ಚಾರಣಿಗರಿಗೆÀ, ಪರ್ವತಾರೋಹಣಗಾರರಿಗೆ ಸ್ವರ್ಗದಂತಿರುವ ಜಾಗ, ತೀರ್ಥಕ್ಷೇತ್ರಗಳಾದ ಬದ್ರಿನಾಥ ಹಾಗೂ ಹೇಮಕುಂದ್ ಸಾಹಿಬ್‌ಗೆ ತೆರಳಲು ಮುಖ್ಯದ್ವಾರದಂತಿರುವ ಸ್ಥಳ, ಶಂಕರಾಚಾರ್ಯರು ಸ್ಥಾಪಿಸಿರುವ ಶ್ರೇಷ್ಠ ೪ ಮಠಗಳಲ್ಲಿ ಒಂದಕ್ಕೆ ಆಶ್ರಯ ನೀಡುತ್ತಿರುವ, ಸಮುದ್ರ ಮಟ್ಟದಿಂದ ಸುಮಾರು ೬,೧೫೦ ಅಡಿ ಎತ್ತರವಿರುವ ಉತ್ತರಾಖಂಡ ರಾಜ್ಯದ ಜೋಶಿಮಠ ನಗರವು ಇಂದು ಪರ್ವತದ ತಪ್ಪಲಿಗೇ ಮರಳಿ ಕುಸಿಯುವ ಹಂತ ತಲುಪುತ್ತಿದೆ. ೨೦೨೧ರಲ್ಲಿ ಉತ್ತರಾಖಂಡದ ತಪೋವನದಲ್ಲಿ ‘ಗ್ಲೇಸಿಯರ್’ ಕರಗಿದ ಪರಿಣಾಮ ಸುಮಾರು ೨೦೦ ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಈ ವರ್ಷ ತಪೋವನ ಪ್ರದೇಶದ ಸಮೀಪವೇ ಇರುವ ಜೋಶಿಮಠ ಪಟ್ಟಣದಲ್ಲಿ ಇದ್ದಕ್ಕಿದಂತೆ ಮನೆ-ಮಠಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವ ಪರಿಣಾಮ ೧೬,೭೦೯ ಜನಸಂಖ್ಯೆ ಹೊಂದಿರುವ ಜೋಶಿಮಠ ಸಂಪೂರ್ಣ ವಿನಾಶದತ್ತ ಸಾಗಿದೆ. ಮನೆ - ವಾಣಿಜ್ಯ ಸಂಕೀರ್ಣಗಳು ಬಿರುಕು ಬಿಟ್ಟರೆ, ರಸ್ತೆಗಳು ಬಾಯಿ ತೆರೆದಿವೆ. ಪಟ್ಟಣದಲ್ಲಿ ೬೦೦ ಮನೆಗಳನ್ನು ಈಗಾಗಲೇ ಸ್ಥಳಾಂತರಗೊಳಿಸಲಾಗಿದ್ದು, ೪,೦೦೦ ಮಂದಿಗೆ ಮನೆ ಇಲ್ಲದಂತಾಗಿದ್ದು, ನಿರಾಶ್ರಿತರಾದಂತಾಗಿದ್ದಾರೆ. ಜೋಶಿಮಠದ ಸಮೀಪದಲ್ಲಿರುವ ಮತ್ತೊಂದು ಪಟ್ಟಣ ಕರ್ನ್ಪ್ರಯಾಗ್‌ನಲ್ಲಿ ಕೂಡ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸುಮಾರು ೫೦ ಮನೆಗಳ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದೆ.

ವರ್ಷಕ್ಕೆ ೬ ಸೆಂಟಿಮೀಟರ್ ವೇಗದಲ್ಲಿ ಮುಳುಗುತ್ತಿರುವ ನಗರ..!

೧೮ ತಿಂಗಳುಗಳ ಅವಧಿಯಲ್ಲಿ ಉಪಗ್ರಹ ಚಿತ್ರಗಳ ಮೂಲಕ ಜೋಶಿಮಠದ ಅಧ್ಯಯನ ನಡೆಸಿದ ವಿಜ್ಞಾನಿಗಳ ಅಧಿಕೃತ ಮಾಹಿತಿ ಪ್ರಕಾರ ವರ್ಷಕ್ಕೆ ೬ ರಿಂದ ೬.೫ ಸೆಂಟಿಮೀಟರ್ ವೇಗದಲ್ಲಿ ಜೋಶಿಮಠ ಪ್ರದೇಶವು ನೆಲಕ್ಕೆ ಕುಸಿಯುತ್ತಿದೆ. ಜುಲೈ ೨೦೨೦ ರಿಂದ ಮಾರ್ಚ್ ೨೦೨೨ರವರೆಗೆ ಸೆರೆಯಾಗಿರುವ ಉಪಗ್ರಹ ಚಿತ್ರಗಳ ಪ್ರಕಾರ ಈ ಮಾಹಿತಿಯನ್ನು ವಿಜ್ಞಾನಿಗಳು ಕಲೆ ಹಾಕಿದ್ದಾರೆ. ೨೦೧೫ ರಿಂದಲೇ ಈ ಪ್ರದೇಶದ ಅಧ್ಯಯನವನ್ನು ಚಿತ್ರಗಳ ಸಹಾಯದಿಂದ ಮಾಡುತ್ತಿದ್ದು, ಇನ್ನಷ್ಟು ಅಧ್ಯಯನ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಡೆಹ್ರಾಡೂನಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್‌ನ ವಿಜ್ಞಾನಿಗಳು ಕೆಲ ಮಾಧ್ಯಮಗಳಿಗೆ ಮಾಹಿತಿ ಇತ್ತಿದ್ದಾರೆ. ಅದಾಗ್ಯೂ ಪ್ರಾಥಮಿಕ ಅಧ್ಯಯನ ಪ್ರಕಾರ ಅಂತರ್ಜಲ ನೀರಿನ ಪ್ರಮಾಣದಲ್ಲಿ ಆಗಿರುವ ಬದಲಾವಣೆಯೇ ಈ ಪ್ರಕೃತಿ ವಿಕೋಪಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಬದಲಾವಣೆಗೆ ನಿಖರ ಕಾರಣವೇನು ಎಂಬುದನ್ನು ಇನ್ನೂ ಕಲೆ ಹಾಕುತ್ತಿದ್ದಾರೆ.

