ಮಡಿಕೇರಿ, ಜ. ೯: ಅರಣ್ಯ ಪ್ರದೇಶ ಪ್ರಾಣಿಗಳು ವಾಸ ಮಾಡುವ ಜಾಗವಾಗಿದ್ದು, ಆ ಜಾಗದಲ್ಲಿ ಮಾನವ ಹಸ್ತಕ್ಷೇಪ ಮಾಡುತ್ತಿರುವ ಕಾರಣಕ್ಕಾಗಿ ಹುಲಿಗಳಂತಹ ಪ್ರಾಣಿಗಳು ನಾಡಿಗೆ ದಾಳಿಯಿಡುತ್ತಿವೆ ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು; ೨೦೦೭-೮ರಿಂದ ಹುಲಿ ದಾಳಿ ಆರಂಭವಾಗಿದೆ, ೨೦೧೫-೧೬ರಲ್ಲಿ ದಾಳಿ ಹೆಚ್ಚಾಗತೊಡಗಿತು. ಕಳೆದ ಮೂರು ವರ್ಷಗಳಿಂದ ಜಾನುವಾರುಗಳು ಹಾಗೂ ಮನುಷ್ಯರ ಮೇಲೆ ದಾಳಿ ಮಾಡಿದ್ದು, ಮಾನವನ ಮೇಲೆ ೬ ಬಾರಿ ದಾಳಿ ಮಾಡಿವೆ, ಈ ಪೈಕಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಅದಕ್ಕೆ ಬೇಕಾಗುವ ೧೫ರಿಂದ ೨೦ ಕೆಜಿಯಷ್ಟು ಮಾಂಸ ಮಾತ್ರ ತಿನ್ನುತ್ತದೆ. ಮತ್ತೆ ಹಸಿವಾದಾಗ ಅದೇ ಸ್ಥಳಕ್ಕೆ ಮಾಂಸ ಹುಡುಕಿಕೊಂಡು ಬರುತ್ತದೆ. ಆದರೆ, ಅಷ್ಟರಲ್ಲಿ ಜನರು ಜಾನುವಾರುವಿನ ಕಳೇಬರವನ್ನು ಸಂಸ್ಕಾರ ಮಾಡಿಯಾಗಿರುತ್ತದೆ, ಆಹಾರ ಸಿಗದ ಕಾರಣ ಮತ್ತೆ ಬೇರೆಡೆ ಜಾನುವಾರು ಅಥವಾ ಮಾನವನ ಮೇಲೆ ದಾಳಿ ಮಾಡುತ್ತವೆ. ಹಾಗಾಗಿ ಸತ್ತ ಜಾನುವಾರುವಿನ ಕಳೆಬರವನ್ನು ಸಂಸ್ಕಾರ ಮಾಡದೇ ಸ್ಥಳದಲ್ಲಿಯೇ ಬಿಟ್ಟರೆ ಹುಲಿ ಅದನ್ನೇ ತಿಂದು ಹಿಂತಿರುಗುತ್ತದೆ. ಬೇರೆ ದಾಳಿ ಮಾಡುವದಿಲ್ಲ. ಹುಲಿ ದಾಳಿ ಮಾಡಿದ ಸಂದರ್ಭ ಅರಣ್ಯ ಇಲಾಖೆಗೆ ತಿಳಿಸಿದರೆ ಅವರು ಬೋನ್ ಇರಿಸಿ ಸೆರೆಗೆ ಕ್ರಮ ಕೈಗೊಳ್ಳುತ್ತಾರೆ. ಅದು ಬಿಟ್ಟು, ಅಧಿಕಾರಿಗಳು ಭೇಟಿ ನೀಡುವ ಸಂದರ್ಭ ಜನರು ಗುಂಪು ಸೇರಿ ಬೊಬ್ಬೆ ಹೊಡೆಯುವದರಿಂದ ಹುಲಿ ವಿಚಲಿತವಾಗಿ ಬೇರೆ ಕಡೆಗೆ ತೆರಳಿಬಿಡುತ್ತದೆ. ಹಾಗಾಗಿ ಅದನ್ನು ಪತ್ತೆ ಹಚ್ಚಲು ಕೂಡ ಸಾಧ್ಯವಾಗು ವದಿಲ್ಲ. ಇಲಾಖೆಗೆ ಬೇಡಿಕೆ ಸಲ್ಲಿಸುವದಿದ್ದರೆ ಕಚೇರಿಗೆ ಹೋಗಿ ಕೊಡಿ, ಸ್ಥಳದಲ್ಲಿ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡಿ ಎಂದು ಮನವಿ ಮಾಡಿಕೊಂಡರು.
