೆ. ಶಿಬಿರದ ಗೋಪಿ ಸಾಕಾನೆ ಗಾಯಗೊಂಡಿದ್ದು, ವನ್ಯಜೀವಿ ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ.

ಮದ ಬಂದಿರುವ ಕಾಡಾನೆ ಚಲನವಲನ ಶಿಬಿರದ ಬಳಿಯೇ ಇರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮಾಲ್ದಾರೆ ಮೀಸಲು ಅರಣ್ಯದಿಂದ ಬಂದಿರುವ ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಮ್ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದು, ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾ ಚರಣೆಯಲ್ಲಿ ತೊಡಗಿದ್ದಾರೆ.

ಮಾಲ್ದಾರೆ ಮೀಸಲು ಅರಣ್ಯ ಭಾಗದಿಂದ ಬಂದಿರುವ ಕಾಡಾನೆಗೆ ಮದವೇರಿದ್ದು ಅದು ಶಿಬಿರಕ್ಕೆ ಏಕಾಏಕಿ ನುಗ್ಗಿ ಕಟ್ಟಿ ಹಾಕಿರುವ ಗೋಪಿ ಆನೆ ಮೇಲೆ ದಾಳಿ ಮಾಡಿದೆ ಎಂದು ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡ ರಂಜನ್ ತಿಳಿಸಿದ್ದಾರೆ. ತಡರಾತ್ರಿಯಲ್ಲಿ ಕಾಡಾನೆ ಆನೆ ಶಿಬಿರಕ್ಕೆ ನುಗ್ಗಿ ದಾಳಿ ಮಾಡಿದ ಸಂದರ್ಭ ಆನೆ ಘೀಳಿಡುತ್ತಿದ್ದ ಶಬ್ದ ಕೇಳಿ ಶಿಬಿರದ ಮಾವುತರು ಕಾವಾಡಿಗರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಡರಾತ್ರಿಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಮ್ ಉಪವಲಯ ಅರಣ್ಯ ಅಧಿಕಾರಿ ರಂಜನ್ ಮತ್ತು ಸಿಬ್ಬಂದಿಗಳು ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿ ಸಫಲರಾದರು. ಶಿಬಿರದ ಒಳಭಾಗದಲ್ಲಿ ಎರಡು ಕಾಡಾನೆಗಳ ಸುಳಿವು ಈ ಸಂದರ್ಭ ಅಧಿಕಾರಿಗಳಿಗೆ ಲಭಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಆರ್.ಆರ್.ಟಿ. ಕಾರ್ಯಾಚರಣೆ ತಂಡ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ವನ್ಯಜೀವಿ ತಜ್ಞ ಡಾ.ಚಿಟ್ಟಿಯಪ್ಪ ಅವರ ನೇತೃತ್ವದ ತಂಡ ತೀವ್ರ ಗಾಯಗೊಂಡ ಶಿಬಿರದ ಗೋಪಿ ಆನೆಗೆ ಚಿಕಿತ್ಸೆ ನೀಡಿದ್ದು ಚೇತರಿಸಿಕೊಳ್ಳುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಕಾನೆ ಶಿಬಿರಕ್ಕೆ ಭೇಟಿ ನೀಡಲು ಬರುತ್ತಿರುವ ಪ್ರವಾಸಿಗರನ್ನು ಮುಂದಿನ ಆದೇಶ ತನಕ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

-ಚಂದ್ರಮೋಹನ್