ಕನ್ನಡ ನಾಡಿನ ಅಭಿವೃದ್ಧಿಗೆ ಪೂರಕವಾಗಿರುವ ಅಂಶಗಳ ಅನುಷ್ಠಾನಕ್ಕೆ ಬದ್ಧ: ಸಿಎಂ ಬೊಮ್ಮಾಯಿ

ಹಾವೇರಿ, ಜ. ೮: ಕನ್ನಡ ನಾಡಿನ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲಾ ಅಂಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಸಮಾರೋಪಗೊಳ್ಳುತ್ತಿದೆ. ಕಳೆದ ಎರಡು ದಿನಗಳಿಂದ ಸಾಹಿತ್ಯದ ಕಂಪು ಇಡೀ ಕರ್ನಾಟಕಕ್ಕೆ ಪಸರಿಸಿದೆ. ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದು, ವಿವಿಧ ಗೋಷ್ಠಿಗಳು ನಡೆದು, ಸಾಹಿತಿಗಳು ಪಾಲ್ಗೊಂಡಿದ್ದಾರೆ. ಸಾಹಿತಿಗಳ ಅನಿಸಿಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ವ್ಯವಸ್ಥಿತವಾಗಿ ನನ್ನ ತವರು ಜಿಲ್ಲೆಯಲ್ಲಿ ಎಲ್ಲರೂ ಸೇರಿ ನಡೆಸಿದ್ದು ಸಂತೋಷ ತಂದಿದೆ. ಬೆಳಗಾವಿಯಲ್ಲಿ ಶ್ರೀರಾಮ ಸೇನೆಯ ಅಧ್ಯಕ್ಷರ ಮೇಲೆ ಗುಂಡಿನ ದಾಳಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪೊಲೀಸರಿಗೆ ಈಗಾಗಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿ ತಪ್ಪಿತಸ್ಥರನ್ನು ಬಂಧಿಸಿ ಕೂಡಲೇ ಕಾರ್ಯಾಚರಣೆ ಮಾಡಲು ತಿಳಿಸಿದ್ದೇನೆ ಎಂದರು.

ಬಿಜೆಪಿ ವಿರುದ್ಧ ಹರಿಹಾಯ್ದ ಕೈ ನಾಯಕರು

ಚಿತ್ರದುರ್ಗ, ಜ. ೮: ಕೋಟೆನಾಡು ಚಿತ್ರದುರ್ಗದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿAದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಸಮುದಾಯಗಳ ಐಕ್ಯತಾ ಸಮಾವೇಶ ನಡೆಯಿತು.ಈ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೈ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದರು. ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಪರಿಶಿಷ್ಟ ಸಮುದಾಯದವರು ಛಿದ್ರವಾದರೆ ಕೇಳುವವರು ಯಾರೂ ಇರುವುದಿಲ್ಲ. ಪರಿಶಿಷ್ಟರಲ್ಲಿ ಒಗ್ಗಟ್ಟು ಇಲ್ಲದಿದ್ದರೆ ನಿಮ್ಮನ್ನು ಬ್ರಿಟೀಷರಂತೆ ತುಂಡು ತುಂಡಾಗಿ ವಿಭಜಿಸಿ ಒಡೆದು ಆಳುತ್ತಾರೆ ಎಂದರು. ಯಾರಿಗೆ ಅಧಿಕಾರ ಸಿಗಲಿದೆ ಎಂಬುದಕ್ಕಿAತ ನಿಮ್ಮ ಹಿತಾಸಕ್ತಿ, ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು. ನಾವು ದಲಿತರು, ಶೋಷಿತರು, ಹಿಂದುಳಿದವರ ಜತೆ ಅಧಿಕಾರವನ್ನು ಹಂಚಿಕೊಳ್ಳುತ್ತೆವೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮಾಜದವರು ಅಧಿಕಾರಕ್ಕೆ ಬಂದAತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನುಡಿದರು. ಶೋಷಿತ ಸಮುದಾಯಗಳ ಜನರ ಸಮಾನತೆಯ ಕೂಗಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಧನಿಗೂಡಿಸಿದರು.

ಚಂದ್ರಬಾಬು ನಾಯ್ಡು ಭೇಟಿಯಾದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್

ಅಮರಾವತಿ, ಜ. ೮: ಆಂಧ್ರಪ್ರದೇಶದಲ್ಲಿ ಟಿಡಿಪಿ ಹಾಗೂ ಜನಸೇನಾ ಮೈತ್ರಿ ವದಂತಿ ಹಬ್ಬಿರುವಂತೆಯೇ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭಾನುವಾರ ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಮುಂದಿನ ವರ್ಷ ನಡೆಯಲಿರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಎದುರಾಳಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ಸೋಲಿಸಲು ಪಣ ತೊಟ್ಟಿರುವ ಪವನ್ ಕಲ್ಯಾಣ್, ಪ್ರತಿಪಕ್ಷಗಳ ಮತಗಳು ಚದುರದಂತೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರ ಜುಬಿಲಿ ಹಿಲ್ಸ್ ನಲ್ಲಿನ ಉಭಯ ಪಕ್ಷಗಳ ಮುಖಂಡರು ಭೇಟಿಯಾಗಿದ್ದು, ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ. ಪ್ರಸ್ತುತ ಜನಸೇನಾ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ ಟಿಡಿಪಿ ೨೦೧೮ರಿಂದ ಬಿಜೆಪಿಯೊಂದಿಗೆ ಸಖ್ಯ ತೊರೆದು ಏಕಾಂಗಿಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಜಯ ವಾಡದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದರು. ಅಲ್ಲಿಂದಾಚೆಗೆ ಇಲ್ಲಿಯವರೆಗೂ ಉಭಯ ನಾಯಕರ ನಡುವೆ ಯಾವುದೇ ಭೇಟಿ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.

ರಜೌರಿ ಉಗ್ರರ ದಾಳಿ ಪ್ರಕರಣ: ಮತ್ತೊಬ್ಬ ನಾಗರಿಕ ಸಾವು

ಶ್ರೀನಗರ, ಜ. ೮: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಹೊಸ ವರ್ಷದ ದಿನದಂದೇ ಉಗ್ರರು ನಡೆಸಿದ ಗುಂಡಿನ ದಾಳಿ ಘಟನೆಗೆ ಸಂಬAಧಿಸಿದAತೆ ಮೃತರ ಸಂಖ್ಯೆ ೭ಕ್ಕೆ ಏರಿಕೆಯಾಗಿದೆ ಎಂದು ಭಾನುವಾರ ತಿಳಿದುಬಂದಿದೆ. ರಜೌರಿಯ ಡ್ಯಾಂಗ್ರಿ ಪ್ರದೇಶದಲ್ಲಿ ೩ ಮನೆಗಳ ಮೇಲೆ ಉಗ್ರರು ಜನವರಿ ೧ ರಂದು ದಾಳಿ ನಡೆಸಿದ್ದರು. ಈ ವೇಳೆ ಮೂವರು ಸ್ಥಳದಲ್ಲಿಯೇ ಸಾವ್ನಪ್ಪಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೂವರು ಸಾವನ್ನಪ್ಪಿದ್ದರು. ಇದೀಗ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದು, ಘಟನೆ ಸಂಬAಧ ೭ ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದರಾದರೂ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದರು.

ಬೈಕ್‌ಗೆ ಡಿಕ್ಕಿಯಾದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್, ಇಬ್ಬರು ಸಾವು

ಚೆನ್ನೈ, ಜ. ೮: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ. ಕರ್ನಾಟಕ ಗಡಿಭಾಗದ ಕೃಷ್ಣಗಿರಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ದ್ವಿಚಕ್ರ ವಾಹನಕ್ಕೆ ಗುದ್ದಿದ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ ತಗುಲಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಆದರೆ, ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಿರುವಿನಲ್ಲಿ ಬೈಕ್ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕರು ಸುರಕ್ಷಿತವಾಗಿ ಹೊರಗೆ ಹಾರಿದ್ದಾರೆ. ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಗಳ ವಿವರಗಳನ್ನು ಪೊಲೀಸರು ಇದುವರೆಗೆ ಖಚಿತಪಡಿಸಿಲ್ಲ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.

