ಮಡಿಕೇರಿ, ಜ. ೯: ಮ್ಯಾನ್ಸ್ ಕಾಂಪೌAಡ್ ಕ್ಲಬ್(ಎಂಸಿಸಿ) ವತಿಯಿಂದ ಇಲ್ಲಿನ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾವಳಿಯಲ್ಲಿ (೫+೨) ಔಪಚಾರಿಕ ಪಂದ್ಯಾಟದಲ್ಲಿ ಭಾಗವಹಿಸಿದ್ದ ಕೊಡಗು ಪತ್ರಕರ್ತರ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
ಕೊಡಗು ಪತ್ರಕರ್ತರು, ಕೊಡಗು ಜಿಲ್ಲಾ ಪೊಲೀಸ್, ಎಂಸಿಸಿ ಲೆಜೆಂಡ್ಸ್ ತಂಡಗಳು ಪಾಲ್ಗೊಂಡಿದ್ದ ಪಂದ್ಯಾವಳಿಯಲ್ಲಿ ಮೊದಲ ಪಂದ್ಯದಲ್ಲಿ ಪತ್ರಕರ್ತರ ತಂಡವು ಪೊಲೀಸ್ ತಂಡವನ್ನು ೨-೦ ಗೋಲಿನಿಂದ ಸೋಲಿಸಿ ಫೈನಲ್ಗೇರಿತು. ಬಹುತೇಕ ಭಾರತ, ಕರ್ನಾಟಕ ತಂಡದ ಪರ ಆಡಿರುವ ಆಟಗರರನ್ನೊಳಗೊಂಡ ಎಂಸಿಸಿ ಲೆಜೆಂಡ್ಸ್ ತಂಡದ ನಡುವಿನ ಫೈನಲ್ ಪಂದ್ಯಾಟ ೨-೨ ಗೋಲಿನೊಂದಿಗೆ ಸಮನಾಯಿತು. ನಂತರದಲ್ಲಿ ಪೆನಾಲ್ಟಿ ಶೂಟ್ಔಟ್ನಲ್ಲಿಯೂ ೩-೩ ಗೋಲಿನಿಂದ ಸಮನಾಂತರ ಕಂಡಿತು. ಆ ಬಳಿಕ ನೀಡಲಾದ ಸಡನ್ ಡೆತ್ನಲ್ಲಿ ಲೆಜೆಂಡ್ಸ್ ತಂಡ ೧-೦ ಗೋಲಿನೊಂದಿಗೆ ಜಯಗಳಿಸಿದರೆ ಪತ್ರಕರ್ತರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಬಿಟಿವಿ ವರದಿಗಾರ ಸುರ್ಜಿತ್ ನಾಯಕತ್ವದ ಪತ್ರಕರ್ತರ ತಂಡದಲ್ಲಿ ‘ಶಕ್ತಿ’ ಉಪ ಸಂಪಾದಕ ಕುಡೆಕಲ್ ಸಂತೋಷ್, ಟಿವಿ೯ ವರದಿಗಾರ ಗೋಪಾಲ್ ಸೋಮಯ್ಯ, ಜನಮಿತ್ರ ವರದಿಗಾರ ಇಸ್ಮಾಯಿಲ್ ಕಂಡಕೆರೆ, ಕೊಡಗು ಲೈವ್ನ ಅಶೋಕ, ದಿನೇಶ್, ಬೆಂಜಮಿನ್ ಪಾಲ್ಗೊಂಡಿದ್ದರು. ಕೋಚ್ ಆಗಿ ವಿಸ್ತಾರ ಚಾನೆಲ್ನ ಮನೋಜ್, ಸಹಾಯಕರಾಗಿ ವಿಜಯವಾಣಿ ಛಾಯಾಗ್ರಾಹಕ ಲೋಕೇಶ್ ಕಾಟಕೇರಿ ಕಾರ್ಯನಿರ್ವಹಿಸಿದರು. ಲೆಜೆಂಡ್ಸ್ ತಂಡದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಬೆಪ್ಪುರನ ಅಣ್ಣಪ್ಪ, ಶಿವಣ್ಣ, ಸಂತೋಷ್ ಟ್ರೋಫಿ ಆಟಗಾರ, ಎಂಸಿಸಿ ಅಧ್ಯಕ್ಷ ಕ್ರಿಸ್ಟೋಫರ್, ಎಂಸಿಸಿಯ ಹಿರಿಯ ಆಟಗಾರರಾದ ಉಮೇಶ್ಕುಮಾರ್, ಪ್ರಸನ್ನ, ತೌಸಿಫ್, ಪೀಟರ್ ಆಟವಾಡಿದರು.