ಗೋಣಿಕೊಪ್ಪಲು, ಜ. ೧೦: ಪಟ್ಟಣದ ಹೃದಯ ಭಾಗದಲ್ಲಿರುವ ಮಳಿಗೆಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಕೋಟ್ಯಂತರ ಬೆಲೆ ಬಾಳುವ ಪೈಂಟಿAಗ್ ವಸ್ತುಗಳು ಅಗ್ನಿಯ ಕೆನ್ನಾಲಿಗೆ ಆಹುತಿಯಾಗಿವೆ. ಇಮ್ತರಾಮ್‌ರವರಿಗೆ ಸೇರಿದ ಅಂಗಡಿ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಶಾರ್ಟ್ಸರ್ಕ್ಯೂಟ್ ಘಟನೆಗೆ ಕಾರಣ ಎಂದು ಅಂದಾಜಿಸಲಾಗಿದೆ.

ತೈಲ ಮಾದರಿಯ ಪೈಂಟಿನ ವಸ್ತುಗಳು ಕೊಠಡಿಯಲ್ಲಿ ಹೆಚ್ಚಾಗಿ ದಾಸ್ತಾನು ಇದ್ದ ಕಾರಣ ಬೆಂಕಿಯು ವಸ್ತುಗಳಿಗೆ ತಗುಲಿ ಇದರ ಜ್ವಾಲೆಯು ಒಂದೇ ಸಮನೆ ಎಲ್ಲಾ ಕೊಠಡಿಗಳಿಗೂ ಹರಡಿದೆ. ಅಲ್ಲದೆ ಮೇಲ್ಭಾಗದ ಕೊಠಡಿಗಳಿಗೂ ಬೆಂಕಿಯ ಜ್ವಾಲೆಯು ಹೊತ್ತಿ ಉರಿದಿದೆ. ಇದರಿಂದ ಅಕ್ಕಪಕ್ಕದ ಬಟ್ಟೆ ಅಂಗಡಿಗಳಿಗೂ ಬೆಂಕಿಯ ಜ್ವಾಲೆಯು ತಗುಲುವ ಸಾಧ್ಯತೆ ಹೆಚ್ಚಾಗಿತ್ತು. ಸ್ಥಳೀಯ ನಾಗರಿಕರ ಸಮಯ ಪ್ರಜ್ಞೆಯಿಂದ ಸಮೀಪದ ಅಂಗಡಿ ಮಳಿಗೆಗಳಿಗೆ ಸಂಭವಿಸಬಹುದಾಗಿದ್ದ ಅಗ್ನಿ ದುರಂತ ತಪ್ಪಿದಂತಾಗಿದೆ.

(ಮೊದಲ ಪುಟದಿಂದ) ಅಗ್ನಿ ಶಾಮಕ ದಳದ ಎರಡು ವಾಹನಗಳಿಂದ ಸಿಬ್ಬಂದಿಗಳು ನೀರನ್ನು ಹಾಯಿಸಿದರಾದರೂ ಬೆಂಕಿಯ ಜ್ವಾಲೆಯು ಕ್ಷೀಣಿಸದ ಹಿನ್ನೆಲೆ ಪಿರಿಯಾಪಟ್ಟಣ ಹಾಗೂ ಮಡಿಕೇರಿ ಭಾಗದಿಂದ ಅಗ್ನಿಶಾಮಕ ವಾಹನಗಳನ್ನು ಬರಮಾಡಿಕೊಂಡು ಬೆಂಕಿ ನಂದಿಸಲು ಮುಂದಾದರು. ಆದರೆ, ಅಂಗಡಿ ಮಳಿಗೆ ಇದ್ದ ಕಟ್ಟಡ ಸಂಪೂರ್ಣ ಸುಟ್ಟು ಕರಕಲಾಗಿದೆ.

