ಮಡಿಕೇರಿ, ಜ. ೪: ಕರ್ನಾಟಕ ಮುಸ್ಲಿಂ ಜಮಾಅತ್ (ಕೆ.ಎಂ.ಜೆ) ಹಾಗೂ ಎಸ್.ವೈ.ಎಸ್.ಎಸ್.ಎಸ್.ಎಫ್ ಸಂಘಟನೆಗಳ ಸಂಯುಕ್ತ ಸದಸ್ಯತ್ವ ಅಭಿಯಾನವು ರಾಜ್ಯಾದ್ಯಂತ ನಡೆಯುತ್ತಿದ್ದು, ತಾ.೬ ರಂದು ಕೊಡಗು ಜಿಲ್ಲೆಯಲ್ಲಿಯೂ ಇದರ ಪ್ರಯುಕ್ತ ‘ಮೆಂಬರ್‌ಶಿಪ್ ಡೇ’ ಆಚರಿಸಲಾಗುವುದಾಗಿ ಎಸ್.ವೈ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಯಿದ್ದೀನ್ ಅವರು ಮಾಹಿತಿ ನೀಡಿದರು. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಧಾರ್ಮಿಕ, ಸಾಮಾಜಿಕ ಹಾಗೂ ಮುಸ್ಲಿಂ ಸಮಾಜದ ಸಾರ್ವತ್ರಿಕ ವಿಚಾರಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಘಟನೆಗಳು ಮುಸಲ್ಮಾನರ ಸಾರ್ವಜನಿಕ ವಿಚಾರಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಬೆನ್ನೆಲುಬಾಗಿವೆ. ಕೆ.ಎಂ.ಜೆ ಸಂಘಟನೆಯು ‘ಒಳಿತಿನ ಹಾದಿಯಲ್ಲಿ ನಿಮ್ಮದೂ ಒಂದು ಹೆಜ್ಜೆ ಇರಲಿ’ ಎಂಬ ಶೀರ್ಷಿಕೆಯಡಿಯಲ್ಲಿ ೪೭ ವರ್ಷ ಮೇಲ್ಪಟ್ಟವರಿಗೆ ಸದಸ್ಯತ್ವ ನೀಡುತ್ತದೆ. ೩೨ ರಿಂದ ೪೭ ವರ್ಷದವರಿಗೆ ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಎಸ್.ವೈ.ಎಸ್ ಕೂಡ ಸದಸ್ಯತನ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಸಮಿತಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು. ತಾ.೬ ರಂದು ಕೊಡಗು ಜಿಲ್ಲೆಯಲ್ಲಿನ ಗ್ರಾಮಗ್ರಾಮಗಳಿಗೆ ತೆರಳಿ ಈ ೨ ಸಂಘಟನೆಗಳಿಗೆ ಸದಸ್ಯರನ್ನು ಸೇರಿಸುವ ಅಭಿಯಾನ ನಡೆಯಲಿದೆ. ದುಶ್ಚಟದಲ್ಲಿ ತೊಡಗಿಸಿಕೊಂಡವರು ಹಾಗೂ ಸಮಾಜಘಾತುಕರಿಗೆ ಯಾವುದೇ ಕಾರಣಕ್ಕೂ ಸದಸ್ಯತ್ವ ನೀಡುವುದಿಲ್ಲ ಎಂದು ಮೊಯಿದ್ದೀನ ಅವರು ಹೇಳಿದರು.

ಸುಮಾರು ೪ ದಶಕಗಳಿಂದ ಕರ್ನಾಟಕದಲ್ಲಿ ಕಾರ್ಯಚರಿಸುತ್ತಿರುವ ಎಸ್.ಎಸ್.ಎಫ್ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲೂ ಸಕ್ರಿಯವಾಗಿದೆ. ಯುವ ತಲೆಮಾರನ್ನು ಒಳಿತಿನ ಹಾದಿಯಲ್ಲಿ ಕಾರ್ಯಾಚರಿಸಲು ಪ್ರೇರಣೆ ನೀಡಿ ರಾಷ್ಟçಕ್ಕೆ ಹಾಗೂ ಸಮಾಜಕ್ಕೆ ಮಾದರಿ ಜೀವನ ನಡೆಸುವ ಯುವ ಪಡೆಯನ್ನು ಸಮರ್ಪಿಸಲು ಯಶಸ್ವಿಯಾಗಿ ಕಾರ್ಯಚರಿಸುತ್ತಿದೆ ಎಂದರು. ೧೨ ರಿಂದ ೩೨ ವರ್ಷದೊಳಗಿನ ವಿದ್ಯಾರ್ಥಿಗಳು ಸಹಿತವಿರುವ ಯುವಕರನ್ನು ‘ವ್ಯರ್ಥವಾಗದಿರಲಿ ಯವ್ವನ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಎಸ್.ಎಸ್.ಎಫ್ ಸಂಘಟನೆಗೆ ಸೇರ್ಪಡೆಗೊಳಿಸಲಾಗುವುದು. ಈ ಎಲ್ಲಾ ಸಂಘಟನೆಗಳ ಸದಸ್ಯತ್ವ ಪೂರ್ಣಗೊಂಡ ನಂತರ ವಿವಿಧ ಘಟಕಗಳಲ್ಲಿ ನೂತನ ಸಮಿತಿಗಳು ರಚನೆಗೊಳ್ಳಲಿದ್ದು, ಲಕ್ಷಾಂತರ ಸದಸ್ಯರನ್ನೊಳಗೊಂಡ ಸಂಘಟನೆಯನ್ನು ಜಿಲ್ಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆ.ಎಂ.ಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಎಸ್.ಎಸ್.ಎಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಹೊಸತೋಟ, ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿ ಸಿ.ಎಂ ಹಂಸ, ಎಸ್.ವೈ.ಎಸ್ ಜಿಲ್ಲಾ ಖಜಾಂಚಿ ಅಬ್ದುಲ್ಲ ನೆಲ್ಲಿಹುದಿಕೇರಿ, ಎಸ್.ಎಸ್.ಎಫ್ ಜಿಲ್ಲಾ ಕಾರ್ಯದರ್ಶಿ ಮುಜೀಬ್ ಕೋಂಡAಗೇರಿ ಅವರುಗಳು ಹಾಜರಿದ್ದರು.