(ವರದಿ : ಪ್ರಜ್ವಲ್ ಜಿ.ಆರ್.)
ಮಡಿಕೇರಿ, ಜ. ೯: ದಟ್ಟ ಕಾನನದ ನಡುವೆ, ಯಾವುದೇ ಕೃತಕ ಬೆಳಕಿನ ಪ್ರಭಾವವಿಲ್ಲದಿರುವ ತಲಕಾವೇರಿಯ ಚಳಿಗಾಲದ ಮೋಡ ರಹಿತ ಸ್ಪಷ್ಟ ಆಗಸವು ಖಗೋಳಾಸಕ್ತರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಖಗೋಳಾಸಕ್ತರ ಪೈಕಿ ಬೆಂಗಳೂರಿನ ಬಿ.ಎ.ಎಸ್(ಬೆಂಗಳೂರು ಅಸ್ಟೊçÃನಾಮಿಕಲ್ ಸೊಸೈಟಿ) ಸದಸ್ಯರು ಕಳೆದ ೩ ವರ್ಷಗಳಿಂದ ಪ್ರತಿ ವರ್ಷ ನವೆಂಬರ್, ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯ ಮೋಡ ರಹಿತ ಮಳೆ ಇಲ್ಲದ ವಾತಾವರಣದಲ್ಲಿ ತಲಕಾವೇರಿ ವ್ಯಾಪ್ತಿಯ ಖಾಸಗಿ ರೆಸಾರ್ಟ್ನಲ್ಲಿ ‘ಸ್ಟಾರ್ ಪಾರ್ಟಿ’ ಆಯೋಜಿಸುತ್ತಾ ಬಂದಿದ್ದು, ನಕ್ಷತ್ರ, ಗ್ರಹ, ತಾರಾಗಣ(ಗ್ಯಾಲೆಕ್ಸಿ) ಸೇರಿದಂತೆ ಬಾಹ್ಯಾಕಾಶದ ಇತರ ವಿಸ್ಮಯಗಳನ್ನು ವೀಕ್ಷಿಸುವುದಲ್ಲದೆ ಪರಸ್ಪರ ವಿಚಾರ ವಿನಿಮಯ, ಜ್ಞಾನ ಹಂಚಿಕೆ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಕ್ಷತ್ರ ವೀಕ್ಷಣೆಗೆ ಪ್ರಮುಖವಾಗಿ ಬೆಳಕು ರಹಿತ ವಾತಾವರಣ ಅಗತ್ಯವಿದೆ. ಬೆಂಗಳೂರು ಸೇರಿದಂತೆ ಇತರ ಮಹಾನಗರಗಳಲ್ಲಿ ರಾತ್ರಿಯೂ ಕೃತಕ ಬೆಳಕಿನ ವಾತಾವರಣ ವಿರುವುದರಿಂದ ಅತ್ಯಾಧುನಿಕ ಟೆಲಿಸ್ಕೋಪ್ಗಳ ಸಹಾಯದಲ್ಲೂ ಖಗೋಳ ವೀಕ್ಷಣೆ ಕಷ್ಟಸಾಧ್ಯವಾಗಲಿದೆ. ಕೊಡಗಿನ ಪರಿಸರವು ಬಹುತೇಕ ಕೃತಕ ಬೆಳಕು ರಹಿತವಾಗಿದ್ದು, ದಕ್ಷಿಣ ಕೊಡಗಿನ ಹಲವು ಭಾಗಗಳು ಖಗೋಳವೀಕ್ಷಣೆಗೆ ಉತ್ತಮ ತಾಣವಾಗಿದೆ. ಬಿ.ಎ.ಎಸ್ ಸದಸ್ಯರು ಈ ಹಿಂದೆ ದಕ್ಷಿಣ ಕೊಡಗಿನಲ್ಲಿ ನಕ್ಷತ್ರ ವೀಕ್ಷಣೆ ಆಯೋಜಿಸುತ್ತಾ ಬಂದಿದ್ದರು. ನಾಪೋಕ್ಲಿನಲ್ಲಿಯೂ ಕೆಲವು ಬಾರಿ ‘ಸ್ಟಾರ್ ಪಾರ್ಟಿ’ ಆಯೋಜನೆ ಮಾಡಿದ್ದ ಬಿ.ಎ.ಎಸ್. ಇದೀಗ ತಲಕಾವೇರಿಯಂತಹ ಜನರಹಿತ, ಕೃತಕ ಬೆಳಕು ರಹಿತ ಪ್ರದೇಶದಲ್ಲಿ ಖಗೋಳ ವೀಕ್ಷಣೆಯಲ್ಲಿ ತೊಡಗಿದ್ದಾರೆ.
೨೦೧೦ ರಂದು ಪ್ರಾರಂಭವಾದ ಬಿ.ಎ.ಎಸ್, ಸಮಾನ ಮನಸ್ಕರನ್ನು ಒಂದುಗೂಡಿಸಿ ಗೂಗಲ್ ಗ್ರೂಪ್ಸ್, ಟೆಲಿಗ್ರಾಮ್ ಜಾಲತಾಣಗಳ ಮುಖಾಂತರ ತನ್ನ ೧,೨೦೦ ಕ್ಕೂ ಹೆಚ್ಚು ಸದಸ್ಯರಿಗೆ ‘ಸ್ಟಾರ್ ಪಾರ್ಟಿ’ಗಳ ಬಗ್ಗೆ ಮಾಹಿತಿ ನೀಡುತ್ತದೆ.