ಹಿಂದಿನಿAದ ದಾಳಿ
ಸಾಮಾನ್ಯವಾಗಿ ಹುಲಿ ಹಿಂದಿನಿAದ ದಾಳಿ ಮಾಡುತ್ತವೆ. ಮನುಷ್ಯ ಬಯಲಿನಲ್ಲಿ ಕುಳಿತುಕೊಂಡಿದ್ದ ಸಂದರ್ಭದಲ್ಲಿಯೇ ಹೆಚ್ಚಿನ ದಾಳಿಗಳಾಗಿವೆ. ಮನುಷ್ಯ ಕುಳಿತ್ತಿದ್ದಾಗ ಪ್ರಾಣಿ ಎಂದು ತಿಳಿದು ದಾಳಿ ಮಾಡುತ್ತವೆ. ಹಾಗಾಗಿ ಪ್ರತಿ ಮನೆಗಳಿಗೂ ಶೌಚಾಲಯದ ವ್ಯವಸ್ಥೆ ಆಗಬೇಕಿದ್ದು, ಸರಕಾರ ಇದಕ್ಕಾಗಿ ಸಹಾಯಧನದ ರೂಪದಲ್ಲಿ ಅನುದಾನ ಒದಗಿಸಿ ಜನರು ಬಯಲಿಗೆ ಹೋಗದಂತೆ ತಡೆಯಬೇಕಿದೆ ಎಂದು ಹೇಳಿದರು. ಅರಣ್ಯ ಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ವಾಹನಗಳ ವ್ಯವಸ್ಥೆ ಕೂಡ ಮಾಡಿಕೊಡಬೇಕೆಂದು ಹೇಳಿದರು.
ಪಾಳು ಗದ್ದೆ-ತೋಟಗಳಲ್ಲಿ ದಾಳಿ
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರೈತರು ತಮ್ಮ ಗದ್ದೆಗಳನ್ನು ಪಾಳು ಬಿಟ್ಟಿದ್ದು, ಅಲ್ಲಿ ಕಾಡು ಬೆಳೆದು ನಿಂತಿವೆ. ಈ ಕಾಡಿನೊಳಗಡೆ ಕಾಡು ಹಂದಿಗಳು ಬಂದು ಸೇರಿಕೊಳ್ಳುತ್ತವೆ, ಅದೇ ಜಾಗದಲ್ಲಿ ರೈತರು ತಮ್ಮ ಜಾನುವಾರುಗಳನ್ನು ಮೇಯಲು ಬಿಡುತ್ತಾರೆ. ಪ್ರಾಣಿ ಬೇಟೆಗೆಂದು ಬರುವ ಹುಲಿ ಅಲ್ಲಿರುವ ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ. ಅಲ್ಲದೆ, ಕೆಲವು ಕಡೆಗಳಲ್ಲಿ ಕುಟುಂಬ ವ್ಯಾಜ್ಯದಿಂದಾಗಿ ತೋಟಗಳನ್ನು ಕಾಡು ಬಿಟ್ಟಿರುತ್ತಾರೆ, ಇಂತಹ ಪ್ರದೇಶಗಳು ಹುಲಿ ವಾಸಕ್ಕೆ ಯೋಗ್ಯವಾಗಿರುತ್ತವೆ. ಹಾಗಾಗಿ ಜಿಲ್ಲಾಡಳಿತ ಇಂತಹ ಪ್ರದೇಶಗಳ ಬಗ್ಗೆ ಗಮನ ಹರಿಸಿ ಕಾಡುಗಳನ್ನು ಕಡಿಸುವತ್ತ ಗಮನ ಹರಿಸಬೇಕೆಂದು ಮುತ್ತಣ್ಣ ಆಗ್ರಹಿಸಿದರು.
