ಕಣಿವೆ, ಜ. ೮: ವಿವಾಹ, ಜನನ, ಸಂತೋಷ ಕೂಟಗಳಂತಹ ಸಂತಸದ ಕೂಟಗಳಿಂದ ಹಿಡಿದು ಸಾವುಗಳಂತಹ ದುಃಖದ ಸಂದರ್ಭಗಳಲ್ಲಿ ಆಯಾಯ ಜನ ಸಮುದಾಯದ ಆಚಾರ ವಿಚಾರಗಳು ಹಾಗೂ ಸಂಸ್ಕೃತಿಯ ಪೋಷಕರಾದ ವಾದ್ಯ ವೃಂದದ ಮಂದಿ ಮುಂದಿನ ತಲೆಮಾರಿಗೆ ಅಲಭ್ಯವಾಗುವರೇ...? ಹೀಗೊಂದು ಆತಂಕ ಹಾಗೂ ಸಂಶಯ ಈಗಿನ ತಲೆಮಾರಿನ ಜನರನ್ನು ಕಾಡಲಾರಂಭಿಸಿದೆ.
ಏಕೆಂದರೆ ನಾಡಿನ ಜನ ಸಮುದಾಯದ ಸಂಪ್ರದಾಯ ಹಾಗೂ ಪರಂಪರೆಗಳ ಪೋಷಕ ರಾದ ಈ ಜನರ ತಲೆಮಾರು ಮುಗಿದರೆ ಆ ಆಚಾರ-ವಿಚಾರಗಳನ್ನು ಪೋಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬಲ್ಲ ಮನಸ್ಥಿತಿ ಈವಾಗಿನ ಮಂದಿಯಲ್ಲಿ ಕಾಣದಾಗುತ್ತಿದೆ.
ಅಂದರೆ, ಅಯ್ಯೋ ಇಂತಹ ಕಸುಬುಗಳೆಲ್ಲ ನಮ್ಮ ತಲೆಮಾರಿಗೆ ಸಾಕು. ನಾವು ನಮ್ಮ ಅಜ್ಜನ ಕಾಲದಿಂದಲೂ ಇದನ್ನು ಮಾಡಿಕೊಂಡು ಬಂದೆವು. ಇನ್ನು ನಮಗಾಗಲ್ಲ. ನಮ್ಮ ಮಕ್ಕಳಂತು ಈ ಕಸುಬಿನ ಕಡೆ ಮುಖವನ್ನೇ ಹಾಕ್ತಾ ಇಲ್ಲ ಎಂದು ಕುಶಾಲನಗರ ತಾಲೂಕಿನ ಹುಲುಸೆ ಗ್ರಾಮದ ವಾದ್ಯ ವೃಂದದ ವಯೋವೃದ್ಧ ಹರದಯ್ಯ ಹೇಳುತ್ತಾರೆ.
ಯಾವುದೇ ಜಾತಿ ಧರ್ಮಗಳ ಸಾವು ಸಂಭವಿಸಿದಾಗ ಕುಶಾಲನಗರ ಮಾತ್ರವಲ್ಲ, ಇಡೀ ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿಗ್ರಾಮಗಳ ಬಹಳಷ್ಟು ಮಂದಿ ನಮಗೆ ಕರೆ ಮಾಡುತ್ತಾರೆ.
ನಮ್ಮದು ಕೃಷಿ ಕೆಲಸಗಳಿರಲಿ, ಮತ್ತಾವುದೇ ತುರ್ತು ಕೆಲಸಗಳಿರಲಿ ಅದನ್ನು ಬಿಟ್ಟು ಕರೆ ಬಂದಲ್ಲಿಗೆ ತೆರಳುತ್ತೇವೆ ಎನ್ನುವ ಹರದಯ್ಯ, ನಮ್ಮ ಬಳಿಕ ನಾವು ಮಾಡುತ್ತಿರುವ ಕುಲ ಕಸುಬನ್ನು ನಮ್ಮ ಮುಂದಿನ ತಲೆಮಾರಿಗೆ ಕೊಂಡೊಯ್ಯುವವರು ಇಲ್ಲವಲ್ಲ ಎಂಬ ಕೊರಗು ನಮ್ಮನ್ನು ಕಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ನಾವು ನಮ್ಮಜ್ಜನ ಕಾಲದಿಂದಲೂ ಉಳಿಸಿ, ಕಸುಬು ಮಾಡಿಕೊಂಡು ಬರುತ್ತಿರುವ ಈ ವಾದ್ಯಗೋಷ್ಠಿಯ ತಂಡವನ್ನು ನೀವು ಮುನ್ನಡೆಸಿಕೊಂಡು ಹೋಗಿ ಎಂದು ನಮ್ಮ ಮಕ್ಕಳಿಗೆ ಹೇಳಿದರೆ, ಅಯ್ಯೋ ನೀನಿನ್ನು ನಿನ್ನಪ್ಪನ ಕಾಲದಲ್ಲೇ ಇದ್ದೀಯ. ಇದು ನಮ್ಮ ಕಾಲ. ಅಂದರೆ ಕಲಿಗಾಲ.
