ಮಡಿಕೇರಿ, ಜ. ೫: ಐತಿಹಾಸಿಕ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದ ದಶಮಂಟಪ ಗಳಿಗೆ ಮುಂದಿನ ನಾಲ್ಕು ದಿನಗಳಲ್ಲಿ ಅನುದಾನ ನೀಡುವುದಾಗಿ ದಸರಾ ಸಮಿತಿ ಪದಾಧಿಕಾರಿಗಳು ಭರವಸೆ ನೀಡಿದ್ದಾರೆ.

ದಸರಾ ಉತ್ಸವ ಕಳೆದು ಮೂರು ತಿಂಗಳಾದರೂ ಇನ್ನೂ ಕೂಡ ಅನುದಾನ ನೀಡದಿರುವ ಬಗ್ಗೆ ಇಂದು ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ನೇತೃತ್ವದಲ್ಲಿ ೧೦ ಮಂಟಪಗಳ ಅಧ್ಯಕ್ಷರು ಹಾಗೂ ಕರಗ ಸಮಿತಿಯ ಪದಾಧಿಕಾರಿಗಳು ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಅವರುಗಳನ್ನು ಭೇಟಿ ಮಾಡಿ ಅನುದಾನ ನೀಡುವಂತೆ ಆಗ್ರಹಿಸಿದರು.

ಪ್ರತಿಕ್ರಿಯಿಸಿದ ಅನಿತಾ ಹಾಗೂ ರಮೇಶ್ ಸರಕಾರದಿಂದ ರೂ. ೭೫ ಲಕ್ಷ ಮಾತ್ರ ಬಂದಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಪ್ರತಿ ಮಂಟಪಗಳಿಗೆ ರೂ. ೨ ಲಕ್ಷ ಹಾಗೂ ಕರಗ ಸಮಿತಿಗೆ ರೂ. ೧.೫೦ ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಇನ್ನು ರೂ. ೨೫ ಲಕ್ಷ ಬರಬೇಕಿದ್ದು, ಬಿಡುಗಡೆಗೆ ಪ್ರಯತ್ನಿಸಲಾಗುವುದು. ಬಿಡುಗಡೆ ಆದ ಕೂಡಲೇ ಮಂಟಪಗಳಿಗೆ ರೂ. ೧.೩೦ ಲಕ್ಷ ಹಾಗೂ ಕರಗಗಳಿಗೆ ರೂ. ೫೦ ಸಾವಿರ ನೀಡುವುದಾಗಿ ಅಧ್ಯಕ್ಷೆ ಅನಿತಾ ಪೂವಯ್ಯ ಭರವಸೆ ನೀಡಿದ್ದಾರೆ ಎಂದು ಮನು ಮಂಜುನಾಥ್ ತಿಳಿಸಿದ್ದಾರೆ.