ನಿಮಿಷಕ್ಕೆ ೪೦೦ ರಿಂದ ೫೦೦ ಲೀಟರ್ ನೀರು ಹರಿವು...!

ಜೋಶಿಮಠ ಭೂ-ಪ್ರದೇಶದ ಒಳಭಾಗದಲ್ಲಿ ನೀರಿನ ಹರಿವಿನ ಪ್ರಮಾಣ ನಿಮಿಷಕ್ಕೆ ಸುಮಾರು ೪೦೦ ರಿಂದ ೫೦೦ ಲೀಟರ್‌ವರೆಗಿದೆ. ನೀರಿನ ಮೂಲ ಯಾವುದು ಎಂಬುದನ್ನು ಕಲೆ ಹಾಕಲಾಗುತ್ತಿದೆ ಎಂದು ವಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಅವರುಗಳ ಪ್ರಕಾರ ನೀರಿನ ಅಂಶವುಳ್ಳ ಬಂಡೆ ಕೊರೆತದಿಂದ ಅಥವಾ ಯಾವುದೋ ಭೂಗತ ಹೊಳೆಯಿಂದಾಗಿ ನೀರು ಹರಿಯುತ್ತಿದೆ ಎಂದು ಅಂದಾಜಿಸಲಾಗಿದೆ. ನೀರಿನ ನಿಖರ ಮೂಲ ಹುಡುಕಲು ವಿಜ್ಞಾನಿಗಳು ತೀವ್ರ ಶ್ರಮ ಪಡುತ್ತಿದ್ದಾರೆ.

ಬಂಡೆ ಕೊರೆದು ರಸ್ತೆ ನಿರ್ಮಾಣ - ಜಲ ವಿದ್ಯುತ್ ಘಟಕ ಯೋಜನೆಗಳ ಮೇಲೆ ಆರೋಪ

ಅಭಿವೃದ್ಧಿ ಹೆಸರಿನಲ್ಲಿ, ಪರಿಸರಕ್ಕಾಗುವ ಹಾನಿ ಇತ್ಯಾದಿಗಳನ್ನು ಲೆಕ್ಕಿಸದೆ ಅವೈಜ್ಞಾನಿಕ ಹಾಗೂ ತರಾತುರಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಕೊಡಗಿನಲ್ಲಿಯೂ ಇದಕ್ಕೆ ಹಲವು ಉದಾಹರಣೆಗಳಿವೆ. ಅದೇ ರೀತಿ ಪರ್ವತಾಶ್ರೇಣಿಯಲ್ಲಿರುವ ಜೋಶಿಮಠ ಸೇರಿದಂತೆ ಕಳೆದ ವರ್ಷ ಗ್ಲೇಸಿಯರ್ ಕರಗಿ ಅನಾಹುತ ಸಂಭವಿಸಿದ ತಪೋವನ ಇಂತಹ ಕಾಮಗಾರಿಗಳಿಗೆ ಬಲಿಯಾಗುತ್ತಿದೆ ಎಂಬುದು ಹಲವರ ಆರೋಪವಾದರೂ ಹಿಮಾಲಯ ಪರ್ವತಾಶ್ರೇಣಿಯ ಪರಿಸರ ಸೂಕ್ಷö್ಮ ಪ್ರದೇಶದಲ್ಲಿರುವ ಉತ್ತರಾಖಂಡ ರಾಜ್ಯದಲ್ಲಿರುವ ಈ ಪ್ರದೇಶಗಳು, ಜಾಗತಿಕ ಹವಾಮಾನ ಬದಲಾವಣೆ ಸೇರಿದಂತೆ ಟಕ್ಟಾನಿಕ್ ಪ್ಲೇಟ್ (ಭೂಮಿಯ ಮೇಲ್ಪದರಗಳನ್ನು ಬಿಡಿ-ಭಾಗಗಳಾಗಿ ವಿಂಗಡಿಸಬಹುದಾಗಿದೆ. ಈ ಎಲ್ಲಾ ಭಾಗಗಳೂ ಒಟ್ಟಿಗೆ ಸೇರಿದಾಗ ಸಂಪೂರ್ಣ ಭೂ-ಪದರ ಸೃಷ್ಟಿಯಾಗುತ್ತದೆ. ಈ ಬಿಡಿ-ಭಾಗಗಳನ್ನು ಟೆಕ್ಟಾನಿಕ್ ಪ್ಲೇಟ್‌ಗಳೆಂದು ಕರೆಯಲಾಗುತ್ತದೆ)ನ ಗಡಿಯಲ್ಲಿರುವ ಪ್ರದೇಶವಾಗಿರುವುದರಿಂದ ಈ ರೀತಿಯ ಅನಾಹುತಗಳು ನೈಸರ್ಗಿಕವಾದದ್ದು ಎಂಬುದು ಕೂಡ ಇನ್ನು ಕೆಲವರ ಸಿದ್ಧಾಂತವಾಗಿದೆ.