ಹಿಂದಿನ ಕುಲಕಸುಬುಗಳೆಲ್ಲಾ ನಮಗೆ ಆಗಿಬಾರದು, ಹೋಗು ಕೆಲಸ ನೋಡು ಎಂದು ನಮ್ಮನ್ನೇ ಎದುರಾಡುತ್ತಾರೆ ಎಂದು ಹರದಯ್ಯ ನೋವಿನಿಂದ ಹೇಳುತ್ತಾರೆ.
ಇಂದಿನ ಆಧುನಿಕತೆಯ ಕಾಲಘಟ್ಟದಲ್ಲಿ ಕೃತಕತೆ ವಿಜೃಂಭಿಸಿ ವಾಸ್ತವಿಕತೆ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಶುಭ ಸಮಾರಂಭಗಳಿಗೆ ಸ್ಪೀಕರ್, ಸ್ಟೀರಿಯೋ ಮೈಕ್‌ಗಳಂತ ಆಧುನಿಕ ಪರಿಕರಗಳನ್ನು ಬಳಸಬಹುದು. ಆದರೆ ಸಾವುಗಳು ಸಂಭವಿಸಿದಾಗ ಖುದ್ದು ವಾದ್ಯದ ಮಂದಿಯೇ ಬೇಕಲ್ಲ. ಏನು ಮಾಡೋದು ಮುಂದಿನ ಪೀಳಿಗೆಗೆ ಎನ್ನುತ್ತಾರೆ ದುಡಿ ನುಡಿಸುವ ಸೀನಯ್ಯ.
ಒಳ್ಳೆಯ ಸದ್ದು ಮೂಡಿಸುವ ‘ದುಡಿ’ಗಳನ್ನು ಕೂಳಿ ಮರದಿಂದ ಸಿದ್ಧಪಡಿಸಿ ಅದರ ಆಚೀಚೆ ತುದಿಗಳಿಗೆ ಹೆಣ್ಣು ಆಡು ಹಾಗೂ ಗಂಡು ಆಡು (ಹೋತ)ಗಳ ಚರ್ಮದಿಂದ ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ದರವಿದೆ ಎಂದು ತಾವು ನುಡಿಸುವ ದುಡಿಗಳೊಂದಿಗೆ ತಮ್ಮ ೭೦ ವರ್ಷಗಳ ಸುದೀರ್ಘ ಅವಧಿಯ ಅನುಭವವನ್ನು ‘ಶಕ್ತಿ’ಯ ಜೊತೆ ತೆರೆದಿಟ್ಟರು ಹುಲುಸೆ ಗ್ರಾಮದ ಹರದಯ್ಯ.
ಇಬ್ಬರು ವಾದ್ಯದವರು ಹಾಗೂ ಇಬ್ಬರು ದುಡಿ ಬಾರಿಸುವವರು ನಾಲ್ಕು ಜನರು ಸೇರಿ ಸಾವುಗಳಂತಹ ದುಃಖದ ಸಮಾರಂಭಗಳಿಗೆ ತೆರಳುವ ಇವರು ಊರಿನ ಹತ್ತಿರದ ಆಸುಪಾಸಿಗೆ ಇಂತಿಷ್ಟು ಮತ್ತು ದೂರದ ಊರುಗಳಿಗೆ ಆದರೆ ಇಂತಿಷ್ಟು ಎಂದು ತಮ್ಮ ಗುಂಪಿನ ದರವನ್ನು ನಿಗದಿಪಡಿಸಿದ್ದಾರೆ.
ಈ ಮಧ್ಯೆ ಗರೀಬರಾದರೆ ನಿಗದಿ ಮಾಡಿದ ದರದಲ್ಲಿ ಕಡಿಮೆ ಮಾಡುತ್ತೇವೆ ಎಂದು ಮಾನವೀಯತೆ ಯನ್ನು ತಮ್ಮ ಕಾಯಕದಲ್ಲಿ ತೋರುತ್ತಾರೆ ಹರದಯ್ಯ ತಂಡ. ಹಾಗೆಯೇ ಶುಭ ಸಮಾರಂಭಗಳಿಗೂ ಕೂಡ ಈ ಹರದಯ್ಯ ತಂಡ ಕಟ್ಟಿದ್ದಾರೆ.
- ಕೆ.ಎಸ್. ಮೂರ್ತಿ