ಮಡಿಕೇರಿ, ಜ. ೪ : ಹಾವೇರಿಯಲ್ಲಿ ನಡೆಯಲಿರುವದು ಸಾಹಿತ್ಯ ಸಮ್ಮೇಳನ ಅಲ್ಲ; ಇದೊಂದು ರಾಜಕೀಯ ಪಕ್ಷಗಳ ಸಮ್ಮೇಳನವಾಗಿದೆ ಎಂದು ಟೀಕಿಸಿರುವ ಸಾಹಿತಿ ಹಾಗೂ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಸಮ್ಮೇಳನವನ್ನು ಧಿಕ್ಕರಿಸುವದಾಗಿ ಹೇಳಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೈಸೂರು ಮಹರಾಜರು ಕಟ್ಟಿ ಬೆಳೆಸಿದ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಬೇಕು. ಸಮ್ಮೇಳನಗಳು ಕನ್ನಡಿಗರ ಸಮ್ಮೇಳನಗಳಾಗಬೇಕು. ಆದರೆ ಈ ಬಾರಿ ರಾಜಕೀಯ ಪಕ್ಷಗಳ, ಆಳುವ ಪಕ್ಷವನ್ನು ಓಲೈಸುವ ಸಮ್ಮೇಳನವಾಗುತ್ತಿದೆ. ಜಾತಿ, ಧರ್ಮ, ಭೇದವನ್ನು ಬಿತ್ತುತ್ತಿರುವ ಸಮ್ಮೇಳನವಾಗುತ್ತಿದ್ದು, ಕನ್ನಡಿಗರ ಭಾವನೆಗಳನ್ನು ಕೆರಳಿಸುತ್ತಿದೆ, ಈ ತಾರತಮ್ಯ ಕನ್ನಡಿಗರ ಹೃದಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರದ ಪಾಲೇನು.?

ಈ ಬಾರಿಯ ಸಮ್ಮೇಳನಕ್ಕೆ ಸರಕಾರದಿಂದ ರೂ.೨೦ ಕೋಟಿ ಅನುದಾನ ನೀಡಲಾಗಿದೆ. ಇದುವರೆಗೆ ಇಷ್ಟೊಂದು ಹೆಚ್ಚಿನ ಮೊತ್ತ ನೀಡಿರಲಿಲ್ಲ, ಜನರ ತೆರಿಗೆಯ ಹಣವನ್ನು ನೀಡಿ ಸರಕಾರ ಸುಮ್ಮನೆ ಕೂರುವದಲ್ಲ. ಸಮ್ಮೇಳನದ ಬಗ್ಗೆ ಯಾವದೇ ಮಾರ್ಗಸೂಚಿ ನೀಡದೆ, ಪೂರ್ವಬಾವಿ ಸಭೆ ನಡೆಸದೆ ತನ್ನ ಪಾಡಿಗೆ ತಾನಿದ್ದರೆ ಹೇಗೇ.? ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಆಗುತ್ತಿರುವ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪಾಲು ಏನು ಎಂದು ಅಡಗೂರು ಪ್ರಶ್ನಿಸಿದರು.

ಸಂತೋಷ ಪಡುವ ಹಬ್ಬ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದುವರೆಗೆ ಹಲವಾರು ಮಂದಿ ಅಧ್ಯಕ್ಷರುಗಳು ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಆದರೆ ಈ ಬಾರಿ ಯಾವದೇ ಪೂರ್ವಬಾವಿ ಸಭೆ ನಡೆಸಿಲ್ಲ. ಕನ್ನಡಕ್ಕಾಗಿ ಸೇವೆ ಸಲ್ಲಿಸಿದವರನ್ನು ಕರೆದು ಸಲಹೆ ಸೂಚನೆ ಪಡೆದುಕೊಂಡಿಲ್ಲ, ‘ನಾನು ಮಾಡ್ತೀನಿ, ನೋಡಿ’ ಎಂದು ಅಧ್ಯಕ್ಷರು ಹೇಳುವದು ಸರಿಯಾದ ಕ್ರಮವಲ್ಲ. ಸಮ್ಮೇಳನ ಎಲ್ಲರನ್ನೂ ಒಳಗೊಂಡ ಹಬ್ಬ ಆಗಬೇಕು, ಸಾರಸ್ವತ ಲೋಕ ಸಂತೋಷ ಪಡುವ ಹಬ್ಬ ಆಗಬೇಕು ಎಂದು ‘ಹಳ್ಳಿ ಹಕ್ಕಿ’ ವಿಶ್ವನಾಥ್ ಅಭಿಪ್ರಾಯಿಸಿದರು.