೪ ಅಗ್ನಿ ಶಾಮಕ ವಾಹನಗಳು ೪ ಬಾರಿ ತಮ್ಮ ವಾಹನದಲ್ಲಿ ನೀರನ್ನು ತಂದು ಅಗ್ನಿಯ ಜ್ವಾಲೆಯನ್ನು ನಂದಿಸಬೇಕಾಯಿತು. ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ನೀರಿನ ಟ್ರಾö್ಯಕ್ಟರ್‌ನಿಂದ ಹಾಗೂ ಹಾತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲಚಂಡ ಚಿಣ್ಣಪ್ಪ ತಮ್ಮ ನೀರಿನ ಟ್ರಾö್ಯಕ್ಟರ್‌ನಿಂದ ನೀರನ್ನು ತಂದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಸುದ್ದಿ ತಿಳಿದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಕಾರ್ಯದರ್ಶಿ ಮಾಜಿ ಗ್ರಾ.ಪಂ.ಸದಸ್ಯ ಕುಲ್ಲಚಂಡ ಬೋಪಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಲ್ಲೀರ ಧರ್ಮಜ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಬೆAಕಿಯ ಜ್ವಾಲೆಯು ಸಮೀಪದ ಬಟ್ಟೆ ಅಂಗಡಿಗೆ ತಗುಲುವ ಸಾಧ್ಯತೆ ಕಂಡು ಬಂದ ಹಿನ್ನೆಲೆ ಮಳಿಗೆಯಲ್ಲಿದ್ದ ಎಲ್ಲಾ ಬಟ್ಟೆಗಳನ್ನು ಸಾರ್ವಜನಿಕರ ಸಹಾಯದಿಂದ ಖಾಲಿ ಮಾಡುವ ಮೂಲಕ ಮುಂಜಾಗೃತ ಕ್ರಮ ವಹಿಸಲಾಯಿತು. ಸಮೀಪದ ಬಟ್ಟೆ ಅಂಗಡಿಗಳಿಗೆ ಬೆಂಕಿಯ ಜ್ವಾಲೆಯು ಹರಡದಂತೆ ಅಗ್ಮಿಶಾಮಕದಳ ಹಾಗೂ ಪೊಲೀಸರು ಹೆಚ್ಚಿನ ನಿಗಾವಹಿಸಿದರು.

ಮುಂಜಾನೆ ೬ ಗಂಟೆ ಸುಮಾರಿಗೆ ನಗರದ ವರ್ತಕರಾದ ಜಿ.ಲಕ್ಷಿö್ಮರೆಡ್ಡಿರವರು ವಾಯು ವಿಹಾರಕ್ಕೆ ತೆರಳುತ್ತಿದ್ದ ವೇಳೆ ಪೈಂಟ್ ಅಂಗಡಿ ಮಳಿಗೆಯಲ್ಲಿ ಹೊಗೆ ಕಾಣಿಸಿಕೊಂಡಿದ್ದನ್ನು ಗಮನಿಸಿ ಕೂಡಲೇ ಸ್ಥಳೀಯ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸಮೀಪದ ಅಂಗಡಿ ಮಾಲೀಕರಿಗೆ ಮಾಹಿತಿ ಒದಗಿಸಿದರು. ನಂತರ ಸ್ಥಳಕ್ಕೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಗ್ನಿಶಾಮಕದ ವಾಹನಗಳಲ್ಲಿದ್ದ ನೀರು ಖಾಲಿಯಾಗುತ್ತಿದ್ದಂತೆ ಸೇರಿದ್ದ ಜನರಲ್ಲಿ ಆತಂಕ ಎದುರಾಗಿತ್ತು. ಮುಂಜಾನೆ ೬ ಗಂಟೆಯಿAದ ೯ ಗಂಟೆಯವರೆಗೂ ನಾಲ್ಕು ಅಗ್ನಿಶಾಮಕದಳದ ವಾಹನಗಳು ಹಾಗೂ ಸಿಬ್ಬಂದಿಗಳು ಸತತವಾಗಿ ತಮ್ಮ ಪ್ರಯತ್ನ ಮುಂದುವರೆಸಿ ಅಗ್ನಿಯನ್ನು ನಂದಿಸುವಲ್ಲಿ ಹಾಗೂ ಅಕ್ಕಪಕ್ಕದ ಮಳಿಗೆಗಳಿಗೆ ಬೆಂಕಿಯ ಜ್ವಾಲೆಯು ಹರಡದಂತೆ ಎಚ್ಚರಿಕೆ ವಹಿಸಿದರು.

