ಮಡಿಕೇರಿ, ಜ. ೫ : ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದ್ದ ಜಮ್ಮಾ ಬಾಣೆ ಸಮಸ್ಯೆಗೆ ಪರಿಹಾರ ಕಂಡುಕೊAಡಿದ್ದಲ್ಲದೆ, ಶಿಕ್ಷಣ, ಕ್ರೀಡಾ ಕ್ಷೇತ್ರಕ್ಕೆ ಅನುದಾನ ಒದಗಿಸುವದ ರೊಂದಿಗೆ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಅತಿ ಹೆಚ್ಚಿನ ಅನುದಾನ ಒದಗಿಸಿದ ತೃಪ್ತಿಯಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ

ಕೆ.ಜಿ. ಬೋಪಯ್ಯ ಹೇಳಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು; ಮೊದಲ ಬಾರಿಗೆ ಶಾಸಕನಾಗಿ ಮಡಿಕೇರಿ ತಾಲೂಕು ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಂದರ್ಭ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇದ್ದಾಗ ಜಮ್ಮಾ ಬಾಣೆಗಳ ಮೇಲೆ ಜನರಿಗೆ ಹಕ್ಕಿಲ್ಲ, ಕೃಷಿ ಮಾಡಲು ಸಾಧ್ಯವಿಲ್ಲ, ಸೌದೆ, ಸೊಪ್ಪಿಗಾಗಿ ಹಾಗೂ ದನಗಳನ್ನು ಮೇಯಿಸಲು ಮಾತ್ರ ಬಳಸಬಹುದಾಗಿ ಸುತ್ತೋಲೆ ಹೊರಡಿಸಿದನ್ನು ಮೊದಲ ಬಾರಿಗೆ ಸದನದಲ್ಲಿ ದನಿಯೆತ್ತಿ ಗಮನ ಸೆಳೆಯಲಾಗಿತ್ತು. ಆದರೂ ಆಗಿನ ಕಂದಾಯ ಸಚಿವರು ಒಪ್ಪಿರಲಿಲ್ಲ. ನಂತರದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಿಧಾನ ಸಭಾಧ್ಯಕ್ಷನಾಗಿದ್ದಾಗ ಶಾಶ್ವತ ಪರಿಹಾರಕ್ಕಾಗಿ ತಿದ್ದುಪಡಿ ತರುವ ಸಲುವಾಗಿ ಹಲವಾರು ಬಾರಿ ಸಭೆ ನಡೆಸಿ, ವಿಪಕ್ಷ ನಾಯಕ ಸಿದ್ದÀ್ದರಾಮಯ್ಯ ಅವರ ಸಹಕಾರ ಕೂಡ ಪಡೆದು ತಿದ್ದುಪಡಿಗೆ ಸರ್ವಾನುಮತದ ಅಂಗೀಕಾರ ಸಿಕ್ಕಿತು. ಆದರೂ ಕೆಲವರು ಕುತಂತ್ರ ಮಾಡಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟರು. ನಂತರ ಬೆಳಗಾವಿ ವಿಕಾಸಸೌಧ ಉದ್ಘಾಟನೆ ಸಂದರ್ಭ ಆಗಿನ ರಾಷ್ಟçಪತಿ ಪ್ರಣಬ್ ಮುಖರ್ಜಿ ಅವರ ಗಮನ ಸೆಳೆದು ಒಂದು ತಿಂಗಳೊಳಗಡ ಬಾಣೆ ಜಾಗಕ್ಕೆ ಕಂದಾಯ ವಿಧಿಸುವಂತೆ ತಿದ್ದುಪಡಿ ತರಲಾಯಿತು. ಆದರೂ ಅಧಿಕಾರಿಗಳು ಜಾರಿಗೊಳಿಸದೆೆ ಇದ್ದುದರಿಂದ ಕಳೆದ ಅಧಿವೇಶನದಲ್ಲೂ ಈ ಬಗ್ಗೆ ಪ್ರಶ್ನೆ ಮಾಡಲಾಗಿದ್ದು, ಸದ್ಯದಲ್ಲೇ ಕೃಷಿ ಮಾಡಿರುವ ಹಾಗೂ ಬಾಣೆ ಜಾಗಕ್ಕೂ ಕಂದಾಯ ವಿಧಿಸುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಶಾಸಕ ಅಪ್ಪಚ್ಚು ರಂಜನ್ ಅವರೂ ಕೂಡ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದು ಬೋಪಯ್ಯ ಹೇಳಿದರು.

