(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜ. ೯ : ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಮುಖ್ಯ ರಸ್ತೆ ಹಾಗೂ ಬಸ್ ನಿಲ್ದಾಣದ ಬಳಿಯಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಯ ಹಲವರು ವಾಹನಗಳನ್ನು ನಿಲ್ಲಿಸಿಕೊಂಡು ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದ್ದು ಪೊಲೀಸರಿಗೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಕೊಡಗಿನ ಪ್ರತಿಷ್ಠಿತ ಪಂಚಾಯಿತಿಗಳಲ್ಲೊAದಾದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಈ ಬಗ್ಗೆ ಕಿಂಚಿತ್ತೂ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ವ್ಯಾಪಾರಿಗಳು ವ್ಯಾನ್‌ಗಳಲ್ಲಿ ಹಾಗೂ ಲಾರಿಗಳಲ್ಲಿ ವಸ್ತುಗಳನ್ನು ತುಂಬಿಕೊAಡು ರಸ್ತೆ ಮಾರ್ಗದಲ್ಲಿ ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ವಾಹನ ನಿಲುಗಡೆಯ ಸ್ಥಳವನ್ನು ಆಕ್ರಮಿಸುವುದಲ್ಲದೆ ಸಾರ್ವಜನಿಕರು ವ್ಯಾಪಾರಕ್ಕೆ ತೆರಳುತ್ತಿರುವುದರಿಂದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಪ್ರಮುಖವಾಗಿ ಜನನಿಬಿಡ ಪ್ರದೇಶದಲ್ಲಿ ಇಂತಹ ವ್ಯಾಪಾರ ವಹಿವಾಟುಗಳು ಯಾವುದೇ ಭಯವಿಲ್ಲದಂತೆ ನಡೆಯುತ್ತಿದೆ.

ಮುಖ್ಯರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವುದು ಟ್ರಾಫಿಕ್ ಜಾಮ್‌ಗೆ ಮೂಲ ಕಾರಣವಾಗಿದೆ. ನಗರದ ಕೆಲವು ಮುಖ್ಯ ರಸ್ತೆಗಳ ಬದಿಯಲ್ಲಿ ವರ್ಕ್ಶಾಪ್ ತೆರೆದುಕೊಂಡು ಫುಟ್‌ಪಾತ್ ಅನ್ನು ಅತಿಕ್ರಮಣ ಮಾಡಿಕೊಂಡು ದ್ವಿಚಕ್ರ ವಾಹನಗಳನ್ನು ರಿಪೇರಿ ಮಾಡುತ್ತಿರುವುದು ಕೂಡ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಕೆಲವು ಅಂಗಡಿ ಮಾಲೀಕರು ತಮ್ಮ ತಮ್ಮ ಅಂಗಡಿಯ ನಾಮಫಲಕಗಳನ್ನು ಫುಟ್‌ಪಾತ್‌ನ ಮೇಲೆ ಅಳವಡಿಸಿಕೊಂಡು ರಸ್ತೆ ಸಂಚಾರಕ್ಕೆ ತೊಡಕುಂಟಾಗುತ್ತಿದೆ.

ಪೊನ್ನಂಪೇಟೆ ಮುಖ್ಯ ರಸ್ತೆಯ ಚೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಪ್ರತಿನಿತ್ಯ ಹಲವು ವಾಹನಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಈ ಭಾಗದಲ್ಲಿ ಸಾರ್ವಜನಿಕರಿಗೆ ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶ ಇಲ್ಲದಂತಾಗಿದೆ. ಚೆಸ್ಕಾಂ ಕಚೇರಿಗೆ ತೆರಳುವ ಗ್ರಾಹಕರು ತಮ್ಮ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿಕೊಂಡು ವ್ಯಾಪಾರದಲ್ಲಿ ತೊಡಗಿರುವುದರಿಂದ ಈ ಭಾಗದಲ್ಲಿ ನಿರಂತರ ಸಮಸ್ಯೆ ಎದುರಾಗುತ್ತಿದೆ.

