ಸೋಮವಾರಪೇಟೆ, ಜ.೯: ತಮ್ಮ ಜೀವನದ ಅಂತಿಮ ಕ್ಷಣದವರೆಗೂ ಸಮಾಜಕ್ಕಾಗಿಯೇ ಬದುಕಿದ ತ್ರಿವಿಧ ದಾಸೋಹಿ ತುಮಕೂರು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳು ಸಮಾಜಕ್ಕೆ ನೀಡಿದ ಕೊಡುಗೆಗಳು ಅನನ್ಯವಾದುದು ಎಂದು ಪ್ರಸ್ತುತ ಪೀಠಾಧ್ಯಕ್ಷರಾಗಿರುವ ಶ್ರೀಸಿದ್ಧಲಿಂಗ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ವತಿಯಿಂದ ಪಟ್ಟಣದ ಸಾಕ್ಷಿ ಸಭಾಂಗಣದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳು ಸ್ವಾತಂತ್ರö್ಯ ಪೂರ್ವದಲ್ಲೇ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಹೊಂದಿದ್ದರು. ಯಾವೊಂದು ಮಗುವೂ
(ಮೊದಲ ಪುಟದಿಂದ) ಕೂಡ ಬಡತನದ ಕಾರಣಕ್ಕಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾಳಜಿ ಹೊಂದಿದ್ದ ಶ್ರೀಗಳು, ಮಠದಲ್ಲಿ ವಾರ್ಷಿಕ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿಯೊಂದಿಗೆ ಶಿಕ್ಷಣ ನೀಡಿದ ಸಂತ ಶ್ರೇಷ್ಠರು ಎಂದು ಬಣ್ಣಿಸಿದರು.
ಇದರೊಂದಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಜ್ಞಾನ ದಾಸೋಹಿಗಳಾಗಿ ಸಾಮಾಜಿಕ ಸೇವೆಗೆ ಮುನ್ನುಡಿ ಬರೆದ ಶ್ರೀಗಳು, ಲಕ್ಷಾಂತರ ಮನೆಗಳಿಗೆ ವಿದ್ಯೆಯ ಮೂಲಕ ಭವಿಷ್ಯ ಕಟ್ಟಿಕೊಟ್ಟವರಾಗಿದ್ದಾರೆ. ಲಕ್ಷಾಂತರ ಮಂದಿ ಮಠದ ಶಾಲೆಗಳಲ್ಲಿ ಕಲಿತು ಇಂದು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು, ಸಮಾಜವನ್ನು ಪ್ರೀತಿಯಿಂದ ತನ್ನ ತೆಕ್ಕೆಗೆ ತೆಗೆದುಕೊಂಡ ಮಹಾನ್ ಸಂತ ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಬದುಕನ್ನೇ ಸಮಾಜಕ್ಕೆ ಅರ್ಪಿಸಿಕೊಂಡಿದ್ದರು. ಅವರ ಹೆಸರಿನಲ್ಲಿ ಸೋಮವಾರಪೇಟೆಯಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ಒಪ್ಪಿಸಿರುವುದು ಉತ್ತಮ ಕಾರ್ಯ ಎಂದರು.
ಮತ್ತೋರ್ವ ಅತಿಥಿ, ಬಸವಾಪಟ್ಟಣ ತೋಟಂದಾರ್ಯ ಮಠಾಧೀಶರಾದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸಂತಕುಲದ ಮೇರು ಸಂತರಾಗಿ ಬದುಕಿದ ಶ್ರೀಗಳ ಬದುಕೇ ಎಲ್ಲರಿಗೂ ಆದರ್ಶ. ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣವು ಸದ್ಬಳಕೆಯಾಗಲಿ; ಎಲ್ಲರೂ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಕರೆಯಿತ್ತರು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಸಂಸ್ಕಾರಯುತ ಸಮಾಜಕ್ಕೆ ಶ್ರಮಿಸಿದ ಮಹಾನ್ ಸಂತರ ಜೀವನ ಆದರ್ಶಗಳ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕೆಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ತ್ರಿವಿಧ ದಾಸೋಹಿಗಳಾಗಿ ಸಮಾಜದ ಹಿತಕ್ಕಾಗಿಯೇ ತಮ್ಮ ಜೀವನವನ್ನು ಸವೆಸಿದ ಶ್ರೀಗಳ ಆದರ್ಶಗಳು ಎಲ್ಲರಿಗೂ ದಾರಿದೀಪ ಎಂದರು.
ವೇದಿಕೆಯಲ್ಲಿ ಅಮ್ಮತ್ತಿ ಕನ್ನಡ ಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿಲುಮೆ ಮಠದ ಜಯದೇವ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಚಿಕ್ಕಬಳ್ಳಾಪುರ ಮಠದ ನಿಶ್ಚಲದೇಶೀಕೇಂದ್ರ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಮುಖ್ಯಸ್ಥ ಹೆಚ್.ಎಸ್, ಚಂದ್ರಮೌಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯೆ ಶೀಲಾ ಡಿಸೋಜ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ರೋಹಿತ್, ಕಿರುತೆರೆ ಕಲಾವಿದೆ ಮೌನ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪುರುಷೋತ್ತಮ್ ಅವರಿಂದ ಮೂಡಿಬಂದ ಶ್ರೀ ಶಿವಕುಮಾರ ಸ್ವಾಮೀಜಿಗಳ ಜೀವನ ಚರಿತ್ರೆಯ ಪ್ರಾರ್ಥನೆಯೊಂದಿಗೆ ಆರಂಭವಾದ ಗುರುನಮನ ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯ ವಿಜಯ್ ಹಾನಗಲ್ ಸ್ವಾಗತಿಸಿ, ಸರ್ವಜ್ಞಮೂರ್ತಿ ನಿರೂಪಿಸಿ, ಶೀಲಾ ಡಿಸೋಜ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚು ರಂಜನ್, ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರ ಆರ್.ಸಿ. ಗಣೇಶ್, ಅನ್ನದಾಸೋಹ ಮಾಡಿದ ತಪೋಕ್ಷೇತ್ರ ಮನೆಹಳ್ಳಿ ಮಠಾಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ, ದಾನಿಗಳಾದ ಉಷಾ ಉದಯಶಂಕರ್, ಕಿರುತೆರೆ ಕಲಾವಿದೆ ಮೌನ, ಚಿತ್ರಕಲಾವಿದ ನಿಖಿಲ್ ಗೌಡ ಅವರುಗಳನ್ನು ಸನ್ಮಾನಿಸಲಾಯಿತು.