ಡೀಮ್ಡ್ ಫಾರೆಸ್ಟ್ ಇಲ್ಲ

ಈ ಹಿಂದೆ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಸಂದರ್ಭ ಅರಣ್ಯ ಇಲಾಖೆಯಿಂದ ಕಿರುಕುಳ ನೀಡಲಾಗುತ್ತಿತ್ತು. ರಸ್ತೆ, ನೀರು ಯಾವದೇ ಸೌಲಭ್ಯ ನೀಡಲಾಗುತ್ತಿರಲಿಲ್ಲ. ಈ ಬಗ್ಗೆ ಸರಕಾರದ ಗಮನ ಸೆಳೆದು ಡೀಮ್ಡ್ ಫಾರೆಸ್ಟ್ ಎಂಬದನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬೋಪಯ್ಯ ಹೇಳಿದರು.

ರಸ್ತೆಗೆ ವಿಶೇಷ ಪ್ಯಾಕೇಜ್

ಮೊದಲ ಬಾರಿಗೆ ವೀರಾಜಪೇಟೆ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಅಲ್ಲಿನ ರಸ್ತೆಗಳ ದುಸ್ಥಿತಿ ವಾಹನಗಳು ಸಂಚರಿಸದ ರೀತಿಯಲ್ಲಿತ್ತು. ರಸ್ತೆ ಕಾಮಗಾರಿಗೆಂದೇ ಪ್ರಯತ್ನ ಪಟ್ಟು ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ‘ವಿಶೇಷ ಪ್ಯಾಕೇಜ್’ನಡಿ ಅನುದಾನ ಒದಗಿಸುವ ಕಾರ್ಯ ಮಾಡಲಾಗಿದೆ. ಮೊದಲಿಗೆ ರೂ. ೨೫ ಕೋಟಿ, ನಂತರ ೫೦, ಬಳಿಕ ೧೦೦ ಕೋಟಿ ಅನುದಾನ ವಿಶೇಷ ಪ್ಯಾಕೇಜ್‌ನಡಿ ಕೊಡಗಿಗೆ ಬಂದಿದೆ. ಮಧ್ಯದಲ್ಲಿ ಸರಕಾರ ಬದಲಾವಣೆಯಾದಾಗ ಒಂದು ಬಾರಿ ಸಿದ್ದರಾಮಯ್ಯ ಅವರು ನೀಡಿದ್ದರು. ಮತ್ತೆ ನಿಂತು ಹೋಗಿತ್ತು. ಇದೀಗ ಮತ್ತೆ ಅನುದಾನ ಬರುತ್ತಿದೆ ಎಂದು ಬೋಪಯ್ಯ ತಿಳಿಸಿದರು.

ಕ್ರೀಡೆಗೆ ಪ್ರೋತ್ಸಾಹ

ಕೊಡಗು ಕ್ರೀಡಾಪಟುಗಳ ತವರೂರು, ಅದರಲ್ಲೂ ಹಾಕಿಗೆ ಹೆಚ್ಚಿನ ಪ್ರಾಶಸ್ತö್ಯ ನೀಡಲಾಗಿದೆ. ಇಲ್ಲಿನ ಹಾಕಿ ಕಲಿಗಳು ರಾಜ್ಯ, ರಾಷ್ಟç, ಅಂತರರಾಷ್ಟಿçಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

