ಮಡಿಕೇರಿ, ಜ. ೮: ಮಡಿಕೇರಿ ನಗರದ ಕೊಹಿನೂರು ರಸ್ತೆಯ ಬದಿಯಲ್ಲಿ ಬಾಡಿಗೆ ಲಾರಿಗಳನ್ನು ನಿಲ್ಲಿಸುತ್ತಿರುವುದರಿಂದ ಸಮೀಪದ ವ್ಯಾಪಾರಿಗಳಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಲಾರಿಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಸೂಚಿಸಬೇಕೆಂದು ಒತ್ತಾಯಿಸಿ ಸ್ಥಳೀಯ ವರ್ತಕರು ಹಾಗೂ ಹೊಟೇಲ್ ಉದ್ಯಮಿಗಳು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಜನನಿಬಿಡ ಪ್ರದೇಶವಾಗಿರುವ ಕೊಹಿನೂರು ರಸ್ತೆಯಲ್ಲಿ ಲಾರಿಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ಇಲ್ಲಿನ ವಾಣಿಜ್ಯ ಮಳಿಗೆ, ಅಂಗಡಿ, ಹೊಟೇಲ್ ವ್ಯಾಪಾರಕ್ಕೆ ಅಡಚಣೆಯಾಗುತ್ತಿದೆ. ಪ್ರವಾಸಿಗರು ವಾಹನ ನಿಲುಗಡೆಗೆ ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಇಲ್ಲಿ ಸಾರ್ವಜನಿಕ ಶೌಚಾಲಯವೂ ಇದ್ದು, ಇದನ್ನು ಬಳಸಲು ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ. ನಗರಸಭೆಯಿಂದ ಬಾಡಿಗೆ ವಾಹನಗಳ ನಿಲುಗಡೆಗೆ ನೂತನ ಖಾಸಗಿ ಬಸ್ ನಿಲ್ದಾಣದ ಸಮೀಪ ಸ್ಥಳ ಸೂಚಿಸಿ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಬಾಡಿಗೆ ಲಾರಿಗಳನ್ನು ಇಲ್ಲಿ ನಿಲುಗಡೆಗೊಳಿಸಲು ಸೂಚನೆ ನೀಡಬೇಕೆಂದು ವರ್ತಕರು ಮನವಿಯಲ್ಲಿ ತಿಳಿಸಿದ್ದಾರೆ.

ಲಾರಿ ಮಾಲೀಕರು ಮತ್ತು ಚಾಲಕರ ಸಂಘ ಕೂಡ ಸಾರ್ವಜನಿಕರು ಹಾಗೂ ವರ್ತಕರ ಮನವಿಗೆ ಸ್ಪಂದಿಸಿ ನಿಲ್ದಾಣವನ್ನು ಸ್ಥಳಾಂತರಗೊಳಿಸಿ ಸಹಕರಿಸಬೇಕೆಂದು ವರ್ತಕರು ಕೋರಿದ್ದಾರೆ. ಸ್ಥಳೀಯ ವರ್ತಕರು ಸಹಿ ಮಾಡಿರುವ ಮನವಿ ಪತ್ರವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಲಾಗಿದೆ.