ಮಡಿಕೇರಿ, ಜ. ೬: ೧೫ನೇ ವಿಶ್ವಕಪ್ ಹಾಕಿ ಪಂದ್ಯಾವಳಿಯ ಆತಿಥ್ಯ ವಹಿಸಲು ಹಾಕಿಗೆ ದೇಶದಲ್ಲಿ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ರಾಜ್ಯಗಳಲ್ಲಿ ಪ್ರಮುಖವಾಗಿರುವ ಒಡಿಶಾ ಸಜ್ಜಾಗಿದೆ. ಈ ಬಾರಿಯ ವಿಶ್ವಕಪ್ ಹಾಕಿಯ ವಿಶೇಷತೆಯಾಗಿ ರೂರ್ಕೆಲಾದಲ್ಲಿ ದೇಶದ ಅತಿದೊಡ್ಡದಾದ ಹಾಗೂ ಸುಸಜ್ಜಿತವಾದ ಹಾಕಿ ಕ್ರೀಡಾಂಗಣ ನಿರ್ಮಿಸಲಾಗಿದ್ದು, ನಿನ್ನೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಉದ್ಘಾಟಿಸಿದರು.
ಭಾರತದಲ್ಲಿ ಇದು ನಾಲ್ಕನೆಯ ವಿಶ್ವಕಪ್ ಪಂದ್ಯಾವಳಿಯಾಗಿದೆ. ಈ ಹಿಂದೆ ದೆಹಲಿಯಲ್ಲಿ ಎರಡು ಬಾರಿ (೧೯೮೨ ಹಾಗೂ ೨೦೧೦) ವಿಶ್ವಕಪ್ ಜರುಗಿದೆ. ೨೦೧೮ರಲ್ಲೂ ಒಡಿಶಾದ ಭುವನೇಶ್ವರ ವಿಶ್ವಕಪ್ ಆತಿಥ್ಯ ವಹಿಸಿದ್ದು, ಇದೀಗ ಸತತ ಎರಡನೇ ಬಾರಿಗೂ ಆತಿಥ್ಯಕ್ಕೆ ಮುಂದಾಗಿದ್ದು, ನೂತನವಾಗಿ ನಿರ್ಮಿಸಲಾಗಿರುವ ರೂರ್ಕೆಲಾ ಹಾಗೂ ಭುವನೇಶ್ವರದಲ್ಲಿ ಪಂದ್ಯಾವಳಿ ಜರುಗಲಿವೆ. ಪ್ರತಿಷ್ಠಿತವಾದ ಈ ಕ್ರೀಡಾಕೂಟದಲ್ಲಿ ಆತಿಥೇಯ ಭಾರತವೂ ಸೇರಿದಂತೆ ಒಟ್ಟು ೧೬ ರಾಷ್ಟçಗಳು ಪಾಲ್ಗೊಳ್ಳುತ್ತಿವೆ. ಇದೇ ಜನವರಿ ೧೩ರಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು, ತಾ. ೨೯ರ ತನಕ ಜರುಗಲಿದೆ. ಹಾಕಿಯ ತವರು ಎನಿಸಿಕೊಂಡಿರುವ ಕೊಡಗಿನಿಂದ ಭಾರತ ತಂಡದ ಆಟಗಾರರಾಗಿ ಯಾರೊಬ್ಬರೂ ಇಲ್ಲದಿರುವ ಬೇಸರ ಕೊಡಗಿನ ಹಾಕಿ ಪ್ರೇಮಿಗಳಲ್ಲಿದೆ. ದಕ್ಷಿಣ ಭಾರತದಿಂದ ತಂಡದ ಗೋಲ್ಕೀಪರ್ ಆಗಿರುವ ಶ್ರೀಜೇಶ್ ಮಾತ್ರ ಭಾರತ ತಂಡದಲ್ಲಿರುವ ಏಕೈಕ ಆಟಗಾರರಾಗಿದ್ದಾರೆ.
(ಮೊದಲ ಪುಟದಿಂದ)
ದೇಶದ ದೊಡ್ಡ ಕ್ರೀಡಾಂಗಣ
ದೇಶದಲ್ಲೇ ದೊಡ್ಡದು ಎಂಬ ಕೀರ್ತಿಗೆ ಇದೀಗ ರೂರ್ಕೆಲಾದಲ್ಲಿ ಉದ್ಘಾಟನೆಗೊಂಡಿರುವ ಕ್ರೀಡಾಂಗಣ ಪಾತ್ರವಾಗಿದೆ.
ಕೇವಲ ೧೫ ತಿಂಗಳ ಅವಧಿಯಲ್ಲಿ ರೂ. ೧೪೬ ಕೋಟಿ ವೆಚ್ಚದಲ್ಲಿ ಈ ಕ್ರೀಡಾಂಗಣ ತಲೆ ಎತ್ತಿದೆ. ಸುಮಾರು ೨೧ ಸಾವಿರದಷ್ಟು ಪ್ರೇಕ್ಷಕರು ಕೂತು ಪಂದ್ಯ ವೀಕ್ಷಿಸಬಹುದಾದ ಕ್ರೀಡಾಂಗಣ ಇದಾಗಿದೆ. ಇಲ್ಲಿ ಆಟಗಾರರಿಗೆಂದೇ ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡಿರುವ ೨೨೫ ಕೊಠಡಿಗಳು, ಸ್ವಿಮ್ಮಿಂಗ್ ಪೂಲ್, ಜಿಮ್ ಸೇರಿದಂತೆ ಇನ್ನಿತರ ಎಲ್ಲಾ ವ್ಯವಸ್ಥೆಗಳಿವೆ. ಈ ಸ್ಥಳವನ್ನು ಇದೀಗ ‘ವಿಶ್ವಕಪ್ ಗ್ರಾಮ’ ಎಂದೂ ಪರಿಗಣಿಸಲಾಗಿದೆ. ೨೧ ಸಾವಿರ ಪ್ರೇಕ್ಷಕರು ವೀಕ್ಷಿಸಬಹುದಾದ ನೂತನವಾದ ಬಿರ್ಸಾಮುಂಡಾ ಕ್ರೀಡಾಂಗಣ ಈ ಬಾರಿಯ ವಿಶ್ವಕಪ್ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಎಂದು ಒಡಿಶಾ ರಾಜ್ಯ ಹಾಕಿಯ ಮುಖ್ಯ ತರಭೇತುದಾರರಾಗಿರುವ ಕೊಡಗಿನವರಾದ ಬಿ.ಜೆ. ಕಾರ್ಯಪ್ಪ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡರು.
ಈ ಕ್ರೀಡಾ ಸಂಕೀರ್ಣ ೧೫ ಎಕರೆಯಷ್ಟು ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಕ್ರೀಡಾಂಗಣ ಇಡೀ ದೇಶಕ್ಕೆ ಒಡಿಶಾದ ಕೊಡುಗೆ ಎಂದು ಹೇಳಿರುವ ಸಿ.ಎಂ. ನವೀನ್ ಪಟ್ನಾಯಕ್ ಭಾರತ ತಂಡ ಈ ಬಾರಿ ಜಯ ಗಳಿಸಿದಲ್ಲಿ ಎಲ್ಲಾ ಆಟಗಾರರಿಗೆ ತಲಾ ರೂ. ಒಂದು ಕೋಟಿ ನೀಡುವುದಾಗಿಯೂ ಪ್ರಕಟಿಸಿದ್ದಾರೆ.
-ಶಶಿ ಸೋಮಯ್ಯ