ಬಹುತ್ವದ ಸಾಹಿತ್ಯ

ಸಾಹಿತ್ಯ ವಾಗ್ನೇಯಿ ಜಾತಿಯಿಂದ ಹುಟ್ಟಿಕೊಂಡಿದ್ದಲ್ಲ, ಅದು ಬಹುತ್ವದ ಸಾಹಿತ್ಯ, ಅದನ್ನು ಬೇರ್ಪಡಿಸುವ ಸಮ್ಮೇಳನ ಆಗಬಾರದು. ಹಿಂದೂ, ಮುಸ್ಲಿಂ, ಕ್ರೆöÊಸ್ತ, ದಲಿತ, ಮಹಿಳೆಯರು ಸೇರಿದಂತೆ ಎಲ್ಲರೂ ತಮ್ಮ ಅನುಭವವನ್ನು ಸಾಹಿತ್ಯ ವಲಯಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಇದೀಗ ಎಲ್ಲವನ್ನು ಬಿಟ್ಟು ಸಮ್ಮೇಳನ ಆಗುತ್ತಿದೆ. ಸಮ್ಮೇಳನದಲ್ಲಿ ೮೫ ಮಂದಿಗೆ ಸನ್ಮಾನ ಮಾಡಲಾಗುತ್ತಿದ್ದು, ಓರ್ವ ಕೂಡ ಮುಸ್ಲಿಂ, ದಲಿತ ಸಮುದಾಯದವರಿಲ್ಲ. ಕೇಂದ್ರ ಪ್ರಶಸ್ತಿ ಪುರಸ್ಕೃತ ಕನ್ನಡಿಗರನ್ನು ಗುರುತಿಸಿ ಗೌರವಿಸುವ ಕಾರ್ಯ ಕೂಡ ಮಾಡುತ್ತಿಲ್ಲ.

(ಮೊದಲ ಪುಟದಿಂದ) ಏಕೆ ಈ ವಿಭಿನ್ನತೆ ಎಂದು ವಿಶ್ವನಾಥ್ ಪ್ರಶ್ನಿಸಿದರು.

ಬಹಿಷ್ಕಾರ ಮಾಡಿದ್ದಾರೆ

ಸಮ್ಮೇಳನದಲ್ಲಿ ಲೇಖಕಿಯರನ್ನು ಕಡೆಗಣಿಸಲಾಗಿದೆ. ಈಗಾಗಲೇ ಹಲವಾರು ಲೇಖಕಿಯರು ಬಹಿಷ್ಕಾರ ಹಾಕಿದ್ದಾರೆ. ಲೇಖಕಿಯರ ಸಂಘದ ಅಧ್ಯಕ್ಷೆ ಪುಷ್ಪ ಕೂಡ ಬಹಿಷ್ಕಾರ ಹಾಕಿದ್ದಾರೆ. ರಾಜ್ಯದಲ್ಲಿ ೮೦ಲಕ್ಷ ಮಂದಿ ಕನ್ನಡ ಮಾತನಾಡುವ ಮುಸ್ಲಿಮರಿದ್ದಾರೆ. ೧೪ಲಕ್ಷ ಮಂದಿ ಬ್ಯಾರಿ ಸಮುದಾಯದವರಿದ್ದಾರೆ. ಇವರೆಲ್ಲರನ್ನೂ ಸೇರಿಸಿಕೊಂಡರೆ ಮಾತ್ರ ಸಾರಸ್ವತ ಲೋಕವಾಗುವದು. ಆದರೆ ಇಲ್ಲಿ ಎಲ್ಲರಿಗೂ ಅವಮಾನ ಮಾಡಲಾಗಿದೆ ಎಂದು ಬೇಸರಿಸಿದರು.