ಪೊನ್ನಂಪೇಟೆ, ಜ. ೭: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಪ್ರತಿ ವರ್ಷ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಲಾಗುವ ಕೆ.ಎಂ.ಎ. ಪ್ರತಿಭಾ ಪುರಸ್ಕಾರ ಪಡೆಯಲು ವಿದ್ಯಾರ್ಥಿಗಳ ಪೋಷಕರ ಸದಸ್ಯತ್ವದ ಹಿರಿತನವನ್ನು ಮುಂದಿನ ಸಾಲಿನಿಂದ ಕಡ್ಡಾಯಗೊಳಿಸಲಾಗಿದೆ.
ವೀರಾಜಪೇಟೆ ಸಮೀಪದ ಐಮಂಗಲದ (ಕೊಮ್ಮೆತೋಡು) ಕೆ.ಎಂ.ಎ. ನಿರ್ದೇಶಕ ಪೊಯಕೆರ ಎಸ್. ಮೊಹಮ್ಮದ್ ರಫೀಕ್ ಅವರ ನಿವಾಸದಲ್ಲಿ ಸಂಸ್ಥೆಯ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೊಡವ ಮುಸ್ಲಿಂ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಯಿತು.
೨೦೨೩ನೇ ಸಾಲಿನಲ್ಲಿ ಕೆ.ಎಂ.ಎ. ಪ್ರತಿಭಾ ಪುರಸ್ಕಾರಕ್ಕೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಪೋಷಕರು (ತಂದೆ ಅಥವಾ ತಾಯಿ) ಕೆ.ಎಂ.ಎ. ಸದಸ್ಯತ್ವ ಪಡೆದು ಕಡ್ಡಾಯವಾಗಿ ಕನಿಷ್ಟ ೬ ತಿಂಗಳು ಪೂರ್ಣಗೊಂಡಿರಬೇಕು. ಅಂತವರನ್ನು ಮಾತ್ರ ಅರ್ಹರೆಂದು ಪರಿಗಣಿಸಲಾಗುವುದು. ೨೦೨೪ರ ಸಾಲಿನಿಂದ ಕೆ.ಎಂ.ಎ. ಪ್ರತಿಭಾ ಪುರಸ್ಕಾರ ಪಡೆಯಲು ವಿದ್ಯಾರ್ಥಿಗಳ ಪೋಷಕರು ಕೆ.ಎಂ.ಎ. ಸದಸ್ಯತ್ವ ಪಡೆದು ಕಡ್ಡಾಯವಾಗಿ ಕನಿಷ್ಟ ಒಂದು ವರ್ಷ ಪೂರ್ಣಗೊಂಡಿರಬೇಕು.
ಈ ತೀರ್ಮಾನವನ್ನು ೨೦೨೨ನೇ ಡಿಸೆಂಬರ್ ತಿಂಗಳಿನಲ್ಲಿ ತೆಗೆದುಕೊಂಡಿರುವ ಕಾರಣ ೨೦೨೩ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೆ ಮಾತ್ರ ವಿದ್ಯಾರ್ಥಿಗಳ ಪೋಷಕರ ಕೆ.ಎಂ.ಎ. ಸದಸ್ಯತ್ವದ ಹಿರಿತನಕ್ಕೆ ಆರು ತಿಂಗಳ ವಿನಾಯಿತಿ ನೀಡಲಾಗಿದ್ದು, ೨೦೨೩ರ ಕೆ.ಎಂ.ಎ. ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ತಮ್ಮ ಪೋಷಕರ ಸದಸ್ಯತ್ವದ ಹಿರಿತನ ಕನಿಷ್ಟ ೬ ತಿಂಗಳು ಪೂರ್ಣಗೊಂಡಿರಬೇಕು ಎಂದು ಕೆ.ಎಂ.ಎ. ಪ್ರಕಟಣೆಯಲ್ಲಿ ತಿಳಿಸಿದೆ.