ಮಡಿಕೇರಿ, ಜ. ೬: ಕರ್ನಾಟಕ ರಾಜ್ಯ ಹಾಗೂ ಭಾರತ ದೇಶಕ್ಕೆ ಉತ್ತಮ ಫುಟ್ಬಾಲ್ ಆಟಗಾರರನ್ನು ಕೊಡುಗೆಯಾಗಿ ನೀಡಿರುವ., ನೂರಾರು ವರ್ಷಗಳ ಇತಿಹಾಸವಿರುವ ಮ್ಯಾನ್ಸ್ ಕಾಂಪೌAಡ್ ಕ್ಲಬ್ (ಎಂ.ಸಿ.ಸಿ.) ವತಿಯಿಂದ ಜಿಲ್ಲಾ ಮಟ್ಟದ ಮುಕ್ತ ೫+೨ ಆಟಗಾರರ ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದ್ದು, ತಾ. ೭ ಮತ್ತು ೮ ರಂದು ನಡೆಯಲಿದೆ.

ಮಡಿಕೇರಿಯ ಮ್ಯಾನ್ಸ್ ಕಾಂಪೌAಡ್ ಮೈದಾನದ ಕೆಳಗಿನ ಫುಟ್ಬಾಲ್ ಮೈದಾನದಲ್ಲಿ ಎರಡು ದಿವಸಗಳ ಕಾಲ ಫುಟ್ಬಾಲ್ ಹಬ್ಬ ನಡೆಯಲಿದ್ದು, ಕ್ಲಬ್‌ನ ಪದಾಧಿಕಾರಿಗಳು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ ಇದ್ದಂತಹ ಫುಟ್ಬಾಲ್ ಮೈದಾನದಲ್ಲಿ ಇದೀಗ ಎರಡೂ ಬದಿಗಳಲ್ಲಿ ಕಟ್ಟಡ, ಬಾಸ್ಕೆಟ್ ಬಾಲ್ ಕೋರ್ಟ್, ಸ್ಕೇಟಿಂಗ್ ಯಾರ್ಡ್ ನಿರ್ಮಾಣವಾಗಿದ್ದು, ಲಭ್ಯವಿರುವ ಜಾಗದಲ್ಲಿ ರೋಡ್ ರೋಲರ್ ಯಂತ್ರದ ಮೂಲಕ ಸಮತಟ್ಟು ಮಾಡಿ ಮೈದಾನವನ್ನು ಸಜ್ಜುಗೊಳಿಸಲಾಗಿದೆ. ಏಳು ಆಟಗಾರರನ್ನೊಳಗೊಂಡ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದ್ದು, ಎರಡು ಕೋರ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ.

೨೦ ತಂಡಗಳು ಭಾಗಿ

ಹಲವು ವರ್ಷಗಳ ನಂತರ ಮಡಿಕೇರಿಯಲ್ಲಿ ಫುಟ್ಬಾಲ್ ಹಬ್ಬ ಆಯೋಜಿತವಾಗಿದ್ದು, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನಲ್ಲಿ ನೋಂದಾಯಿತ ಪ್ರತಿಷ್ಠಿತ ತಂಡಗಳು ಸೇರಿದಂತೆ ಇತರ ತಂಡಗಳು ಸೇರಿ ಒಟ್ಟು ೨೦ ತಂಡಗಳು ಎಂ.ಸಿ.ಸಿ. ಕಪ್‌ಗಾಗಿ ಸೆಣಸಾಡಲಿವೆ. ಈಗಾಗಲೇ ತಂಡಗಳು ಹೆಸರು ನೋಂದಾಯಿಸಿಕೊAಡಿದ್ದು, ರಾಜ್ಯ, ರಾಷ್ಟçಮಟ್ಟದ ಆಟಗಾರರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಕ್ಲಬ್‌ನ ಕಾರ್ಯದರ್ಶಿ ಉಮೇಶ್ ಕುಮಾರ್ ತಿಳಿಸಿದ್ದಾರೆ.

ಆಕರ್ಷಕ ಬಹುಮಾನ

ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. ೨೫ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. ೧೫ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ಉತ್ತಮ ಆಟಗಾರ, ಉತ್ತಮ ಗೋಲ್‌ಕೀಪರ್, ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರನಿಗೆ ವೈಯಕ್ತಿಕ ಬಹುಮಾನ ನೀಡಲಾಗುವದು.

ಮೈದಾನ ಸಿದ್ಧತೆ

ಫುಟ್ಬಾಲ್ ಹಬ್ಬಕ್ಕಾಗಿ ಮೈದಾನವನ್ನು ಸಜ್ಜುಗೊಳಿಸುವ ಕಾರ್ಯ ಇಂದು ಬೆಳಿಗ್ಗೆಯಿಂದಲೇ ನಡೆಯಿತು. ಕ್ಲಬ್‌ನ ಅಧ್ಯಕ್ಷ ಕ್ರಿಸ್ಟೋಫರ್, ಕಾರ್ಯದರ್ಶಿ ಉಮೇಶ್‌ಕುಮಾರ್, ಖಜಾಂಚಿ ಪೀಟರ್, ಪದಾಧಿಕಾರಿಗಳಾದ ಪ್ರಸನ್ನ, ಸುರ್ಜಿತ್, ದಿನೇಶ್ ಇನ್ನಿತರರು ಸ್ವಯಂ ಸೇವಕರಾಗಿ ಸಿದ್ಧತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಎರಡು ದಿನಗಳ ಕಾಲ ಫುಟ್ಬಾಲ್ ಪ್ರೇಮಿಗಳಿಗೆ ಎಂ.ಸಿ.ಸಿ. ಕ್ಲಬ್ ರಸದೌತಣ ಬಡಿಸಲಿದೆ.

? ಸಂತೋಷ್