ಪೊನ್ನಂಪೇಟೆ ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗಳ ನಿಲುಗಡೆಗೆ ನಿಷೇಧವಿದ್ದರೂ ಖಾಸಗಿ ಬಸ್‌ಗಳು ಈ ಭಾಗದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದರಿಂದ ಮೈಸೂರು - ಗೋಣಿಕೊಪ್ಪ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗಿದೆ. ಖಾಸಗಿ ಬಸ್‌ಗಳಿಗೆ ಜಂಕ್ಷನ್‌ನಿAದ ಅನತಿ ದೂರದಿಂದ ಪೆಟ್ರೋಲ್ ಬಂಕ್ ಬಳಿ ನಿಲುಗಡೆಗೆ ಅವಕಾಶ ನೀಡಿದ್ದರೂ ಯಾವುದೇ ರೀತಿಯ ನಿಲುಗಡೆ ಈ ಭಾಗದಲ್ಲಿ ನಡೆಯುತ್ತಿಲ್ಲ.

ನಗರದ ಅರ್ವತೋಕ್ಲು ಭಾಗಕ್ಕೆ ತೆರಳುವ ರಸ್ತೆಯ ಎರಡು ಬದಿಗಳಲ್ಲಿ ದ್ವಿಚಕ್ರ ವಾಹನಗಳು ಹೆಚ್ಚಾಗಿ ನಿಲುಗಡೆಯಾಗುತ್ತಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ನಡೆಸಲು ತೀವ್ರ ಅಡಚಣೆ ಎದುರಾಗಿದೆ. ನಗರದ ಆಸ್ಪತ್ರೆಗೆ ತೆರಳುವ ಮುಖ್ಯ ದ್ವಾರದ ಬಳಿ ವಾಹನಗಳು ನಿಲುಗಡೆಯಾಗುತ್ತಿರುವುದರಿಂದ ಆಸ್ಪತ್ರೆಗೆ ತೆರಳುವ ಆ್ಯಂಬ್ಯುಲೆನ್ಸ್ ಹಾಗೂ ಇತರ ರೋಗಿಗಳನ್ನು ಹೊತ್ತು ತರುವ ವಾಹನಗಳಿಗೆ ಸಮಸ್ಯೆ ಎದುರಾಗಿದೆ.

ಬಸ್ ನಿಲ್ದಾಣದ ಎದುರು ಮುಖ್ಯರಸ್ತೆಯಲ್ಲಿ ಖಾಸಗಿ ಬಸ್‌ಗಳಿಗೆ ಹೆಚ್ಚಿನ ಸಮಯ ನಿಲುಗಡೆಗೆ ಅವಕಾಶವಿಲ್ಲದಿದ್ದರೂ ಬಹುತೇಕ ಖಾಸಗಿ ವಾಹನಗಳು ನಿಲ್ದಾಣದಲ್ಲಿಖಾಲಿ ಜಾಗವಿದ್ದರೂ ಮುಖ್ಯ ರಸ್ತೆ ಬದಿಯಲ್ಲಿಯೇ ವಾಹನ ನಿಲುಗಡೆಗೊಳಿಸಿ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆೆ. ನಿಲ್ದಾಣ ಆಸುಪಾಸಿನಲ್ಲಿ ಆಟೋರಿಕ್ಷಾಗಳು ಅಡ್ಡಾದಿಡ್ಡಿ ಸಂಚರಿಸುವುದು ಸರ್ಕಾರಿ ಬಸ್ ಬಂದ ವೇಳೆ ಬಸ್‌ನ ಹಿಂಭಾಗದಲ್ಲಿ ಪ್ರಯಾಣಿಕರನ್ನು ಪಿಕ್‌ಅಪ್ ಮಾಡಲು ಪೈಪೊಟಿ ನಡೆಸುವುದರಿಂದಲೂ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

ಮುಖ್ಯರಸ್ತೆಯಿಂದ ಮಾರ್ಕೆಟ್‌ಗೆ ಪ್ರವೇಶಿಸುವ ಮಾರ್ಗದಲ್ಲಿ ವಾಹನಗಳು ಹೆಚ್ಚಾಗಿ ನಿಲುಗಡೆಯಾಗುತ್ತಿವೆ. ಇದರಿಂದ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಮಾರ್ಕೆಟ್ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ನಿಷೇಧವಿದ್ದರೂ ಈ ಭಾಗದಲ್ಲಿ ನಿರಂತರ ವಾಹನಗಳ ನಿಲುಗಡೆಯಾಗುತ್ತಿದೆ. ಇದರಿಂದ ವಾಹನ ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ. ಒಟ್ಟಿನಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಪೊಲೀಸರು ಇಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ್ದಲ್ಲಿ ನಗರದ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ.