ಕೂಡಿಗೆ, ಜ. ೯: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಭವಿಷ್ಯಕ್ಕೆ ಪೂರಕವಾದ ಅಂಶಗಳನ್ನು ನೀಡುವ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಶಿಕ್ಷಕರ ಜೊತೆಗೆ ಪೋಷಕ ಪಾತ್ರ ಬಹುಮುಖ್ಯವಾಗಿರುತ್ತದೆ. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ವಿದ್ಯಾರ್ಥಿ ಹಿತದೃಷ್ಟಿಯಿಂದ ದುಡಿಯಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಎನ್ ರಾಜಾರಾವ್, ತಾಲೂಕು ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಡಯಟ್ನ ಪ್ರಾಂಶುಪಾಲರಾದ ಮಲ್ಲೇಶಪ್ಪ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರೀಶ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯರಾದ ಟಿ.ಪಿ. ಹಮೀದ್, ಫಿಲೋಮಿನಾ, ಅನಂತ್ ಶಿವಕುಮಾರ್, ಅರುಣ್ ರಾವ್, ಕೃಷಿ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್ ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಳೆ ಸಂಘದ ಪದಾಧಿಕಾರಿಗಳು ನಿವೃತ್ತ ಸೈನಿಕರು ಶಾಲಾ ಮುಖ್ಯೋಪಾಧ್ಯಾಯ ಯೋಗೇಶ್, ಶಾಲಾ ಶಿಕ್ಷಕರ ವೃಂದ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಧಿತರಿದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.