ಕುಶಾಲನಗರ, ಜ. ೭: ಪಂಚಾಯಿತಿ ಮಾಸಿಕ ಸಭೆಯಲ್ಲಿ ತನ್ನನ್ನು ಅವಾಚ್ಯವಾಗಿ ನಿಂದಿಸಿ, ಸಾಮಾನ್ಯ ಸಭೆ ನಡೆಯದಂತೆ ತಡೆದು ಬೆದರಿಕೆ ಹಾಕಿದ್ದಾರೆ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕೆಲವು ಸದಸ್ಯರುಗಳ ಮೇಲೆ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ. ಕೂಡಿಗೆ ಗ್ರಾ.ಪಂ. ಅಧ್ಯಕ್ಷರಾದ ಮಂಗಳಪ್ರಕಾಶ್ ಭಾನುವಾರ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪಂಚಾಯಿತಿ ಸದಸ್ಯರಾದ ಟಿ.ಪಿ ಹಮೀದ್, ಅರುಣ್ ರಾವ್, ಶಿವು, ಅನಂತ, ಚಂದ್ರ ಮತ್ತು ಜಯಶ್ರೀ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಯಿಶ ಮತ್ತು ಕಂಪ್ಯೂಟರ್ ಆಪರೇಟರ್ ಜ್ಯೋತಿ ಎಂಬವರ ಮೇಲೆ ದೂರು ದಾಖಲಿಸಿದ್ದಾರೆ.
ತಾ. ೫ರಂದು ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇವರುಗಳು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸಭೆ ನಡೆಯದಂತೆ ನನ್ನನ್ನು ತಡೆದು ಸಭಾ ನಡಾವಳಿಯ ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದು, ಸಭೆಗೆ ಸದಸ್ಯರಲ್ಲದವರನ್ನು ಸೇರಿಸಿಕೊಂಡು ಲಂಚಕ್ಕಾಗಿ ಪೀಡಿಸಿ; ಅನಾವಶ್ಯಕ ನನ್ನ ಮೇಲೆ ಆರೋಪ ಹೊರಿಸಿ ಮಾನಹಾನಿ ಮಾಡಿದ್ದಾರೆ. ಅಲ್ಲದೇ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದು, ಇವರುಗಳ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಮತ್ತು ತನಗೆ ರಕ್ಷಣೆ ಕೊಡಬೇಕೆಂದು ಪೊಲೀಸ್ ದೂರಿನಲ್ಲಿ ಮಂಗಳ ಪ್ರಕಾಶ್ ತಿಳಿಸಿದ್ದಾರೆ. ಇದರೊಂದಿಗೆ ಕಂಪ್ಯೂಟರ್ ಆಪರೇಟರ್ ತನ್ನ ಬೆರಳಚ್ಚು ಮುದ್ರಣ ಮತ್ತು ಲಾಗಿನ್ ಮಾಹಿತಿ ಇಟ್ಟುಕೊಂಡು ಹಣಕಾಸಿನ ಮತ್ತು ಇತರ ದಾಖಲಾತಿಗಳಿಗೆ ಸಹಿ ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಇರುವುದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ.
ಈ ಎಲ್ಲ ವಿಷಯಗಳ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ಮಾಹಿತಿ ನೀಡಿದ್ದಾರೆ. ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿಯ ಹೆಸರಿನಲ್ಲಿ ಅವ್ಯವಹಾರವಾಗಿರುವ ಶಂಕೆ ವ್ಯಕ್ತಗೊಂಡಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.