ಕೂಡಿಗೆ, ಜ. ೧೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆ ಉಪಟಳ ಹೆಚ್ಚಾಗಿದ್ದು, ಜನ ಹೈರಾಣಾಗಿದ್ದಾರೆ.

ಹಾರಂಗಿ ನದಿಯನ್ನು ದಾಟಿ ಹುದುಗೂರು ವ್ಯಾಪ್ತಿಯ ಅನೇಕ ರೈತರ ಜಮೀನಿಗೆ ಲಗ್ಗೆ ಇಡುವ ಕಾಡಾನೆಗಳು ತೆಂಗು, ಅಡಿಕೆ, ಸಿಹಿ ಗೆಣಸು ಬೆಳೆಗಳನ್ನು ತಿಂದು ತುಳಿದು ನಾಶಪಡಿಸಿವೆ.

ತೆಂಗಿನ ಮರ ಬಿದ್ದ ಶಬ್ಧಕ್ಕೆ ಮನೆಯವರು ಹೊರಬಂದ ಸಂದರ್ಭದಲ್ಲಿ ಮನೆಯವರನ್ನೇ ಓಡಿಸಿದ ಘಟನೆಯೂ ನಡೆದಿದೆ. ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ ತುಂಡಾಗಿದ್ದ ವಿದ್ಯುತ್ ತಂತಿ ಮೇಲೆ ಕಾಡಾನೆ ಕಾಲಿಟ್ಟು ವಿದ್ಯುತ್ ಸ್ಪರ್ಶಿಸಿ ಅಲ್ಲಿಂದ ಕಾಲ್ಕಿತ್ತ ಘಟನೆ ನಡೆದಿದೆ.