(ಮೊದಲ ಪುಟದಿಂದ) ಪ್ರತಿ ಸ್ಟಾರ್ ಪಾರ್ಟಿಯಲ್ಲಿ ಕನಿಷ್ಟ ೩೦ ರಿಂದ ಗರಿಷ್ಠ ೫೦ ಮಂದಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ಹಿಂದೆ ತಮಿಳುನಾಡಿನ ಯಳಗಿರಿ ಬೆಟ್ಟ ಪ್ರದೇಶ ಸೇರಿದಂತೆ ಇತರ ಕೆಲವು ಬೆಳಕು ಮಾಲಿನ್ಯ ರಹಿತ ಪ್ರದೇಶಗಳಲ್ಲಿ ‘ಸ್ಟಾರ್ ಪಾರ್ಟಿ’ ಆಯೋಜನೆ ಮಾಡುತ್ತಿದ್ದ ಬಿ.ಎ.ಎಸ್ ಕೊಡಗಿನಲ್ಲಿ ಮೊದಲಿಗೆ ೨೦೧೩ ರಲ್ಲಿ ವೀರಾಜಪೇಟೆಯ ಗ್ರಾಮೀಣ ಭಾಗಗಳಲ್ಲಿ, ನಾಪೋಕ್ಲುವಿನಲ್ಲಿ ನಂತರ ೨೦೨೦ ರಿಂದೀಚೆಗೆ ತಲಕಾವೇರಿಯಲ್ಲಿ ‘ಸ್ಟಾರ್ ಪಾರ್ಟಿ’ ನಡೆಸುತ್ತಿದೆ.
ಅಮಾವಾಸ್ಯೆ ವಾರಾಂತ್ಯ ಸೂಕ್ತ
ಮೋಡ ರಹಿತ ವಾತಾವರಣವಿದ್ದರೂ ಸುತ್ತಮುತ್ತ ಬೆಳಕಿದ್ದರೆ ನಕ್ಷತ್ರ ವೀಕ್ಷಣೆ ಕಷ್ಟಸಾಧ್ಯ. ಆದ ಕಾರಣ ನಗರ ಪ್ರದೇಶಗಳಿಂದ ಹೊರವಲಯದಲ್ಲಿರುವ ತಲಕಾವೇರಿ ಇಂತಹ ಖಗೋಳವೀಕ್ಷಣೆಗೆ ಸೂಕ್ತ ಸ್ಥಳ. ಆದರೂ, ಹುಣ್ಣಿಮೆ ದಿನ ಅಥವಾ ಹುಣ್ಣಿಮೆಗೆ ಆಸುಪಾಸು ದಿನಗಳಲ್ಲಿ (ಶುಕ್ಲ ಪಕ್ಷದ ೧೫ ದಿನಗಳಲ್ಲಿ) ಚಂದ್ರನ ಪ್ರಕಾಶಮಾನದಿಂದಾಗಿ ಖಗೋಳದಲ್ಲಿ ನಕ್ಷತ್ರ ಗ್ರಹಗಳ ಸ್ಪಷ್ಟ ಗೋಚರ ಸುಲಭವಲ್ಲ. ಆದುದರಿಂದ ಅಮಾವಾಸ್ಯೆ ಹಾಗೂ ಅಮಾವಾಸ್ಯೆ ಆಸುಪಾಸಿನ ದಿನಗಳಲ್ಲಿಯೇ (ಕೃಷ್ಣ ಪಕ್ಷ) ‘ಸ್ಟಾರ್ ಪಾರ್ಟಿ’ ನಡೆಸಲು ಸೂಕ್ತ.
ಜನವರಿ ೨೦ ರಿಂದ ೨೩ ರವರೆಗೆ ಮುಂದಿನ ‘ಸ್ಟಾರ್ ಪಾರ್ಟಿ’
ಕಳೆದ ವರ್ಷ, ಅಂದರೆ ೨೦೨೨ರ ಡಿಸೆಂಬರ್ ೨೩ ರಿಂದ ೨೭ ರವರೆಗೆ ತಲಕಾವೇರಿಯಲ್ಲಿ ನಕ್ಷತ್ರ ವೀಕ್ಷಣೆ ಆಯೋಜಿಸಿದ್ದ ಬೆಂಗಳೂರು ಅಸ್ಟೊçÃನಾಮಿಕಲ್ ಸೊಸೈಟಿ ಈ ವರ್ಷ ತನ್ನ ಮೊದಲ ‘ಸ್ಟಾರ್ ಪಾರ್ಟಿ’ಯನ್ನು ಜನವರಿ ೨೦ ರಿಂದ ೨೩ ರವರೆಗೆ ತಲಕಾವೇರಿಯ ಖಾಸಗಿ ರೆಸಾರ್ಟ್ ಒಂದರಲ್ಲಿ ಆಯೋಜಿಸಿದೆ. ಜನವರಿ ೨೧ ಅಮಾವಾಸ್ಯೆ ಆಗಿರುವುದರಿಂದ ನಕ್ಷತ್ರ ವೀಕ್ಷಣೆ ಸುಲಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಬಿ.ಎ.ಎಸ್ನ ಗೂಗಲ್ ಗ್ರೂಪ್ಸ್ ಲಿಂಕ್ ‘hಣಣಠಿs://gಡಿouಠಿs.googಟe.ಛಿom/g/b-ಚಿ-s’ ಮೂಲಕ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ.