ಮಡಿಕೇರಿ, ಜ. ೧೦: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಡೆದಿದ್ದ ಘಂಟೆಗಳ ಕಳವು ಪ್ರಕರಣಗಳನ್ನು ಕೊಡಗು ಜಿಲ್ಲಾ ಪೊಲೀಸರು ಭೇದಿಸಿದ್ದ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿAದ ೭೫೦ ಕೆ.ಜಿ. ತೂಕದ ವಿವಿಧ ಮಾದರಿಯ ಲೋಹದ ಘಂಟೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಕಟ್ಟಿಂಗ್ ಸಾಮಗ್ರಿಗಳು ಸೇರಿ ರೂ. ೧೦ ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿನ ವಿವಿಧ ದೇವಾಲಯಗಳಲ್ಲಿ ನಡೆದಿದ್ದ ಘಂಟೆಗಳ ಕಳವು ಪ್ರಕರಣ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸುವುದರೊಂದಿಗೆ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿತ್ತು. ಗೋಣಿಕೊಪ್ಪ, ನಾಪೋಕ್ಲು, ಪೊನ್ನಂಪೇಟೆ, ವೀರಾಜಪೇಟೆ ಗ್ರಾಮಾಂತರ ಠಾಣೆಗಳಲ್ಲಿ ಪ್ರತ್ಯೇಕವಾಗಿ ಎಂಟು ಪ್ರಕರಣಗಳು ದಾಖಲಾಗಿದ್ದವು.

ಎಲ್ಲೆಲ್ಲಿ ಕಳವು?

ಗೋಣಿಕೊಪ್ಪಲು ಠಾಣಾ ವ್ಯಾಪ್ತಿಯ ಮಾಯಮುಡಿ ಕಮಟೆ ಶ್ರೀ ಮಹದೇವ ದೇವಸ್ಥಾನ, ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ನಿಟ್ಟೂರು ಕಾರ್ಮಾಡಿನ ಶ್ರೀ ಕಾಲಭೈರವೇಶ್ವರ ದೇವಾಲಯ, ಬಿಳೂರಿನ ಕಲ್ಲುಗುಡಿ ಶ್ರೀ ಈಶ್ವರ ದೇವಸ್ಥಾನ, ಬೆಸಗೂರಿನ ಶ್ರೀ ಮಹದೇವ ದೇವಸ್ಥಾನ, ಶ್ರೀ ದುರ್ಗಿ ದೇವಸ್ಥಾನ, ಹಳ್ಳಿಗಟ್ಟಿನ ಶ್ರೀ ಭದ್ರಕಾಳಿ ದೇವಾಲಯ, ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕರಡ ಮಲೆತಿರಿಕೆ ಈಶ್ವರ ದೇವಾಲಯ, ಕೆದಮುಳ್ಳೂರಿನ ಶ್ರೀ ಮಹದೇವ ದೇವಸ್ಥಾನ, ನಾಪೋಕ್ಲು ಠಾಣಾ ವ್ಯಾಪ್ತಿಯ ಮಕ್ಕಿಶಾಸ್ತಾವು ದೇವಾಲಯಗಳಲ್ಲಿ ೨೦೨೨ನೇ ಫೆಬ್ರವರಿಯಿಂದ ಅಕ್ಟೋಬರ್‌ವರೆಗೆ ೮೦೦ ಕೆ.ಜಿ. ತೂಕದ ಘಂಟೆಗಳನ್ನು ಕಳವು ಮಾಡಲಾಗಿತ್ತು.

ಕಾರ್ಯಾಚರಣೆಗೆ ತಂಡಗಳ ರಚನೆ

ಈ ಕಳವು ಪ್ರಕರಣಗಳನ್ನು ಭೇದಿಸುವ ನಿಟ್ಟಿನಲ್ಲಿ ಎಸ್ಪಿ ಅವರ ಸೂಚನೆಯಂತೆ ವೀರಾಜಪೇಟೆ, ಮಡಿಕೇರಿ ಡಿವೈಎಸ್ಪಿಗಳು, ಗೋಣಿಕೊಪ್ಪ, ಪೊನ್ನಂಪೇಟೆ, ವೀರಾಜಪೇಟೆ, ಶ್ರೀಮಂಗಲ, ಕುಟ್ಟ, ನಾಪೋಕ್ಲು ಠಾಣೆಗಳ ಹಾಗೂ ಜಿಲ್ಲಾ ಅಪರಾಧ ಪತ್ತೆದಳ, ಸಿಡಿಆರ್ ಸೆಲ್ ವಿಭಾಗದ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡು ೩೦ ಮಂದಿಯ ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿಯಲಾಗಿತ್ತು.

(ಮೊದಲ ಪುಟದಿಂದ)

ನಾಲ್ವರ ಬಂಧನ

ಕಳ್ಳರ ಪತ್ತೆಗಾಗಿ ಕಾರ್ಯಾಚರಣೆಗಿಳಿದ ತಂಡ ಹಲವು ಆಯಾಮಗಳಿಂದ ತನಿಖೆ ನಡೆಸಿ ನಾಲ್ವರು ಅಂತರ್‌ಜಿಲ್ಲಾ ಕಳ್ಳರನ್ನು ಬಂಧಿಸಿದೆ. ಬಂಧಿತ ನಾಲ್ವರು ಆರೋಪಿಗಳು ಒಂದೇ ಕುಟುಂಬದವರಾಗಿದ್ದಾರೆ. ಮೈಸೂರಿನ ಕೆಸರೆ ಗ್ರಾಮದ ಅನ್ಸರ್ ಮಸೀದಿ ಬಳಿಯ ಆರ್.ಎಸ್. ನಾಯ್ಡುನಗರ ನಿವಾಸಿ ರಫೀಕ್ ಅಹಮ್ಮದ್ ಎಂಬವರ ಪುತ್ರ ಅಮ್ಜದ್ ಅಹಮ್ಮದ್ (೩೭), ಮೈಸೂರು ಕೆಸರೆÀಯ ಅಜ್ಜು ಲೇಔಟ್‌ನ ಕೈರುನ್ನಿಸಾ ಮಸೀದಿ ಹಿಂಭಾಗದ ನಿವಾಸಿ ಅಲ್ಲಬಕ್ಸ್ ಎಂಬವರ ಪುತ್ರ ಸಮಿವುಲ್ಲಾ ಅಲಿಯಾಸ್ ಸಮಿ (೨೨), ಮೈಸೂರು ಕೆಸರೆÀಯ ಶಾಂತಿನಗರದ ರಾಸಾಯಿ ಮುಸ್ತಾಫ ಮಸೀದಿ ಮುಂಭಾಗದ ನಿವಾಸಿ ಜುಲ್ಫಿಕರ್ ಅಲಿಯಾಸ್ ಜುಲ್ಲು (೩೬), ಮೈಸೂರು ಕೆಸರೆಯ ಅಜ್ಜು ಲೇಔಟ್‌ನ ಕೈರುನ್ನಿಸಾ ಮಸೀದಿ ಹಿಂಭಾಗದ ನಿವಾಸಿ ಹೈದರ್ (೩೬) ಇವರುಗಳು ಬಂಧಿತ ಆರೋಪಿಗಳು. ಹೈನುಗಾರಿಕೆ ವೃತ್ತಿ ಮಾಡುತ್ತಿರುವ ಸಮಿವುಲ್ಲಾ, ಜ್ಯೂಸ್ ವ್ಯಾಪಾರ ಮಾಡುತ್ತಿದ್ದ ಜುಲ್ಫ್ಪಿಕರ್, ಗುಜರಿ ವ್ಯಾಪಾರ ಮಾಡುತ್ತಿದ್ದ ಹೈದರ್ ಸಹೋದರರಾಗಿದ್ದು, ಅಮ್ಜದ್ ಅಹಮ್ಮದ್ ಇವರುಗಳ ಬಾವನಾಗಿದ್ದಾನೆ.

ಕಳವು ಹೇಗೆ ?

ಬೈಕ್‌ನಲ್ಲಿ ದೇವಾಲಯಗಳಿಗೆ ಬರುತ್ತಿದ್ದ ಈ ಖದೀಮರು ದೇವಾಲಯಗಳಿಗೆ ಭಕ್ತರು ಹೋಗಿ ಬರುವ ಸಮಯದ ಬಗ್ಗೆ; ಸಿಸಿ ಟಿವಿ ಇದೆಯೇ ಇಲ್ಲವೇ ಎಂಬ ಬಗ್ಗೆ ತಿಳಿದುಕೊಂಡು ಯಾರೂ ಇಲ್ಲದ ವೇಳೆ ದೇವಾಲಯಗಳಿಗೆ ತೆರಳಿ ಸಿಸಿ ಟಿವಿಗಳನ್ನು ಕಿತ್ತು ಅಥವಾ ಅದನ್ನು ಬೇರೆಡೆಗೆ ತಿರುಗಿಸಿಟ್ಟು ಕಟ್ಟಿಂಗ್ ಸಾಮಗ್ರಿಗಳನ್ನು ಬಳಸಿ ಘಂಟೆಗಳನ್ನು ಕಳವು ಮಾಡಿ ಹುಂಡೈ ಗೆಟ್ಸ್ ಕಾರಿನಲ್ಲಿ (ಡಿಎಲ್೪-ಸಿಎಜಿ ೮೦೭೦) ಪರಾರಿಯಾಗುತ್ತಿದ್ದರು.

ಕಾರ್ಯಾಚರಣೆ ಹೇಗೆ?