(ಮೊದಲ ಪುಟದಿಂದ) ಆದರೆ, ಕೊಡಗಿನಲ್ಲಿ ಸುಸಜ್ಜಿತವಾದ ಟರ್ಫ್ ಮೈದಾನಗಳು ಇರಲಿಲ್ಲ. ಆಗಿನ ಕೇಂದ್ರ ಸಚಿವ ಧನಂಜಯಕುಮಾರ್ ಅವರೊಂದಿಗೆ ವ್ಯವಹರಿಸಿ, ವಿಶೇಷ ಪ್ರಯತ್ನದಿಂದಾಗಿ ಪ್ರಥಮ ಬಾರಿಗೆ ಮಡಿಕೇರಿಯಲ್ಲಿ ಟರ್ಫ್ ಮೈದಾನ ನಿರ್ಮಾಣ ಮಾಡಲಾಯಿತು. ನಂತರದಲ್ಲಿ ಪೊನ್ನಂಪೇಟೆಯಲ್ಲಿ ಟರ್ಫ್ ನಿರ್ಮಾಣವಾಗಿದ್ದು, ಇದರಿಂದಾಗಿ ಬಹಳಷ್ಟು ಕ್ರೀಡಾಪಟುಗಳಿಗೆ ಅನುಕೂಲವಾಗುತ್ತಿದೆ. ಇದಿಗ ಕೂಡಿಗೆಯಲ್ಲಿಯೂ ಟರ್ಫ್ ಆಗಿದ್ದು, ಇನ್ನೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಶಾಲಾ-ಕಾಲೇಜಿಗೆ ಕಟ್ಟಡ

ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ ಮಕ್ಕಂದೂರು, ಮೂರ್ನಾಡು, ಚೆನ್ನಯ್ಯನಕೋಟೆ ಸೇರಿದಂತೆ ಐದು ಕಡೆಗಳಲ್ಲಿ ಪ್ರೌಢ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ. ನಂತರದಲ್ಲಿ ನಾಪೋಕ್ಲು ಹಾಗೂ ವೀರಾಜಪೇಟೆಯಲ್ಲಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸ್ವಂತ ಕಟ್ಟಡಗಳಿಲ್ಲದ್ದನ್ನು ಮನಗಂಡು ಎರಡು ಕಾಲೇಜುಗಳಿಗೂ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮೊದಲು ಶಾಲಾ-ಕಾಲೇಜುಗಳಿಗೆ ಮಂಜೂರಾತಿ ಮಾತ್ರ ನೀಡಲಾಗುತ್ತಿತ್ತು, ಇದೀಗ ಅದನ್ನು ಮಾರ್ಪಡಿಸಿ ಮೂಲಭೂತ ಸೌಕರ್ಯಗಳೊಂದಿಗೆ ಮಂಜೂರಾತಿ ನೀಡುವ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.

ಸಂತ್ರಸ್ತರಿಗೆ ನೆರವು

೨೦೧೮ರ ನಂತರ ಕೊಡಗು ಸೇರಿದಂತೆ ರಾಜ್ಯದಾದ್ಯಂತ ಅತಿವೃಷ್ಟಿ ಸಂಭವಿಸುತ್ತಲೇ ಇದೆ. ೨೦೧೮ರಲ್ಲಿ ದುರಂತ ಆದ ಸಂದರ್ಭ ಪರಿಹಾರ ಕಾರ್ಯಕ್ಕೆ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅಡಿಪಾಯ ಹಾಕಿದರು. ಅದನ್ನು ಮುಂದುವರಿಸುತ್ತಾ ಎಲ್ಲ ಕಡೆಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಕೃಷಿ ಫಸಲು ಹಾನಿಗೆ ಸಂಬAಧಿಸಿದAತೆ ಯಾವುದೇ ತ್ರಾಸಿಲ್ಲದೆ ನೇರವಾಗಿ ರೈತರ ಖಾತೆಗೆ ಪರಿಹಾರ ನೀಡುವ ಕಾರ್ಯವಾಗಿದೆ. ಕಳೆದ ಬಾರಿ ೪೨ಸಾವಿರ ಮಂದಿಗೆ ೭೨ ಕೋಟಿ ನೀಡಲಾಗಿದ್ದರೆ, ಈ ಬಾರಿ ಈಗಾಗಲೇ ೫೨ ಸಾವಿರ ಮಂದಿಗೆ ೧೨೯ ಕೋಟಿ ನೀಡಲಾಗಿದೆ. ಹೆಕ್ಟೇರ್‌ಗೆ ೧೮ಸಾವಿರ ಇದ್ದುದನ್ನು ೩೪ ಸಾವಿರಕ್ಕೆ ಏರಿಸಲಾಗಿದೆ. ರಾಜ್ಯ ಸರಕಾರದಿಂದಲೂ ೧೦ ಸಾವಿರ ಇದ್ದುದನ್ನು ೨೦ ಸಾವಿರಕ್ಕೆ ಏರಿಕೆ ಮಾಡಲಾಗಿದೆ. ರೈತರ ಖಾತೆಗೆ ನೇರವಾಗಿ ಪರಿಹಾರ ಬರುತ್ತಿರುವದರಿಂದ ಬವಣೆ ತಪ್ಪಿದಂತಾಗಿ ರೈತರು ಸಂತೋಷಪಡುವAತಾಗಿದೆ ಎಂದು ಬೋಪಯ್ಯ ಹೇಳಿದರು.

