ಸೋಮವಾರಪೇಟೆ, ಜ. ೨: ತಾಲೂಕಿನ ಮಾದಾಪುರ, ಬೇಳೂರು ಮತ್ತು ಹರದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೇಶನ ರಹಿತರಿಗೆ ವಿತರಿಸಬೇಕೆಂದು ಆಗ್ರಹಿಸಿ ಎಐಟಿಯುಸಿ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಅನೇಕ ವರ್ಷಗಳಿಂದ ಕೃಷಿ ಕಾರ್ಮಿಕರು ಸ್ವಂತ ನಿವೇಶನ ಮತ್ತು ಮನೆ ಇಲ್ಲದೆ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಮನೆ ನೀಡುವಂತೆ ಸ್ಥಳೀಯ ಪಂಚಾಯಿತಿ ಮೂಲಕ ಮನವಿ ಸಲ್ಲಿಸಿದರೂ, ಇಲ್ಲಿಯವರೆಗೆ ಕಾರ್ಯಗತವಾಗಿಲ್ಲ. ಕೂಡಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಗುರುತಿಸಿ ನಿವೇಶನ ನೀಡುವಂತೆ ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ. ಸೋಮಪ್ಪ ಆಗ್ರಹಿಸಿದರು.

ಗರಗಂದೂರು ಗ್ರಾಮದ ಸರ್ವೆ ನಂ ೨೩೧/೧ರಲ್ಲಿ ೫೦.೨೨ ಏಕರೆ ಜಾಗ ಮತ್ತು ೨೨/೧ರಲ್ಲಿ ೧.೮೩ ಎಕರೆ ಪೈಸಾರಿ ಜಾಗ ಇದೆ. ಆ ಜಾಗವನ್ನು ನಿವೇಶನ ರಹಿತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವಂತೆ ಹಲವಾರು ಬಾರಿ ಸಂಬAಧಿಸಿದ ಇಲಾಖೆಯವರಿಗೆ ಮನವಿ ಮಾಡಿ ಹೋರಾಟ ನಡೆಸಲಾಗುತ್ತಿದೆ. ಆದ್ದರಿಂದ ಸಂಬAಧಿಸಿದ ಸ್ಥಳವನ್ನು ನಿವೇಶನ ರಹಿತರಿಗೆ ನೀಡುವಂತೆ ಹಾಗೂ ಮಾದಾಪುರ ಮತ್ತು ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗ ಗುರುತಿಸಿ ನಿವೇಶನ ರಹಿತರಿಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮನವಿಯನ್ನು ತಹಶೀಲ್ದಾರ್ ಎಸ್.ಎನ್. ನರಗುಂದ ಅವರಿಗೆ ನೀಡಲಾಯಿತು. ಈ ಸಂದರ್ಭ ಪ್ರಮುಖರಾದ ಶಬನಾ, ಸೋಮ, ಸರೋಜ, ಕುಸುಮ, ರಮೇಶ, ಸತೀಶ ಮತ್ತಿತರರು ಇದ್ದರು.