ಪಾಕ್ ಪ್ರಜೆ ಸೇರಿದಂತೆ ಐವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಲೂಧಿಯಾನ, ಜ. ೮: ೨೦೨೧ರ ಡಿಸೆಂಬರ್‌ನಲ್ಲಿ ಲೂಧಿಯಾನ ನ್ಯಾಯಾಲಯದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿದAತೆ ಪಾಕಿಸ್ತಾನಿ ಪ್ರಜೆ ಸೇರಿದಂತೆ ಐವರ ವಿರುದ್ಧ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿದೆ. ಈ ಸ್ಫೋಟದಲ್ಲಿ ಶಂಕಿತ ಉಗ್ರ ಸಾವನ್ನಪ್ಪಿದ್ದ, ಇತರ ಆರು ನಾಗರಿಕರು ಗಾಯಗೊಂಡಿದ್ದರು. ಈ ಸ್ಫೋಟ ಸಂಬAಧ ಆರಂಭದಲ್ಲಿ ಪಂಜಾಬಿನ ಲೂಧಿಯಾನ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಜನವರಿ ೧೩, ೨೦೨೨ರಲ್ಲಿ ಎನ್‌ಐಎ ಮತ್ತೆ ಕೇಸ್ ದಾಖಲಿಸಿತ್ತು.

ಪತ್ರಕರ್ತ ಕೆ. ಸತ್ಯನಾರಾಯಣ ನಿಧನ

ಬೆಂಗಳೂರು, ಜ. ೮: ಹಿರಿಯ ಪತ್ರಕರ್ತ ಮತ್ತು ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕರಾದ ಕೆ. ಸತ್ಯನಾರಾಯಣ (೮೨) ಭಾನುವಾರ ನಿಧನರಾದರು. ಬೆಂಗಳೂರಿನ ಜಯನಗರದ ಎಲ್‌ಐಸಿ ಕಾಲೋನಿಯಲ್ಲಿನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಸತ್ಯನಾರಾಯಣ ಅವರು ಇಂಡಿಯನ್ ಎಕ್ಸ್ಪ್ರೆಸ್ ಸೇರಿದಂತೆ ಪ್ರತಿಷ್ಠಿತ ಸುದ್ದಿ ಸಂಸ್ಥೆಗಳೊAದಿಗೆ ಕೆಲಸ ಮಾಡಿದ್ದರು ಮತ್ತು ಕನ್ನಡ ಪ್ರಭದಲ್ಲಿ ಅವರ ಜನಪ್ರಿಯ ಅಂಕಣಗಳಾದ ನಗರ ಪ್ರದಕ್ಷಿಣೆ ಮತ್ತು ವ್ಯಕ್ತಿ ವಿಚಾರ ಮೂಲಕ ಸಾಕಷ್ಟು ಗಮನ ಮತ್ತು ಜನಪ್ರಿಯತೆಯನ್ನು ಗಳಿಸಿದರು. ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲಿ ಸರಳ ಶೈಲಿಯಲ್ಲಿ ಬರೆಯುತ್ತಿದ್ದರು. ಅವರು ಹಣಕಾಸು, ವ್ಯವಹಾರ ಮತ್ತು ಬಜೆಟ್ ವರದಿಗಾರಿಕೆಯಲ್ಲಿ ಪರಿಣತರಾಗಿದ್ದರು. ಅವರ ನಿವಾಸದಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದ್ದು, ಮೃತರು ಪತ್ನಿ ವೆಂಕಮ್ಮ ಹಾಗೂ ಪುತ್ರಿ ಅಪೂರ್ವ ಅವರನ್ನು ಅಗಲಿದ್ದಾರೆ.