ಸುಂಟಿಕೊಪ್ಪ, ಜ. ೧೦: ಮಾದಾಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಟೇಟ್ ಆಫ್ ಇಂಡಿಯಾ ವತಿಯಿಂದ ಸಿ.ಎಸ್.ಆರ್. ಯೋಜನೆಯಡಿ ೪ ಲಕ್ಷದ ೪೫ ಸಾವಿರ ರೂ.ಗಳ ಮೌಲ್ಯದಲ್ಲಿ ನೀಡಿದ ಸ್ಮಾರ್ಟ್ಕ್ಲಾಸ್ ವಿಜ್ಞಾನ ಪ್ರಯೋಗಾಲಯವನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಉದ್ಘಾಟಿಸಿದರು. ನಂತರ ಜಿಲ್ಲಾಧಿಕಾರಿ ಡಾ. ಸತೀಶ ಮಾತನಾಡಿ, ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ವಿಜ್ಞಾನ ಪ್ರಯೋಗಾಲಯ ಸಹಕಾರಿಯಾಗಲಿದ್ದು, ಅವರ ಭವಿಷ್ಯ ರೂಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಡುಗೆ ಅನನ್ಯವಾದುದು. ಮಕ್ಕಳು ಇದರ ಸದುಪಯೋಗವನ್ನು ಬಳಸಿಕೊಂಡು ಉತ್ತಮ ಫಲಿತಾಂಶ, ಉನ್ನತ ಶಿಕ್ಷಣ ಪಡೆದು ಆರ್ಹ ಹುದ್ದೆ ಗಿಟ್ಟಿಸಿಕೊಂಡು ಪೋಷಕರಿಗೆ, ಸಮಾಜಕ್ಕೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೋಬಿ ಜೋಸ್, ಸದಸ್ಯರಾದ ಆರ್.ಎಂ. ವರಿಗಿಲಿ ಏಡುಕುಂಡಲಿ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಕೊಡಗು ಜಿಲ್ಲಾ ಪ್ರಾಥಮಿಕ ಶಾಲೆಯ ನೌಕÀರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ನಿರೂಪ, ಉಪಾಧ್ಯಕ್ಷೆ ಜ್ಯೋತಿ, ಗ್ರಾ.ಪಂ. ಸದಸ್ಯರುಗಳಾದ ಪಿ.ಡಿ. ಅಂತೋಣಿ, ಗಿರೀಶ, ಎಸ್‌ಬಿಐನ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು, ಪೋಷಕರು ಇದ್ದರು. ಮಾದಾಪುರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಅವರು ಸ್ವಾಗತಿಸಿ, ವಂದಿಸಿದರು.