ಸವಾಲು ಎದುರಿಸಿದ್ದೇವೆ

ಕೋವಿಡ್ ಸಂದರ್ಭದಲ್ಲಿ ಜಿಲ್ಲೆಗೆ ಹೊಂದಿಕೊAಡAತೆ ಇರುವ ಕೇರಳ ಗಡಿಭಾಗದ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ ಕೋವಿಡ್ ಹರಡದಂತೆ ನಿಗಾ ವಹಿಸಲಾಗಿದೆ. ಜನರ, ಸಂಘ ಸಂಸ್ಥೆಗಳ ಸಹಕಾರದಿಂದ ಸಾವು- ನೋವುಗಳು ಹೆಚ್ಚಾಗದಂತೆ ಕ್ರಮ ವಹಿಸಲಾಗಿದೆ. ಸೂಕ್ತ ಸಮಯದಲ್ಲಿ ಲಸಿಕೆ ನೀಡುವದರೊಂದಿಗೆ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಹಾಡಿಗಳಲ್ಲಿ ಲಸಿಕೆ ನಿರಾಕರಣೆ ಮಾಡಿದ ಸಂದರ್ಭ ಅವರುಗಳ ಮನವೊಲಿಸಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ ಎಂದು ಶಾಸಕರು ನುಡಿದರು.

ದೇವಾಲಯಗಳ ಅಭಿವೃದ್ಧಿ

ಜಿಲ್ಲೆಯಲ್ಲಿ ಮುಜರಾಯಿ ದೇವಾಲಯಗಳನ್ನು ಹೊರತುಪಡಿಸಿ ಇತರ ದೇವಾಲಯಗಳ ಅಭಿವೃದ್ಧಿಗೆ ಸುಮಾರು ೮ ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ. ತಲಕಾವೇರಿ ಅಭಿವೃದ್ಧಿಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾವೇರಿ ಪ್ರಾಧಿಕಾರ ರಚನೆ ಮಾಡಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಅದು ಸಾಲದಿದ್ದಾಗ ಮತ್ತೆ ಮುಖ್ಯಮಂತ್ರಿಗಳ ಗಮನ ಸೆಳೆದು ೧೭ ಕೋಟಿ ಹೆಚ್ಚುವರಿ ಅನುದಾನ ಒದಗಿಸಿದಲ್ಲದೆ, ಜೀರ್ಣೋದ್ಧಾರ ಪೂರ್ಣಗೊಳಿಸಿ ೧.೬೦ ಕೋಟಿ ಹಣ ಉಳಿತಾಯ ಮಾಡಿದ್ದೆವು. ಆದರೆ, ಇದೀಗ ಒಂದು ಪೈಸೆ ಕೂಡ ಇಲ್ಲವಾಗಿದೆ ಎಂದು ವಿಷಾದಿಸಿದರು.

ಪ್ರವಾಸೋದ್ಯಮಕ್ಕೆ ಆದ್ಯತೆ

ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಒತ್ತಾಸೆ ನೀಡಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ನಿಯಮ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ದಕ್ಷಿಣ ಕೊಡಗಿನ ಹೋಂಸ್ಟೇಗೆ ಉಗ್ರರು ಬಂದು ಹೋಗಿರುವ ಬಗ್ಗೆ ಉದಾಹರಿಸಿದರು.

ಸಮಗ್ರ ಅಭಿವೃದ್ಧಿಗೆ ಯೋಜನೆ

ಪ್ರಧಾನಿ ಮೋದಿ ಅವರ ಆಶಯದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ಅನುಷ್ಠಾನಗೊಳಿಸಿ ಯಶಸ್ಸು ಕಂಡಿದ್ದೇವೆ. ಬಡವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆಯಿಂದ ಹಿಂಪಡೆದಿದ್ದು, ಆದ್ಯತೆಯಾನುಸಾರ ಹಂಚಿಕೆ ಮಾಡಲಾಗುವದು. ಈ ಬಾರಿ ಮಳೆಯಿಂದಾಗಿ ಹಲವಷ್ಟು ಕೆಲಸಗಳಾಗಿಲ್ಲ. ಕೆಲಸ ಆರಂಭ ಮಾಡುತ್ತಿರುವಂತೆಯೇ ಕ್ವಾರೆ ಹಾಗೂ ಲಾರಿ ಮುಷ್ಕರದಿಂದಾಗಿ ಮತ್ತೆ ಸಮಸ್ಯೆಯಾಗಿದೆ. ಜನರಿಗೆ ಬಿಜೆಪಿ ಹಾಗೂ ಸರಕಾರದ ಮೇಲೆ ವಿಶ್ವಾಸವಿದೆ. ರಾಷ್ಟçದ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಬರಬೇಕೆಂಬ ನಿರೀಕ್ಷೆಯಲ್ಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಸಾಧನೆ ಮುಂದಿಡುತ್ತೇವೆ

ಮುAದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರ ಮಾಡಿದ ಸಾಧನೆಯನ್ನು ಮತದಾರರ ಮುಂದಿಡುತ್ತೇವೆ. ದೇಶದ ಅಭಿವೃದ್ಧಿ ಮತ್ತು ಭದ್ರತೆ ಹಿತದೃಷ್ಟಿಯಿಂದ ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಸಾಮಾಜಿಕ ಅಸಮತೋಲನ, ಮತಾಂತರ ಪಿಡುಗು ದೇಶದ ಭದ್ರತೆಗೆ ಧಕ್ಕೆ ತರುತ್ತದೆ. ಹಾಗಾಗಿ ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇವೆ, ನ್ಯಾಯಾಲಯ ಕೂಡ ಇದಕ್ಕೆ ಬದ್ಧವಾಗಿದೆ ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಶ್ವತ ಪರಿಹಾರಕ್ಕೆ ಕ್ರಮ

ಜಿಲ್ಲೆಯಲ್ಲಿ ಸಮಸ್ಯೆಗಳಿವೆ. ವೀರಾಜಪೇಟೆ ತಾಲೂಕಿನಲ್ಲಿ ಜನರು ರಸ್ತೆ ಕೇಳುತ್ತಾರೆ. ಎರಡು ವರ್ಷಗಳಿಂದ ಅತಿವೃಷ್ಟಿ, ಕೋವಿಡ್‌ನಿಂದಾಗಿ ಕೆಲಸ ಮಾಡಲಾಗಿಲ್ಲ. ಇದೀಗ ಸಾಕಷ್ಟು ರೀತಿಯಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳಾಗಿವೆ. ಬಹಳ ಹಿಂದಿನಿAದಲೇ ಇರುವ ಮಾನವ-ಕಾಡಾನೆ ಸಂಘರ್ಷ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೈಲ್ವೇ ಬ್ಯಾರಿಕೇಡ್ ಅಳವಡಿಕೆಗೆ ರೂ.೧೦೦ ಕೋಟಿ ಬಿಡುಗಡೆ ಮಾಡಲಾಗಿದೆ. ವೀರಾಜಪೇಟೆಗೆ ಹೆಚ್ಚಿನ ಪಾಲು ನೀಡಲಾಗಿದೆ. ಸಾವನ್ನಪ್ಪಿದವರಿಗೆ ಪರಿಹಾರ ಮೊತ್ತವನ್ನು ೫ರಿಂದ ೭ಲಕ್ಷಕ್ಕೆ ಏರಿಸಲಾಗಿದೆ. ಹುಲಿ ಸೆರೆಗೆ ಅನುಮತಿ ನೀಡುವದರೊಂದಿಗೆ ಟಾಸ್ಕ್ ಫೋರ್ಸ್ಗಳನ್ನು ರಚನೆ ಮಾಡಲಾಗಿದೆ. ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಲಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಸೂಪರ್ ಸ್ಪೆಷಾಲಿಟಿ ಆಗಲಿದೆ

ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆ ಇದೆ, ಈ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಅವರು ಸದನದಲ್ಲಿ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ೪೫೦ ಹಾಸಿಗೆ ಸಾಮರ್ಥ್ಯವುಳ್ಳ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ. ಸ್ಪೆಷಾಲಿಟಿ ಆಸ್ಪತ್ರೆಯ ಜನರ ಬೇಡಿಕೆಗಳಿಗೆ ಸ್ಪಂದನ ಸಿಗಲಿದೆ. ಜಿಲ್ಲೆಯಲ್ಲಿ ವೈದ್ಯರ ಕೊರತೆಗೆ ಈ ಹಿಂದೆ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ ಪ್ರತಿ ವೈದ್ಯರು ಆರಂಭದಲ್ಲಿ ಎರಡು ವರ್ಷಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮ ಕಾರಣವಾಗಿದೆ. ಯಾರು ಗ್ರಾಮೀಣ ಪ್ರದೇಶದಲ್ಲಿ ಸೇವೆಗೆ ತಯಾರಿಲ್ಲ ಇದರಿಂದಾಗಿ ಸಮಸ್ಯೆಯಾಗುತ್ತಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ನಿವೇಶನಕ್ಕೆ ಜಾಗ

ನಿವೇಶನರಹಿತರಿಗೆ ನಿವೇಶನ ನೀಡುವ ಸಲುವಾಗಿ ಜಾಗ ಗುರುತಿಸಲಾಗುತ್ತಿದೆ. ಕೆದಮುಳ್ಳೂರಿನಲ್ಲಿ ಈಗಾಗಲೇ ಕೆಲವರಿಗೆ ನೀಡಲಾಗಿದೆ. ಚುನಾವಣೆಗೂ ಮುನ್ನ ಅರ್ಹರಿಗೆ ನಿವೇಶನ ನೀಡುವ ಕಾರ್ಯ ಆಗಲಿದೆ ಎಂದರು. ಬಾಳೆಯಲ್ಲಿ ಗುಡಿಸಲು ಕಟ್ಟಿಕೊಂಡವರಿಗೆ ಬಹುತೇಕರಿಗೆ ಮನೆಗಳಿವೆ. ಬೇರೆ ಉದ್ದೇಶಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಮನೆ ಇಲ್ಲದವರಿಗೆ ಜಾಗ ಲಭ್ಯವಿರುವೆಡೆ ನಿವೇಶನ, ಮನೆ ಕಟ್ಟಿಕೊಳ್ಳಲು ಅನುದಾನ ನೀಡಲಾಗುವದು. ಆದರೆ ಅವರುಗಳು ಅಲ್ಲಿಗೆ ತೆರಳಲು ತಯಾರಿರಬೇಕು. ಕರಡಿಗೋಡಿನಲ್ಲಿರುವವರಿಗೆ ಜಾಗ ಗುರುತಿಸಿಕೊಟ್ಟರೂ ಯಾರೂ ಹೋಗುತ್ತಿಲ್ಲ, ವಸ್ತುಸ್ಥಿತಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಮೊಗೇರ ಸಮುದಾಯದವರು ಇದೇ ಮೊದಲ ಬಾರಿಗೆ ಬೀದಿಗಿಳಿದು ನಿವೇಶನ ಕೇಳಿದ್ದಾರೆ. ಅವರ ಮನವಿಯನ್ನೂ ಪರಿಗಣಿಸಲಾಗುವದೆಂದು ಪ್ರಶ್ನೆಗೆ ಉತ್ತರಿಸಿದರು.

