ಕುಶಾಲನಗರ, ಜ. ೮: ಜಲಮೂಲಗಳು ಕಲುಷಿತಗೊಳ್ಳದಂತೆ ಪ್ರತಿಯೊಬ್ಬರೂ ಜಾಗೃತಿ ವಹಿಸುವ ಮೂಲಕ ಸ್ವಚ್ಛ ಕಾವೇರಿ ಕನಸು ನನಸಾಗಲು ಸಾಧ್ಯ ಎಂದು ಶ್ರೀ ಮುತ್ತಪ್ಪ ದೇವಾಲಯ ಸೇವಾ ಟ್ರಸ್ಟ್ ಉಪಾಧ್ಯಕ್ಷ ಆರ್. ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಶ್ರೀ ಮುತ್ತಪ್ಪ ದೇವಾಲಯ ಟ್ರಸ್ಟ್ ಸಹಯೋಗದೊಂದಿಗೆ ನಡೆದ ೧೪೦ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅವೈಜ್ಞಾನಿಕ ಅಭಿವೃದ್ಧಿ ನಡುವೆ ನದಿ ನೀರು ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ನೇರವಾಗಿ ಬಳಕೆ ಮಾಡಲು ಸಾಧ್ಯವಾಗದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದ ಅವರು, ಆರತಿ ಬಳಗದ ಮೂಲಕ ಸ್ವಚ್ಛ ಕಾವೇರಿಗಾಗಿ ನಡೆಯುತ್ತಿರುವ ನಿರಂತರ ಕಾರ್ಯಕ್ರಮದ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಎನ್ ಮುರುಳೀಧರ್ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಸಂಘಟನೆಗಳು ಸ್ವಚ್ಛ ಕಾವೇರಿ ಹೋರಾಟಕ್ಕೆ ಕೈಜೋಡಿಸಬೇಕು ಎಂದರು. ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಅರ್ಚನೆ ಅಷ್ಟೋತ್ತರ ನಂತರ ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು.
ಈ ಸಂದರ್ಭ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಮುತ್ತಪ್ಪ ದೇವಾಲಯದ ಟ್ರಸ್ಟ್ ಉಪಾಧ್ಯಕ್ಷರಾದ ರಾಜೇಶ್, ಕಾರ್ಯದರ್ಶಿ ಪವನ್, ಮಂಜುನಾಥ್ ಮತ್ತು ಬಳಗದ ಸದಸ್ಯರಿದ್ದರು.