ಮಡಿಕೇರಿ, ಜ. ೧೦: ಬಂಟರ ಸಂಘಕ್ಕೆ ಸೇರಿದ ಆಸ್ತಿ ಮರಾಟ ಮಾಡಿದ್ದಲ್ಲದೆ, ಸಮುದಾಯ ಬಾಂಧವರಿಗೆ ಮೋಸ, ವಂಚನೆ ಮಾಡಿದವರಿಗೆ ಸಂಘದ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಇಲ್ಲವೆಂದು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ನಿಯೋಜಿತಗೊಂಡಿರುವ ವಕೀಲ ಬಿ. ರತ್ನಾಕರ ಶೆಟ್ಟಿ ತಿರುಗೇಟು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಬಂಟರ ಸಂಘದಲ್ಲಿ ಸದಸ್ಯ, ಪದಾಧಿಕಾರಿಯಾಗಲು ಸಮುದಾಯದದಲ್ಲಿ ಜನಿಸಿದವರಾಗಿರಬೇಕು. ಅಧ್ಯಕ್ಷನಾಗಲು ಹಣ, ಅಂತಸ್ತು ಮಾನದಂಡವಲ್ಲ, ಆದರೆ, ನಿನ್ನೆ ಮಡಿಕೇರಿಯ ಕೆಲವು ವ್ಯಕ್ತಿಗಳು ಸೇರಿಕೊಂಡು ಪತ್ರಿಕಾಗೋಷ್ಠಿ ಮೂಲಕ ಅಧ್ಯಕ್ಷರಾಗಿದ್ದ ನಾರಾಣ ರೈ ಹಾಗೂ ಪ್ರಧಾನ ಕಾರ್ಯದರ್ಶಿ ರತ್ನಾಕರ ಶೆಟ್ಟಿ ಆವರುಗಳು ಯಾವುದೇ ಕಾರ್ಯಕ್ರಮ ಮಾಡಿರುವದಿಲ್ಲ. ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಅಸಿಂಧುವಾಗಲಿದೆ ಎಂದು ಹೇಳಿದ್ದಾರೆ. ಸಂಘದ ಬೈಲಾ ಓದದೆ, ಕಾನೂನು ತಿಳಿದುಕೊಳ್ಳದೆ ಇರುವವರು ಕಾನೂನು ಮೊರೆ ಹೋಗುವುದಾಗಿ ಹೇಳಿದ್ದಾರೆ, ನಮಗೆ ಅದರ ಅಗತ್ಯವಿಲ್ಲ, ಈ ಹಿಂದೆ ಚುನಾವಣೆ ನಡೆಸುತ್ತಿದ್ದಂತೆಯೇ ಈ ಬಾರಿ ಕೂಡ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನಾರಾಯಣ ರೈ ಅವರು ಮಡಿಕೇರಿ ತಾಲೂಕು ಅಧ್ಯಕ್ಷರಾಗಿದ್ದ ಸಂದರ್ಭ ಮನೆ ಮನೆಗಳಿಗೆ ತೆರಳಿ ಬಲಿಷ್ಠವಾಗಿ ಸಂಘಟನೆ ಮಾಡಿದ್ದಾರೆ. ನಂತರದಲ್ಲಿ ಜಿಲ್ಲಾಧ್ಯಕ್ಷರಾದ ಬಳಿಕ ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅಧಿಕಾರಾವಧಿ ಮೂರು ವರ್ಷಗಳಾದರೂ ಸಹಿತ ವಿಕೋಪ ಹಾಗೂ ಕೊರೊನಾ ಕಾರಣದಿಂದಾಗಿ ಸಭೆ, ಕರ್ಯಕ್ರಮ ನಡೆಸಲಾಗದ ಪರಿಸ್ಥಿತಿಯಿದ್ದುದರಿಂದ ಅವರನ್ನೇ ಮುಂದುವರಿಸಲಾಗಿದೆ. ಇದೀಗ ಉಪಾಧ್ಯಕ್ಷರೆಂದು ಹೇಳಿಕೊಳ್ಳುತ್ತಿರುವ ಕುಶಾಲನಗರದ ವ್ಯಕ್ತಿಯೋರ್ವರ ಒತ್ತಾಯದಿಂದಾಗಿ ಮೊನ್ನೆ ದಿನ ವೀರಾಜಪೇಟೆಯಲ್ಲಿ ಮಹಾಸಭೆ ಕರೆದು ಅಲ್ಲಿ ಸರ್ವರ ಸಮ್ಮುಖದಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಭೆಯ ಬಗ್ಗೆ ಸಂಘದ ಸಾಮಾಜಿಕ ಜಾಲ ತಾಣ ಗ್ರೂಪಿನಲ್ಲಿ ಪ್ರತಿಯೋರ್ವರಿಗೂ ತಲಪುವಂತೆ ಮಾಹಿತಿ ನೀಡಿರುವುದಾಗಿ ಹೇಳಿದರು.
ಮಡಿಕೇರಿಯ ಕೆಲವರ ಕಪಿಮುಷ್ಟಿಯಲ್ಲಿದ್ದ ಸಂಘ ಇದೀಗ ಹೊರಗೆ ಬಂದಿದೆ, ವಿಚಲಿತರಾಗಿರುವ ಕೆಲವರು ಸಭೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಸಭೆಯನ್ನು ಕಾನೂನು ರೀತಿಯಲ್ಲಿ ಬಗ್ಗು ಬಡಿಯುವ ಬಗ್ಗೆ ನಮಗೆ ತಿಳಿದಿದೆ. ಸಂಘಕ್ಕೆ ಸಮುದಾಯ ಭವನ ನಿರ್ಮಾಣಕ್ಕಾಗಿ ದಾನಿ ಪ್ರೇಮನಾಥ ಪೂಂಜಾ ಅವರು ನೀಡಿದಂತಹ ೫೧ಸೆಂಟ್ ನಿವೇಶನವನ್ನು ಸಂಘದ ಹೆಸರಿಗೆ ಮಾಡುವ ಬದಲಿಗೆ ಸ್ವಂತ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಕ್ಕೆ ಟ್ರಸ್ಟ್ ರಚನೆ ಮಾಡುವುದಾಗಿ ಹೇಳಿಕೊಂಡು ಇದುವರೆಗೂ ಟ್ರಸ್ಟ್ ಅನ್ನು ಸಂಘಕ್ಕೆ ಹಸ್ತಾಂತರಿಸಿರುವದಿಲ್ಲ. ಅಲ್ಲದೆ, ತಾಳತ್ಮನೆಯಲ್ಲಿದ್ದ ಸಂಘದ ಜಾಗವನ್ನು ಕೂಡ ಈ ಹಿಂದೆಯೇ ಮಾರಾಟ ಮಾಡಿ ಅದರಲ್ಲಿ ಬಂದ ಹಣದಲ್ಲಿ ಅರ್ಧದಷ್ಟು ಮಾತ್ರ ಸಂಘದ ಖಾತೆಗೆ ಜಮೆ ಮಾಡಿ ಉಳಿದ ಹಣವನ್ನು ಲಪಟಾಯಿಸಲಾಗಿದೆ. ಸಮುದಾಯಕ್ಕೆ ವಂಚನೆ, ಮೋಸ ಮಾಡಿದವರಿಗೆ ಸಂಘದ ಬಗ್ಗೆ ಮಾತನಾಡುವ ಹಕ್ಕಿಲ್ಲ, ಈ ಬಗ್ಗೆ ಒಂದು ಸಮಾವೇಶ ಏರ್ಪಡಿಸಿ ಸಮುದಾಯ ಬಾಂಧವರ ಮುಂದಿಡುತ್ತೇವೆ. ಮೋಸ ಮಾಡಿದವರ ಮೇಲೆ ಏನು ಕ್ರಮ ಕೈಗೊಳ್ಳಬೇಕೆಂಬದನ್ನು ಜನರು ತೀರ್ಮಾನಿಸುತ್ತಾರೆ ಎಂದು ಹೇಳಿದರು. ಸಂಘದಲ್ಲಿ ಆಜೀವ ಸದಸ್ಯರುಗಳಿಗೆ ಮಾತ್ರ ಮತದಾನದ ಹಕ್ಕು ಇದ್ದು, ಆಜೀವ ಸದಸ್ಯತ್ವ ಹೊಂದಿರುವವರು ನೂರು ಮಂದಿ ಇದ್ದು ಈ ಪೈಕಿ ಕೆಲವರು ಮೃತರಾಗಿದ್ದಾರೆ. ಉಳಿದವರಲ್ಲಿ ೨೦ ಮಂದಿಯಷ್ಟು ಸಭೆಗೆ ಆಗಮಿಸಿ ಮತದಾನ ಮಾಡಿದ್ದಾರೆ ಎಂದು ರತ್ನಾಕರ ಶೆಟ್ಟಿ ತಿಳಿಸಿದರು.
ಗೌರವ ಅಧ್ಯಕ್ಷ ಕೆ.ಆರ್. ಬಾಲಕೃಷ್ಣ ರೈ ಮಾತನಾಡಿ; ಬಂಟರ ಸಂಘ ಸಮುದಾಯದ ಒಂದು ಮನೆ ಇದ್ದಂತೆ, ಅಲ್ಲಿ ನೂರಾರು ವಿಚಾರಗಳಿರುತ್ತವೆ. ಇಲ್ಲಿನ ಗೊಂದಲಗಳನ್ನು ಮನೆಯಲ್ಲಿಯೇ ಬಗೆಹರಿಸಿಕೊಳ್ಳಬೇಕೇ ಹೊರತು ಹೊರಗಡೆ ಹೋಗಲು ಬಿಡಬಾರದು. ಆದರೆ, ನಿನ್ನೆ ಕೆಲವರು ಪತ್ರಿಕಾಗೋಷ್ಠಿ ಮಾಡಿ ಕ್ಷÄಲ್ಲಕ ಮಾತುಗಳನ್ನಾಡಿದ್ದಾರೆ. ಇದು ಸಮಂಜಸವಲ್ಲವೆAದು ಹೇಳಿದರು. ನಾರಾಯಣ ರೈ ಹಾಗೂ ರತ್ನಾಕರ ಶೆಟ್ಟಿಯವರ ಅಧಿಕಾರಾವಧಿಯಲ್ಲಿ ಹಲವಾರು ಕೆಲಸಗಳಾಗಿರುವುದಾಗಿ ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಬಿ.ಡಿ. ನಾರಾಯಣ ರೈ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಏನೂ ಕೆಲಸವಾಗಿಲ್ಲ ಎಂದು ಆರೋಪ ಮಾಡಿದ್ದಾರೆ. ಆದರೆ ಜನರಿಗೆ ಬಂಟರ ಸಂಘ ಇದೆ ಎಂಬದು ಗೊತ್ತಾಗಿದ್ದು ತಾನು ಮಡಿಕೇರಿ ತಾಲೂಕು ಅಧ್ಯಕ್ಷನಾದ ಬಳಿಕ. ಸ್ವಜಾತಿ ಬಂಧುಗಳಿಗಾಗಿ ಸಮುದಾಯ ಭವನ ಕಟ್ಟಬೇಕೆಂಬ ಉದ್ದೇಶದಿಂದ ನಿವೇಶನಕ್ಕಾಗಿ ಜಯಂತಿಶೆಟ್ಟಿ ಅವರಲ್ಲಿ ಕೋರಿಕೊಂಡಾಗ ಅವರು ದಾನಿ ಪ್ರೇಮನಾಥ ಪೂಂಜಾ ಅವರೊಂದಿಗೆ ಮಾತುಕತೆ ನಡೆಸಿ ೫೧ ಸೆಂಟ್ ನಿವೇಶನ ಕೊಡಿಸಿದ್ದರು. ಆದರೆ ಅದನ್ನು ಕೆಲವರು ಸ್ವಂತ ಹೆಸರಿಗೆ ಮಾಡಿಸಿಕೊಂಡರು. ನಂತರ ಟ್ರಸ್ಟ್ ನೆಪದಲ್ಲಿ ಮಡಿಕೇರಿಯ ಕೆಲವರನ್ನು ಮಾತ್ರ ಸೇರಿಸಿಕೊಂಡು ಮಾಡಿದಾಗ ಎಲ್ಲ ತಾಲೂಕಿನವರನ್ನು ಸೇರಿಸಿಕೊಳ್ಳಬೇಕೆಂದು ಒತ್ತಾಯ ಬಂದಾಗ ಗೊಂದಲ ಉಂಟಾಯಿತು. ತಾನು ಅಧ್ಯಕ್ಷನಾದ ಬಳಿಕ ಟ್ರಸ್ಟ್ ಅನ್ನು ಸಂಘಕ್ಕೆ ಹಸ್ತಾಂತರಿಸುವAತೆ ಸಾಕಷ್ಟು ಬಾರಿ ಹೇಳಿದರೂ ಮಾಡಿಲ್ಲ, ಹಾಗಾಗಿ ಮಹಾಸಭೆ ಮಾಡಲು ಕೂಡ ಆಗಲಿಲ್ಲ. ಇದೀಗ ಕೆಲವರ ಒತ್ತಾಯದ ಮೇರೆಗೆ ಎಲ್ಲರನ್ನು ಸೇರಿಸಿ, ಮಹಾಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿರುವದಾಗಿ ಹೇಳಿದರು. ಸಂಘಕ್ಕೆ ಸೇರಿದ ತಾಳತ್ಮನೆಯ ಆಸ್ತಿಯನ್ನು ೨೫ ವರ್ಷಗಳ ಹಿಂದೆಯೇ ಮಾರಾಟ ಮಾಡಿರುವದಾಗಿ ಅವರು ಆರೋಪಿಸಿದರು.
ನೂತನ ಪದಾಧಿಕಾರಿಗಳು
ವೀರಾಜಪೇಟೆಯಲ್ಲಿ ಮೊನ್ನೆ ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿರುವುದಾಗಿ ಅಧ್ಯಕ್ಷ ರತ್ನಾಕರ ಶೆಟ್ಟಿ ತಿಳಿಸಿದರು. ಪ್ರಧಾನ ಕಾರ್ಯದರ್ಶಿಯಾಗಿ ಶಭರೀಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಸಿದ್ದಾಪುರದ ಪ್ರದಿಪ್ ಶೆಟ್ಟಿ, ಖಜಾಂಚಿಯಾಗಿ ವೀರಾಜಪೇಟೆಯ ಗಿರೀಶ್ ಶೆಟ್ಟಿ, ಜಂಟಿ ಕಾರ್ಯದಶಿಯಗಿ ಗೋಣಿಕೊಪ್ಪಲಿನ ಮದನ್ ರೈ ಹಾಗೂ ಸುರೇಶ್ ರೈ, ಸಂಚಾಲಕಿಯಾಗಿ ಬಿ.ಎಂ.ಜಯAತಿ ರೈ, ಗೌರವ ಅಧ್ಯಕ್ಷರುಗಳಾಗಿ ಬಿ.ಡಿ. ನಾರಾಯಣ ರೈ, ಕೆ.ಆರ್. ಬಾಲಕೃಷ್ಣ ರೈ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನೀತು ರೈ, ಪದ್ಮಾವತಿ ರೈ, ಕವಿತಾ ರೈ, ಜನಾರ್ದನ ರೈ, ಅಶ್ವಿನಿ ರೈ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಭರೀಶ್ ಶೆಟ್ಟಿ ಇದ್ದರು.