ಸ್ಥಳಕ್ಕೆ ಅಗ್ನಿಶಾಮಕ ದಳದ ಮಡಿಕೇರಿ ವಿಭಾಗದ ಮುಖ್ಯಾಧಿಕಾರಿ ಪಿ.ಚಂದನ್ ಆಗಮಿಸಿ ಪರಿಶೀಲಿಸಿದರು. ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಗೋವಿಂದರಾಜ್, ಎಸ್.ಐ.ದೀಕ್ಷಿತ್ ಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಬೆAಕಿಗೆ ಆಹುತಿಯಾದ ಅಂಗಡಿ ಮಾಲೀಕರಾದ ಇಮ್ತರಾಮ್ ಕಾರ್ಯ ನಿಮಿತ್ತ ವಾರದ ಹಿಂದೆ ರಾಜಸ್ಥಾನಕ್ಕೆ ತೆರಳಿದ್ದರು. ಇವರ ಸಹೋದರ ಚನರಾಮ್ ಅಂಗಡಿಯ ಜವಾಬ್ದಾರಿ ನಿಭಾಯಿಸುತ್ತಿದ್ದರು. ಮಳಿಗೆ ಹಿಂಭಾಗದಲ್ಲಿ ವಾಸವಿದ್ದ ಇವರು ಅಗ್ನಿ ದುರಂತ ಸಂಭವಿಸಿದ ನಂತರ ವಿಷಯ ತಿಳಿದು ಹೊರ ಬಂದಿದ್ದರು. ಅಷ್ಟೊತ್ತಿಗಾಗಲೇ ಬೆಂಕಿಯ ಜ್ವಾಲೆಯು ಎಲ್ಲಾ ಕೊಠಡಿಗಳಿಗೂ ಆವರಿಸಿತ್ತು. ತೀರಾ ಹಳೆಯದಾದ ಕಟ್ಟಡವಾಗಿದ್ದ ಕಾರಣ ಕಟ್ಟಡಕ್ಕೆ ಬಳಸಲಾಗಿದ್ದ ಮರದ ವಸ್ತುಗಳಿಗೆ ಬೆಂಕಿ ತಗುಲಿ ಉರಿಯಲಾರಂಭಿಸಿತ್ತು.

ನಗರದಲ್ಲಿರುವ ಹಳೆಯದಾದ ಮಳಿಗೆಗಳಿಗೆ ಆಗಿಂದ್ದಾಗಿಯೇ ಅಗ್ನಿ ಅವಘಡ ಸಂಭವಿಸುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸೆಸ್ಕ್ ಅಧಿಕಾರಿಗಳು ಹಳೆಯ ಕಟ್ಟಡದ ಮಾಲೀಕರಿಗೆ ಸೂಕ್ತ ನಿರ್ದೇಶನ ನೀಡಿ ವಿದ್ಯುತ್ ಸಂಪರ್ಕದ ವಯರ್‌ಗಳನ್ನು ಬದಲಾಯಿಸುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ಶಾರ್ಕ್ಸರ್ಕ್ಯೂಟ್ ಅಂತಹ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಈ ನಿಟ್ಟಿನಲ್ಲಿ ಇಲಾಖೆಯು ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಒತ್ತಾಯಿಸಿದ್ದಾರೆ.

-ಹೆಚ್.ಕೆ. ಜಗದೀಶ್