ನಾಪೋಕ್ಲು, ಜ. ೫: ಯವಕಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಕಾಡಾನೆಗಳ ನಿಯಂತ್ರಣ ಕೈಗೊಳ್ಳುವಂತೆ ಹಾಗೂ ಗ್ರಾಮಸ್ಥರಿಗೆ ಸಂಕಷ್ಟ ತಂದೊಡ್ಡುತ್ತಿರುವ ಪುಂಡಾನೆಯನ್ನು ಸೆರೆಹಿಡಿಯುವಂತೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ೩೦ ಗ್ರಾಮಸ್ಥರ ಸಹಿ ಇರುವ ಮನವಿ ಪತ್ರವನ್ನು ನೀಡಿದರು.
ಕಕ್ಕಬ್ಬೆ - ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮವು ಬ್ರಹ್ಮಗಿರಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದ್ದು ಅರಣ್ಯ ಹಕ್ಕು, ಸಮುದಾಯ ಅರಣ್ಯ ಹಕ್ಕು ಪ್ರದೇಶಗಳನ್ನು ಹೊಂದಿದೆ. ಅರಣ್ಯದಂಚಿನಲ್ಲಿ ವಾಸವಾಗಿರುವ ಗಿರಿಜನರು ಕಾಡಾನೆಗಳ ಉಪಟಳಕ್ಕೆ ಈಡಾಗಿದ್ದಾರೆ. ತಡಿಯಂಡಮೊಳ್ ಬೆಟ್ಟ ಶ್ರೇಣಿಯು ಈ ವ್ಯಾಪ್ತಿಯಲ್ಲಿದ್ದು ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಕೃಷಿ ಫಸಲು ನಾಶವಾಗುತ್ತಿದೆ. ೩ ಮಂದಿ ಗ್ರಾಮಸ್ಥರು ಕಾಡಾನೆಗಳ ತುಳಿತಕ್ಕೆ ಬಲಿಯಾಗಿದ್ದಾರೆ. ಕೃಷಿಕರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ವಾಹನ ಚಾಲಕರು ಈ ವ್ಯಾಪ್ತಿಯಲ್ಲಿ ಭಯದಿಂದ ಸಂಚರಿಸುವAತಾಗಿದೆ. ಹಾಡಹಗಲೇ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು ಜನರು ಪ್ರಾಣಪಾಯದಿಂದ ಪಾರಾಗುತ್ತಿರುವ ಘಟನೆ ದಿನನಿತ್ಯದ ಸನ್ನಿವೇಶವಾಗಿದೆ. ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿಕರು ಬೆಳೆದ ಏಲಕ್ಕಿ, ಕಾಫಿ, ಬಾಳೆ, ಅಡಿಕೆ ನಾಶವಾಗಿದ್ದು ಸೂಕ್ತ ಪರಿಹಾರವನ್ನು ಒದಗಿಸಬೇಕು. ಅರಣ್ಯದಂಚಿನಲ್ಲಿರುವ ಗಿರಿಜನರ ಹಾಡಿಗೆ ತೆರಳುವ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಲ್ಯಾಂಪ್ ಸೊಸೈಟಿ ನಿರ್ದೇಶಕ ಕೆ.ಕೆ. ಪೊನ್ನಪ್ಪ, ಕೆ.ಎಂ. ಕಾವೇರಪ್ಪ, ಬೆಳೆಗಾರ ಅರೆಯಡ ರತ್ತು ಉಪಸ್ಥಿತರಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.
ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಅವರು ಮನವಿಯನ್ನು ಸ್ವೀಕರಿಸಿ ಉಪಟಳ ನೀಡುವ ಕಾಡಾನೆಯನ್ನು ಹಿಡಿಯುವುದಲ್ಲದೆ ನಷ್ಟ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.