ಆಹಾರ ಅರಸಿ ಬೇಟೆ
ಈಗಿನ ಅರಣ್ಯ ಪ್ರದೇಶದಲ್ಲಿ ಲಂಟನಾ ಬೆಳೆದು ನಿಂತಿದ್ದು, ಜಿಂಕೆ, ಕಾಟಿ ಮುಂತಾದ ಪ್ರಾಣಿಗಳಿಗೆ ಆಹಾರ ಸಿಗುತ್ತಿಲ್ಲ. ಹಾಗಾಗಿ ಅವುಗಳು ಆಹಾರ ಅರಸಿಕೊಂಡು ರಸ್ತೆ ಬದಿಗೆ ಬರುತ್ತವೆ, ಈ ಸಂದರ್ಭದಲ್ಲಿ ಹುಲಿ ಕೂಡ ತನ್ನ ಆಹಾರವಾದ ಜಿಂಕೆಯನ್ನು ಅರಸಿಕೊಂಡು ರಸ್ತೆಬದಿಗೆ ಬರುತ್ತವೆ. ಕೆಲವೊಂದು ಸಂದರ್ಭದಲ್ಲಿ ಆಹಾರಕ್ಕಾಗಿ ಹುಲಿಗಳ ನಡುವೆ ಕಾದಾಟ ಏರ್ಪಟ್ಟು ಸೊಲುವ ಹುಲಿಗಳು ಓಡಿಹೋಗಿ ನಾಡು ಸೇರಿಕೊಳ್ಳುವ ಸಂದರ್ಭವು ಎದುರಾಗುತ್ತದೆ ಎಂದು ಅವರು ಹೇಳಿದರು.
ಶೀಘ್ರ ಪರಿಹಾರ
ಪ್ರತಿಷ್ಠಾನದ ಪದಾಧಿಕಾರಿ ರಾಯ್ ಬೋಪಣ್ಣ ಮಾತನಾಡಿ; ಹುಲಿ ದಾಳಿ ಮಾಡಿ ಜಾನುವಾರುಗಳು ಸಾವನ್ನಪ್ಪಿದ ಸಂದರ್ಭ ಕೂಡಲೇ ಪ್ರತಿಷ್ಠಾನದ ವತಿಯಿಂದ ಪ್ರತಿ ಜಾನುವಾರಿಗೆ ತಲಾ ರೂ.೫ಸಾವಿರದಂತೆ ಪರಿಹಾರ ನೀಡುತ್ತಿದ್ದೇವೆ. ಇದುವರೆಗೆ ೭೦ಮಂದಿಗೆ ಪರಿಹಾರ ನೀಡಲಾಗಿದೆ. ಕೆಲವೊಂದು ಕಡೆಗಳಲ್ಲಿ ಬಾಗಿಲುಗಳಿಲ್ಲದ ಕೊಟ್ಟಿಗೆಯಿಂದ ಜಾನುವಾರುಗಳನ್ನು ಎಳೆದೊಯ್ದ ಘÀಟನೆಗಳು ನಡೆದಿವೆ. ಅಂತಹುಗಳನ್ನು ಗುರುತಿಸಿ ಕೊಟ್ಟಿಗೆಗೆ ಬಾಗಿಲುಗಳನ್ನು ಕೂಡ ನೀಡಲಾಗಿದೆ. ಸರಕಾರದಿಂದ ಪರಿಹಾರ ದೊರಕುವದು ತಡವಾಗುವದರಿಂದ ನಾವುಗಳು ತಕ್ಷಣಕ್ಕೆ ಪರಿಹಾರ ನೀಡುತ್ತಿದ್ದೇವೆ. ವರ್ಲ್ಡ್ ವೈಲ್ಡ್ಲೈಫ್ ಫಂಡ್ ಹಾಗೂ ವೈಲ್ಡ್ ಲೈಫ್ ಟ್ರಸ್ಟ್ ಇಂಡಿಯನ್ ಫಂಡ್ ವತಿಯಿಂದ ಅನುದಾನ ಬರುತ್ತಿರುವದಾಗಿ ಅವರು ತಿಳಿಸಿದರು.
ಗೋಷ್ಠಿಯಲ್ಲಿ ಪ್ರತಿಷ್ಠಾನದ ಶಾನ್ ಬೋಪಯ್ಯ, ಸತ್ಯ ಅನ್ವೇಷಣಾ ಸಮಿತಿಯ ಪಾಂಡAಡ ನರೇಶ್, ಕೇಟೋಳಿರ ಸೊಮಣ್ಣ ಇದ್ದರು.