ಹಾರಂಗಿ ಮುಳುಗಡೆ ಪ್ರದೇಶಕ್ಕೆ ಸಂಬAಧಿಸಿದAತೆ ಒಂದಕ್ಕೆ ಮೂರು ಪಟ್ಟು ಜಾಗ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಅಷ್ಟೊಂದು ಜಾಗ ಜಿಲ್ಲೆಯಲ್ಲಿ ಇಲ್ಲ, ಇದು ಆಗುವ ವಿಚಾರವಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

ಒಂದು ಪಂಪ್‌ಗೆ ಉಚಿತ

ರೈತರು ಬಳಸುವ ೧೦ ಹೆಚ್‌ಪಿ ಸಾಮರ್ಥ್ಯದೊಳಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಸಂಬAಧ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಸುಮಾರು ೪೮ಕೋಟಿ ವಿದ್ಯುತ್ ಬಿಲ್ ಬಾಕಿಯಿದ್ದು, ಅದನ್ನು ಮನ್ನಾ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಕಡಿತಗೊಳಿಸಿದ ಸಂಪರ್ಕ ಮರು ಜೋಡಣೆಗೆ ಸೂಚಿಸಲಾಗಿದೆ. ಕೆಲವರು ೨-೩ ಪಂಪ್‌ಗಳನ್ನು ಬಳಕೆ ಮಾಡುತ್ತಿದ್ದು, ಈ ಬಗ್ಗೆ ರೈತರು ಪೂರ್ಣ ಮಾಹಿತಿ ನೀಡಬೇಕು. ಒಂದು ಪಂಪ್‌ಗೆ ಉಚಿತ ವಿದ್ಯುತ್ ಕಲ್ಪಿಸಲು ಕ್ರಮ ಆಗಲಿದೆ ಎಂದು ಉತ್ತರ ನೀಡಿದರು.

ಪ್ರಕೃತಿ ಮುಂದೆ ಆಟ ಇಲ್ಲ

ಜಮ್ಮಾ ಬಾಣೆಗೆ ಶಾಶ್ವತ ಪರಿಹಾರ ಆಗಿಲ್ಲವೆಂಬ ನೋವಿದೆ, ಪ್ರಯತ್ನ ಪಟ್ಟಾಗ ಅದಕ್ಕೆ ವಿರೋಧ ಮಾಡುವವರೂ ಇರುವದು ಬೇಸರ ತಂದಿದೆ. ಹೊಸದಾಗಿ ನಿರ್ಮಾಣ ಮಾಡಿದ ರಸ್ತೆ, ಸೇತುವೆಗಳು ಪ್ರಕೃತಿಯ ವ್ಯತಿರಿಕ್ತ ಪರಿಣಾಮದಿಂದಾಗಿ ಕೊಚ್ಚಿಹೋಗಿವೆ. ಇದು ಮುಗಿಯದ ಬವಣೆಯಾಗಿದೆ. ಪ್ರಕೃತಿಯ ಮುಂದೆ ಯಾರ ಆಟವು ನಡೆಯುವುದಿಲ್ಲ. ಎಷ್ಟು ಮಾಡಿದರೂ ಸಾಲುವದಿಲ್ಲವಲ್ಲ ಎಂಬ ಬೇಸರ ಇದೆ ಎಂದು ‘ಯಾವುದಾದರೂ ಕೆಲಸ ಆಗಿಲ್ಲವೆಂಬ ಬೇಸರವಿದೆಯೇ..?’ ಎಂಬ ಮಾಧ್ಯಮದವರ ಪ್ರಶ್ನೆಗೆ ಶಾಸಕ ಬೋಪಯ್ಯ ಈ ರೀತಿಯ ಉತ್ತರ ನೀಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಜೆ. ಮಂಜು ಇದ್ದರು. ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ ಸ್ವಾಗತಿಸಿ, ನಿರೂಪಿಸಿದರೆ, ನಿರ್ದೇಶಕ ಆನಂದ್ ಕೊಡಗು ವಂದಿಸಿದರು.