ವೀರಾಜಪೇಟೆ, ಜ. ೯: ವಿದ್ಯಾರ್ಥಿಗಳು ಕ್ಷಣಿಕ ಸುಖಕ್ಕಾಗಿ ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದು ಸಮಾಜದಲ್ಲಿ ಉತ್ತಮ ಜೀವನವನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿ ಜೀವನದಿಂದಲೇ ಒಂದು ಗುರಿಯನ್ನು ಹೊಂದಿದ್ದರೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ. ಮಾಳೇಟಿರ ಕಾವೇರಪ್ಪ ಹೇಳಿದರು.
ವೀರಾಜಪೇಟೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಮನಸ್ಸು ಚಂಚಲವಾಗಿರುತ್ತದೆ. ಚಂಚಲ ಮನಸ್ಸನ್ನು ಹೋಗಲಾಡಿಸಲು ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ತಮ್ಮ ಮಕ್ಕಳು ಬದುಕು ಹಾಗೂ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಪೋಷಕರು ಹೇಳುವ ಬುದ್ಧಿಮಾತುಗಳಿಗೆ ಬದ್ಧತೆಯನ್ನು ತೋರಿಸಿ ನಿಮ್ಮಲ್ಲಿ ಹುದುಗಿರುವ ಅಗಾಧ ಶಕ್ತಿ ಪ್ರತಿಭೆಯನ್ನು ಬದುಕಿನ ಒಳಿತಿಗಾಗಿ ಬಳಸಿಕೊಳ್ಳಬೇಕು. ಸರಕಾರಿ ವಿದ್ಯಾಸಂಸ್ಥೆ ಎಂಬ ಕೀಳರಿಮೆಯನ್ನು ಬಿಡಬೇಕು. ಅನೇಕರು ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗೆ ಏರಿ ಹಿರಿಮೆ ತೋರಿದ್ದಾರೆ. ತಾವುಗಳು ಕೂಡ ಅವರಂತೆಯೇ ಮುನ್ನಡೆಯುವಂತೆ ಕಿವಿಮಾತು ಹೇಳಿದರು. ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಈವರೆಗೆ ನಡೆಸಿದ ಪಠ್ಯೇತರ ಚಟುವಟಿಕೆಗಳಿಗೆ ವಿರಾಮ ಹಾಕಿ ಇನ್ನು ಪಠ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಕಾಲ ಸನ್ನಿಹಿತವಾಗಿದೆ. ಕಳೆದು ಹೋದ ಕಾಲವನ್ನು ಚಿಂತಿಸದೆ ಮುಂದೆ ಎದುರಿಸುವ ಪರೀಕ್ಷೆಗಳಿಗೆ ಸಿದ್ಧರಾಗಿ. ತಾವು ವ್ಯಾಸಂಗ ಮಾಡುತ್ತಿರುವ ಸಂಸ್ಥೆ ಹಾಗೂ ಪೋಷಕರಿಗೆ ಉತ್ತಮ ಹೆಸರು ಗಳಿಸುವೆ ಎಂಬ ವಾಗ್ದಾನ ಮಾಡಿಕೊಳ್ಳಿ ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ವೀರಾಜಪೇಟೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ, ಉಪ ಪ್ರಾಂಶುಪಾಲೆ ಪ್ರತಿಕಾ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಜೋಕಿಂ ರಾಡ್ರಿಗಸ್, ಆಶಾ ಸುಬ್ಬಯ್ಯ, ಪೋಷಕರ ಸದಸ್ಯ ತೋಲ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ. ಮಾಳೇಟಿರ ಕಾವೇರಪ್ಪ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟರಾಜು ಇವರನ್ನು ಸನ್ಮಾನಿಸಲಾಯಿತು.