*ಗೋಣಿಕೊಪ್ಪ, ಜ. ೬: ತರಕಾರಿ ವ್ಯಾನ್ ಹಾಗೂ ಸ್ಕೂಟರ್ ನಡುವಿನ ಅಪಘಾತದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ೯ನೇ ತರಗತಿ ವಿದ್ಯಾರ್ಥಿ ಇರ್ಷಾದ್ ಎಂಬಾತನ ಮೇಲೆ ಈರುಳ್ಳಿ ಮೂಟೆ ಬಿದ್ದು ವಿದ್ಯಾರ್ಥಿಗೆ ಗಂಭೀರ ಗಾಯ ಉಂಟಾದ ಘಟನೆ ತಿತಿಮತಿ ಮುಖ್ಯರಸ್ತೆಯಲ್ಲಿ ನಡೆದಿದೆ.
ದ್ವಿಚಕ್ರ ಸವಾರರಾದ ರೋಷನ್ (೨೮) ಮತ್ತು ವೆಂಕಟ (೬೨) ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಗೋಣಿಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಣಸೂರಿನಿಂದ ಕೇರಳ ಮಾರ್ಗವಾಗಿ ಸಂಚರಿಸುತ್ತಿದ್ದ, ಈರುಳ್ಳಿ ಹಾಗೂ ಆಲೂಗಡ್ಡೆ ಸಾಗಿಸುತ್ತಿದ್ದ ಆಶೋಕ ಲೈಲ್ಯಾಂಡ್ ಗಾಡಿ ಹಾಗೂ ತಿತಿಮತಿ ಸಮೀಪದ ಎಡತೊರೆಯಿಂದ ದ್ವಿಚಕ್ರ ವಾಹನದ ನಡುವೆ ಈ ಅಪಘಾತ ಸಂಭವಿಸಿದೆ.
ಈ ಸಂದರ್ಭ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ೯ನೇ ತರಗತಿ ವಿದ್ಯಾರ್ಥಿ ಇರ್ಷಾದ್ ಮೇಲೆ ತರಕಾರಿ ವಾಹನ ಮಗುಚಿಕೊಂಡ ಹಿನ್ನೆಲೆ ಮೂಟೆಗಳು ಆತನ ಮೇಲೆ ಬಿದ್ದಿದೆ. ತಕ್ಷಣಕ್ಕೆ ಸಾರ್ವಜನಿಕರು ಸ್ಪಂದಿಸಿ ವಿದ್ಯಾರ್ಥಿ ದೇಹದ ಮೇಲೆ ಬಿದ್ದ ಮೂಟೆಯನ್ನು ತೆರವುಗೊಳಿಸಿ ಹೆಚ್ಚಿನ ಆಘಾತ ನಡೆಯುವುದನ್ನು ತಪ್ಪಿಸಿದ್ದಾರೆ. ದ್ವಿಚಕ್ರ ವಾಹನದ ಅತಿ ವೇಗದಿಂದಾಗಿ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ದ್ವಿಚಕ್ರ ಸವಾರ ರೋಷನ್ ಸ್ಥಿತಿ ಗಂಭೀರವಾಗಿದೆ.