ಮಡಿಕೇರಿ, ಜ. ೧೦: ವರ್ಷಕ್ಕೆ ೨ ಬಾರಿಯಾದರೂ ದಂತ ವೈದ್ಯಕೀಯ ತಪಾಸಣೆ ಮಾಡಿದರೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಮಡಿಕೇರಿಯ ದಂತ ವೈದ್ಯೆ ಡಾ. ಅನುಶ್ರೀ ಅವರು ಸಲಹೆ ಇತ್ತರು.
ನಿಟ್ಟೆ ವಿಶ್ವವಿದ್ಯಾಲಯಕ್ಕೆ ಒಳಪಡುವ ಎ.ಬಿ. ಶೆಟ್ಟಿ ಜ್ಞಾಪಕಾರ್ಥ ದಂತ ವಿಜ್ಞಾನ ಸಂಸ್ಥೆ ಹಾಗೂ ಮಡಿಕೇರಿ ಅಶ್ವಿನಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಮಡಿಕೇರಿ ಕೊಡಗು ವಿದ್ಯಾಲಯದ ಅಪೊರ್ಚ್ಯುನಿಟಿ ಶಾಲೆಯ ವಿಶೇಷಚೇತನ ಮಕ್ಕಳಿಗೆ ಉಚಿತ ದಂತ ಆರೋಗ್ಯ ತಪಾಸಣೆ ನೆರವೇರಿಸಿ ಮಾತನಾಡಿದ ಅವರು, ದಂತ ಆರೋಗ್ಯ ಕಾಪಾಡಿಕೊಳ್ಳಲು ೬ ತಿಂಗಳಿಗೆ ಒಂದು ಬಾರಿ ದಂತ ತಪಾಸಣೆ ನಡೆಸುವುದು ಅಗತ್ಯ. ಹಲ್ಲುಗಳಲ್ಲಿ ಸಣ್ಣ-ಪುಟ್ಟ ಕಲೆಗಳಿದ್ದರೂ ಯಾವುದೇ ಹಿಂಜರಿಕೆ ಇಲ್ಲದೆ ದಂತ ವೈದ್ಯರಲ್ಲಿ ತಪಾಸಣೆ ಮಾಡಿಸಬೇಕೆಂದು ಹೇಳಿದರು. ಸಾಮಾನ್ಯವಾಗಿ ದೈಹಿಕವಾಗಿ ಬಲಹೀನವಿರುವ ವಿಶೇಷಚೇತನ ಮಕ್ಕಳು ತಮ್ಮ ಹಲ್ಲುಗಳನ್ನು ಉಜ್ಜಲು ಹಿಂದೇಟು ಹಾಕುತ್ತಾರೆ. ಸರಿಯಾಗಿ ಹಲ್ಲನ್ನು ಸ್ವಚ್ಛಗೊಳಿಸದ ಕಾರಣ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಇಂತಹ ಮಕ್ಕಳಿಗೆ ವಿದ್ಯುತ್ ಚಾಲಿತ ‘ಟೂತ್ಬ್ರಷ್’ಗಳನ್ನು ನೀಡಬೇಕು. ಇದರ ಮೂಲಕ ಸುಲಭವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸಬಹುದಾಗಿದೆ ಎಂದರು. ಪುಟ್ಟ ಮಕ್ಕಳು ರಾತ್ರಿ ಮಲಗುವ ಮುನ್ನ ಅವರ ಹಲ್ಲುಗಳಲ್ಲಿ ಯಾವುದೇ ಹಾಲಿನ ಅಂಶವಿಲ್ಲದAತೆ ಪೋಷಕರು ಗಮನಹರಿಸಬೇಕು, ಇಲ್ಲದಿದ್ದಲ್ಲಿ ಹಲ್ಲು ಹುಳುಕಾಗುವ ಸಾಧ್ಯತೆಗಳಿವೆ ಎಂದರು.
ಹಲ್ಲಿನ ಆರೋಗ್ಯಕ್ಕೆ ‘ಫ್ಲೋರೈಡ್’ ಅಂಶ ಪ್ರಮುಖವಾಗಿದ್ದು, ಕೊಡಗಿನ ನೀರಿನಲ್ಲಿ ‘ಫ್ಲೋರೈಡ್’ ಅಂಶ ಕಡಿಮೆ ಇರುವ ಕಾರಣ ೪ ರಿಂದ ೫ ವರ್ಷದ ಮಕ್ಕಳಿಗೆ ‘ಫ್ಲೋರೈಡ್’ ವೃದ್ಧಿಸುವ ಚಿಕಿತ್ಸೆ ದಂತ ವೈದ್ಯರಿಂದ ಪಡೆದುಕೊಳ್ಳಬೇಕು. ‘ಪ್ಲೋರೈಡ್’ ಅಂಶವುಳ್ಳ ‘ಟೂತ್ಪೇಸ್ಟ್’ ಗಳನ್ನು ಬಳಸಬೇಕು. ಮಕ್ಕಳು ೫ ರಿಂದ ೧೬ ವರ್ಷದವರೆಗೆ ವರ್ಷಕ್ಕೆ ೨ ಬಾರಿ ಈ ‘ಫ್ಲೋರೈಡ್’ ಚಿಕಿತ್ಸೆ ಪಡೆದುಕೊಳ್ಳುವಂತೆ ಹ್ಯಾಪಿ ಟೀತ್ ಡೆಂಟಲ್ ಕೇರ್ ಕೇಂದ್ರದ ಸ್ಥಾಪಕಿಯೂ ಆಗಿರುವ ಡಾ. ಅನುಶ್ರೀ ಸಲಹೆ ನೀಡಿದರು.
ಹಲ್ಲು ಸರಿಯಾಗಿ ಉಜ್ಜುವ ವಿಧಾನ, ಹಲ್ಲಿನ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ವಿಧಾನಗಳನ್ನು ಪಾಲಿಸುವ ಸಂಬAಧ ಮಾಹಿತಿ ನೀಡಿದರು.
ಈ ಸಂದರ್ಭ ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲಾ, ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಇದ್ದರು. ಅಪೊರ್ಚ್ಯುನಿಟಿ ಶಾಲೆಯ ಪ್ರಾಂಶುಪಾಲೆ ಗೀತಾ ಅವರು ಸ್ವಾಗತಿಸಿ ವಂದಿಸಿದರು.
ಒಟ್ಟು ೬೦ ವಿಶೇಷಚೇತನ ವಿದ್ಯಾರ್ಥಿಗಳಿಗೆ ಡಾ. ಅನುಶ್ರೀ ಅವರು ದಂತ ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ಅಪೊರ್ಚ್ಯುನಿಟಿ ಶಾಲೆಯ ವ್ಯವಸ್ಥಾಪಕ ಟ್ರಸ್ಟಿ ವೀಣಾ ಚಂಗಪ್ಪ, ಕೊಡಗು ವಿದ್ಯಾಲಯದ ವ್ಯವಸ್ಥಾಪಕ ರವಿ, ಅಪೊರ್ಚ್ಯುನಿಟಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಅಶ್ವಿನಿ ಆಸ್ಪತ್ರೆಯ ಸಂಚಾಲಕ ರವೀಂದ್ರ ಮತ್ತು ಸಿಬ್ಬಂದಿ ಇದ್ದರು.