ಮಡಿಕೇರಿ, ಜ. ೪: ಕೊಡಗಿನ ಪವಿತ್ರ ತಲಕಾವೇರಿ - ಭಾಗಮಂಡಲ ಹಾಗೂ ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯಗಳ ಆಡಳಿತ ನಿರ್ವಹಣೆಗೆ ತಕ್ಷಣ ವ್ಯವಸ್ಥಾಪನಾ ಸಮಿತಿಗಳು ರಚನೆಗೊಳ್ಳಬೇಕು ಎಂದು ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಪುಲಿಯಂಡ ಜಗದೀಶ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಈ ದೇಗುಲ ಆಡಳಿತ ವ್ಯವಸ್ಥೆ ಬಗ್ಗೆ ‘ಶಕ್ತಿ’ಯಲ್ಲಿ ಬಂದ ವರದಿಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮುಜರಾಯಿ ಕಾನೂನಿನಂತೆ ಆಗ ದೇವಸ್ಥಾನಗಳ ಆದಾಯವು ಆ ದೇವಾಲಯಗಳ ಬ್ಯಾಂಕ್ ಖಾತೆಗೆ ಜಮಾವಣೆಗೊಳ್ಳುತ್ತದೆ. ‘ಶಕ್ತಿ’ಯಲ್ಲಿ ಬಂದAತೆ ಆ ಹಣ ಸರಕಾರಕ್ಕೆ ಹೋಗುವುದಿಲ್ಲ. ದೇವಾಲಯ ಸಮಿತಿಗಳೇ ಭಕ್ತರಿಂದ ಬಂದ ಹಣವನ್ನು ಆಯಾ ದೇವಾಲಯಗಳಿಗೆ ಬಳಸುವ ವ್ಯವಸ್ಥೆಯಿದೆ ಎಂದು ಮಾಹಿತಿಯಿತ್ತರು.
ಅಲ್ಲದೆ ಇತ್ತೀಚೆಗೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಇಲ್ಲದೆ ಶ್ರೀ ಓಂಕಾರೇಶ್ವರ ದೇಗುಲ ನಿರ್ವಹಣೆಯಲ್ಲಿ ವ್ಯತ್ಯಾಸವಾಗಿರಬಹುದು. ‘ಶಕ್ತಿ’ಯಲ್ಲಿ ಬಂದAತೆ ಕಳೆದ ಏಳೆಂಟು ವರ್ಷಗಳಿಂದ ಯಾರೂ ಹೇಳುವವರಿಲ್ಲ ಎನ್ನುವ ಸ್ಥಿತಿಯಿರಲಿಲ್ಲ. ಏಕೆಂದರೆ, ಹಿಂದಿನ ಸಮಿತಿಯಿಂದ ಸಾಕಷ್ಟು ಹೊಣೆಹೊತ್ತು ಜವಾಬ್ದಾರಿಕೆಯಿಂದ ಕಾರ್ಯನಿರ್ವಹಸಲಾಗಿದೆ. ಮುಂದೆಯೂ ನೂತನ ಸಮಿತಿಗಳು ರಚನೆಗೊಂಡರೆ ಮಾತ್ರ ಸಮರ್ಪಕ ಆಡಳಿತ ವ್ಯವಸ್ಥೆ ಕೈಗೊಳ್ಳಬಹುದಾಗಿದೆ ಎಂದು ಜಗದೀಶ್ ಅಭಿಪ್ರಾಯಪಟ್ಟರು.