ಪ್ರಕರಣವನ್ನು ಭೇದಿಸುವ ನಿಟ್ಟಿನಲ್ಲಿ ಕಳವು ಪ್ರಕರಣಗಳು ನಡೆದಿದ್ದ ಗ್ರಾಮಗಳ ಗ್ರಾಮಸ್ಥರ ಸಹಕಾರದೊಂದಿಗೆ ಟವರ್ ಮಾಹಿತಿ ಆಧಾರದಲ್ಲಿ ಕಳವು ಪ್ರಕರಣಗಳು ನಡೆದಿದ್ದ ಸ್ಥಳದಿಂದ ಮೈಸೂರಿನವರೆಗಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದ ಪೊಲೀಸರು ೩ ತಿಂಗಳ ಕಾಲ ಮೈಸೂರಿನಲ್ಲಿಯೇ ಮೊಕ್ಕಾಂ ಹೂಡಿ ಕಳ್ಳರ ಬೆನ್ನತ್ತಿದ್ದರು. ಸಣ್ಣ ಸಣ್ಣ ಘಂಟೆಗಳು ಮಾತ್ರವಲ್ಲದೆ ೫೦-೧೦೦ ಕೆ.ಜಿ. ತೂಕದ ಘಂಟೆಗಳನ್ನು ಕೂಡ ಕಳವು ಮಾಡಿದ್ದ ಆರೋಪಿಗಳು ತಮ್ಮ ಮನೆಯ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದರು. ಕಳವಾಗಿದ್ದ ೮೦೦ ಕೆ.ಜಿ. ತೂಕದ ಘಂಟೆಗಳ ಪೈಕಿ ೭೫೦ ಕೆ.ಜಿ. ಘಂಟೆಗಳನ್ನು ವಶಪಡಿಸಿಕೊಂಡ ಪೊಲೀಸರು ಗೂಡ್ಸ್ ವಾಹನದಲ್ಲಿ ಅವುಗಳನ್ನು ಮಡಿಕೇರಿಗೆ ತಂದರು. ಕಾರ್ಯಾಚರಣೆಯಲ್ಲಿ ಡಿವೈಎಸ್ಪಿಗಳಾದ ನಿರಂಜನ್ ರಾಜೇ ಅರಸ್, ಗಜೇಂದ್ರ ಪ್ರಸಾದ್, ಇನ್ಸ್ಪೆಕ್ಟರ್‌ಗಳಾದ ಸಿ.ಎ. ಮಂಜಪ್ಪ, ಅನೂಪ್ ಮಾದಪ್ಪ, ಐ.ಪಿ. ಮೇದಪ್ಪ, ನಾಗೇಶ್ ಕದ್ರಿ, ಬಿ.ಎಸ್. ಶಿವರುದ್ರ, ಗೋವಿಂದ ರಾಜು, ಸಬ್‌ಇನ್ಸ್ಪೆಕ್ಟರ್‌ಗಳಾದ ದೀಕ್ಷಿತ್ ಕುಮಾರ್, ಸುಬ್ರಮಣಿ, ರವಿ, ರವಿಕುಮಾರ್, ಸದಾಶಿವ, ಮಂಜುನಾಥ್, ಸಹಾಯಕ ಸಬ್‌ಇನ್ಸ್ಪೆಕ್ಟರ್ ಸುಬ್ರಮಣಿ, ಮುಖ್ಯ ಪೇದೆಗಳಾದ ಹೆಚ್.ಕೆ. ಕೃಷ್ಣ, ಎಂ.ಎ. ಸಾಜನ್, ಸಿ.ಎಸ್. ಚಂದ್ರಶೇಖರ್, ಎಂ.ಎನ್. ನಿರಂಜನ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಎ.ಆರ್. ಸುರೇಶ್, ಎಂ.ಎಸ್. ರಂಜಿತ್, ಎಸ್.ಜಿ. ಪ್ರೇಮ್‌ಕುಮಾರ್, ಆರ್. ಕಾಳಿಯಪ್ಪ, ಎಂ.ಸಿ. ಸಿರಿಲ್, ಎಂ.ಆರ್.ರವಿಕುಮಾರ್, ಎನ್.ಕೆ. ಉಮೇಶ್, ಸಿ.ಕೆÀ. ರಾಜೇಶ್, ಕೆ.ಎಸ್. ಶಶಿಕುಮಾರ್, ಪಿ.ಎನ್. ಉಮೇಶ್, ಕೆ.ಈ. ಷರೀಫ್, ಬಿ.ಎಂ. ಕೃಷ್ಣಪ್ಪÀ, ಜೋಶ್ ನಿಶಾಂತ್, ಸಿಬ್ಬಂದಿಗಳಾದ ಬಿ.ಕೆ. ಪ್ರವೀಣ್, ಶರತ್ ರೈ, ಶರತ್‌ಕುಮಾರ್, ಎನ್. ನವೀನ್, ಟಿ.ಎಸ್. ಗಿರೀಶ್, ಕೆ.ಎಂ. ಧರ್ಮ, ಮಹದೇಶ್ವರ ಸ್ವಾಮಿ, ಎಂ.ಎಸ್. ಜೀವನ್, ಪ್ರಸನ್ನ, ಎಸ್.ಆರ್. ಅಭಿಲಾಷ್, ಕೆ.ಬಿ. ಸಂದೀಪ್, ಹೆಚ್.ಎನ್. ಸಂತೋಷ್ ಇವರುಗಳು ಪಾಲ್ಗೊಂಡಿದ್ದರು.