ಸೋಮವಾರಪೇಟೆ, ಜ. ೨: ಅಮೇರಿಕಾದಲ್ಲಿ ಸೂಪರ್ ಸ್ಪೆಷಲಿಸ್ಟ್ ಇನ್ ನೆಪ್ರೋಲಜಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಪುತ್ರ ಡಾ. ಕಾರ್ಯಪ್ಪ ಅವರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕಿಡ್ನಿ ಸಂಬAಧಿತ ರೋಗಿಗಳನ್ನು ತಪಾಸಣೆ ನಡೆಸಿ ಸೂಕ್ತ ವೈದ್ಯಕೀಯ ಸಲಹೆ ನೀಡಿದರು.

ಪಟ್ಟಣ ಮಾತ್ರವಲ್ಲದೇ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ಆಗಮಿಸಿದ್ದ ನೂರಾರು ರೋಗಿಗಳನ್ನು ತಪಾಸಣೆ ಮಾಡಿದ ಡಾ. ಕಾರ್ಯಪ್ಪ ಅವರು, ಸುಧಾರಿತ ಚಿಕಿತ್ಸೆ ಹಾಗೂ ಔಷಧಗಳ ಬಗ್ಗೆ ಸಲಹೆಗಳನ್ನು ನೀಡಿದರು.

ಇದರೊಂದಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಡಯಾಲಿಸಿಸ್, ಆಹಾರ ಪದ್ಧತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಎಲ್ಲಾ ರೋಗಿಗಳನ್ನು ಪರೀಕ್ಷಿಸಿ ಈವರೆಗೆ ತೆಗೆದುಕೊಳ್ಳುತ್ತಿರುವ ಔಷಧಿಗಳ ಹಿನ್ನೋಟವನ್ನು ಪರಿಶೀಲಿಸಿದರು. ಕೆಲ ರೋಗಿಗಳಿಗೆ ಈಗ ತೆಗೆದುಕೊಳ್ಳುವ ಚಿಕಿತ್ಸೆಯನ್ನೇ ಮುಂದುವರೆಸುವAತೆ ಸಲಹೆ ನೀಡಿದ ಡಾ. ಕಾರ್ಯಪ್ಪ ಅವರು, ಇನ್ನು ಕೆಲ ರೋಗಿಗಳಿಗೆ ಸುಧಾರಿತ ಔಷಧಿಗಳ ಬಗ್ಗೆ ಮಾಹಿತಿ ಒದಗಿಸಿದರು.

ಶಿಬಿರ ಆರಂಭಕ್ಕೂ ಮುನ್ನ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿ ಇಲ್ಲಿ ಲಭ್ಯವಿರುವ ಚಿಕಿತ್ಸಾ ಘಟಕಗಳನ್ನು ಪರಿಶೀಲಿಸಿದರು. ಘಟಕವನ್ನು ನಿರ್ವಹಿಸುವ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡಿದರು.

ಈ ಸಂದರ್ಭ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಿವಪ್ರಸಾದ್, ವೈದ್ಯರಾದ ಡಾ. ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಡಾ. ಕಾರ್ಯಪ್ಪ ಅವರು ತಾ. ೪ ರಂದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಬೆಳಿಗ್ಗೆ ೯.೩೦ ರಿಂದ ಕಿಡ್ನಿ ಸಂಬAಧಿತ ರೋಗಿಗಳನ್ನು ತಪಾಸಣೆ ಮಾಡಲಿದ್ದು, ಆಸಕ್ತರು ಆಗಮಿಸಿ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.