ಸ್ಥಳೀಯರ ಸ್ಥಿತಿ ಚಿಂತಾಜನಕ - ಪಟ್ಟಣವನ್ನೇ ತ್ಯಜಿಸಬೇಕಾದ ಸನ್ನಿವೇಶ

ಇದೀಗ ಜೋಶಿಮಠ ಹಾಗೂ ಕರ್ನಪ್ರಯಾಗ್ ಸೇರಿ ಒಟ್ಟು ೭೨೩ ಕಟ್ಟಡಗಳಲ್ಲಿ ಬಿರುಕು ಬಿಟ್ಟಿದ್ದು ಈ ಕಟ್ಟಡಗಳಿಂದ ಸ್ಥಳಾಂತರಗೊAಡ ೪,೦೦೦ ಕ್ಕೂ ಅಧಿಕ ಮಂದಿ ರಾಜ್ಯದ ಇತರೆಡೆಗಳಲ್ಲಿ ಬಾಡಿಗೆ ಮನೆಯಲ್ಲಿರಲು ಇಚ್ಛಿಸಿದ್ದಲ್ಲಿ ೬ ತಿಂಗಳುಗಳ ಕಾಲ ಮಾಸಿಕ ರೂ.೪,೦೦೦ ದಷ್ಟು ಸಹಾಯಧನ ನೀಡುವುದಾಗಿ ಉತ್ತರಾಖಂಡ ಸರಕಾರ ಈಗಾಗಲೇ ಘೋಷಿಸಿದೆ. ಜೋಶಿಮಠದ ಅಪಾಯರಹಿತ ಪ್ರದೇಶದಲ್ಲಿ ೨೧೩ ಹಾಗೂ ಸಮೀಪದ ಪಿಪಾಲ್‌ಕೋಟಿ ಗ್ರಾಮದಲ್ಲಿ ೪೯೧ ಪರಿಹಾರ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ವ್ಯವಸ್ಥೆ ಮಾಡಲಾಗಿದೆ. ಮನೆ-ಮಠಗಳಲ್ಲದ ಇತರ ಕಟ್ಟಡಗಳನ್ನು ತಜ್ಞರು ಪರಿಶೀಲನೆ ನಡೆಸಿದ ಬಳಿಕ ವಾಸಕ್ಕೆ ಯೋಗ್ಯವೂ, ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತದೆ. ಜೋಶಿಮಠದ ೨ ಬೃಹತ್ ಹೊಟೇಲ್ ಕಟ್ಟಡಗಳನ್ನು ಮುಂಜಾಗೃತಾ ಕ್ರಮವಾಗಿ ನೆಲಸಮಗೊಳಿಸಲು ಸರಕಾರ ತೀರ್ಮಾನಿಸಿದೆ. ಸ್ಥಳಾಂತರಗೊAಡ ನಿವಾಸಿಗಳಿಗೆ ಪ್ರತಿ ಕುಟುಂಬಕ್ಕೆ ತಲಾ ರೂ.೧.೫ ಲಕ್ಷದಷ್ಟು ಪರಿಹಾರವನ್ನು ಸರಕಾರ ಘೋಷಿಸಿದೆ.

ಈಗಾಗಲೇ ಪರಿಣಾಮಕಾರಿಯಾಗಿ ಹಾನಿ ಮಾಡಿ ಇಡೀ ನಗರವೇ ವಾಸಕ್ಕೆ ಯೋಗ್ಯವಲ್ಲದಂತ ಪರಿಸ್ಥಿತಿ ಸೃಷ್ಟಿಯಾಗಿದ್ದು, ಭವಿಷ್ಯದಲ್ಲಿ ಈ ನಗರವನ್ನೇ ಸಂಪೂರ್ಣವಾಗಿ ತೊರೆಯಬೇಕಾದ ಸನ್ನಿವೇಶ ಎದುರಾಗಲಿದೆ ಎಂಬುದಾಗಿ ತಜ್ಞರು ಅಭಿಪ್ರಾಯಿಸಿದ್ದಾರೆ.

-ಪಿ.ಜಿ.ಆರ್.